ಆದಿಚುಂಚನಗಿರಿ ಮಠಕ್ಕೆ ಭಾಗಮಂಡಲ ಕಾವೇರಿ ವಿದ್ಯಾಸಂಸ್ಥೆ ಆಸ್ತಿ ನೀಡಲು ವಿರೋಧ
ಕೊಡಗು

ಆದಿಚುಂಚನಗಿರಿ ಮಠಕ್ಕೆ ಭಾಗಮಂಡಲ ಕಾವೇರಿ ವಿದ್ಯಾಸಂಸ್ಥೆ ಆಸ್ತಿ ನೀಡಲು ವಿರೋಧ

July 28, 2018

ಮಡಿಕೇರಿ:  ಭಾಗಮಂಡಲದ ಕಾವೇರಿ ವಿದ್ಯಾಸಂಸ್ಥೆಗೆ ಸೇರಿದ ಎಲ್ಲಾ ಆಸ್ತಿಯನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಅಧೀನಕ್ಕೆ ಹಸ್ತಾಂತರಿಸುವುದಕ್ಕೆ ಸಂಸ್ಥೆಯ ಹಲವು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ವಿದ್ಯಾ ಸಂಘದ ಸದಸ್ಯ ಕುದು ಕುಳಿ ಭರತ್, ದಾನಿಗಳು ಹಾಗೂ ಸರ್ಕಾರ ನೀಡಿದ ಜಾಗ ಸೇರಿದಂತೆ ಸಂಸ್ಥೆಯ ವಶ ದಲ್ಲಿ 16.50 ಏಕರೆ ಜಾಗವಿದೆ. ಈ ಜಾಗ ದೊಂದಿಗೆ ಶಿಕ್ಷಣ ಸಂಸ್ಥೆಯನ್ನು ಆದಿ ಚುಂಚನಗಿರಿ ಮಹಾಸಂಸ್ಥಾನಕ್ಕೆ ಹಸ್ತಾಂತರಿ ಸುವುದು ಸಮರ್ಪಕವಲ್ಲ. ಹಸ್ತಾಂತರಿಸುವ ಅಭಿಲಾಷೆ ಇದ್ದಲ್ಲಿ 6.50 ಎಕರೆ ಜಾಗವನ್ನು ಮಾತ್ರ ಹಸ್ತಾಂತರಿಸಲಿ ಎಂದು ಸಲಹೆ ನೀಡಿದರು.

ಪ್ರಸ್ತುತ ಕಾವೇರಿ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿಯಿಂದ ಪಿಯುಸಿಯವರೆಗೆ 220ರಿಂದ 230 ವಿದ್ಯಾರ್ಥಿಗಳಿದ್ದು, ಶಿಕ್ಷಣ ಸಂಸ್ಥೆಯನ್ನು ನಡೆಸಲಾಗದ ಪರಿಸ್ಥಿತಿಯೇನೂ ಉದ್ಭವಿಸಿಲ್ಲ. ಶಿಕ್ಷಣ ಸಂಸ್ಥೆಯನ್ನು ಆದಿಚುಂಚನಗಿರಿ ಮಹಾ ಸಂಸ್ಥಾನಕ್ಕೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿ ದಂತೆ ಮಹಾಸಭೆಯನ್ನು ಕರೆದು, ಎಲ್ಲಾ ಸದಸ್ಯರುಗಳ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬೇಕಾಗಿತ್ತು. ಆದರೆ, ಇಂತಹ ಪ್ರಯತ್ನ ಮಾಡದೆ ಆಡಳಿತ ಮಂಡಳಿಯೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಜು.12 ರಂದು ಆಡಳಿತ ಮಂಡಳಿ ನಡೆಸಿದ ವಿಶೇಷ ಮಹಾಸಭೆಯಲ್ಲಿ ಸ್ಥಳ ದಾನಿಗಳನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಂದಿನ ಸಭೆಯಲ್ಲಿ ಶಿಕ್ಷಣ ಸಂಸ್ಥೆಗೆ ಸೇರಿದ ಎಲ್ಲಾ ಜಮೀನನ್ನು ಆದಿಚುಂಚನಗಿರಿ ಮಹಾ ಸಂಸ್ಥಾನಕ್ಕೆ ನೀಡದೇ ಜಾಗವನ್ನು ತಮ್ಮ ವಶದಲ್ಲೆ ಇರಿಸಿಕೊಳ್ಳಬೇಕೆಂದು ಸಾಕಷ್ಟು ಮಂದಿ ಅಭಿಪ್ರಾಯಪಟ್ಟಿದ್ದರು. ಆದರೆ, ಈ ವಿಚಾರ ವನ್ನು ನಿರ್ಣಯದಲ್ಲಿ ದಾಖಲಿಸಿಲ್ಲವೆಂದು ಭರತ್ ಆರೋಪಿಸಿದರು.

ಶಿಕ್ಷಣ ಸಂಸ್ಥೆಯ ಆರಂಭಕ್ಕೆ ಸಹಕಾರಿಯಾಗುವಂತೆ ಜಾಗದಾನ ಮಾಡಿದ ಹೊಸಗದ್ದೆ ಕುಟುಂಬದ ಭಾಸ್ಕರ್ ಅವರು ಮಾತನಾಡಿ, 1959ರಲ್ಲಿ ಭಾಗಮಂಡಲ ಶ್ರೀ ಕಾವೇರಿ ವಿದ್ಯಾ ಸಂಸ್ಥೆ ಪ್ರಾರಂಭವಾಗಿ ದಿ.ನಂಗಾರು ಮುತ್ತಣ್ಣ ಮತ್ತು ದಿ.ಕೆದಂಬಾಡಿ ಗಣಪತಿ ಹಾಗೂ ಅಂದಿನ ಕಾಲದ ನೂರಾರು ಗಣ್ಯರ ಸಹಕಾರದಿಂದ ಈ ವಿದ್ಯಾಸಂಸ್ಥೆ ತಲೆ ಎತ್ತಿ ನಿಲ್ಲುವಂತಾಗಿದೆ. ಹೊಸಗದ್ದೆ ಮತ್ತು ಚೆದುಕಾರು ಕುಟುಂಬಸ್ಥರು ಸೇರಿ ಒಟ್ಟಾಗಿ 5 ಎಕರೆ ಜಾಗವನ್ನು ವಿದ್ಯಾ ಸಂಸ್ಥೆಗೆ ದಾನವಾಗಿ ನೀಡಿದ್ದಾರೆ. ಹೀಗೆ ದಾನಕೊಟ್ಟ ಜಾಗವನ್ನು ಮಠಕ್ಕೆ ಹಸ್ತಾಂತರಿಸುವುದಕ್ಕೆ ದಾನಿಗಳ ಕುಟುಂಬದ ವಿರೋಧವೂ ಇದೆ ಎಂದರು.

ಶಿಕ್ಷಣ ಸಂಸ್ಥೆಯ ಜಾಗವನ್ನು ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿ ಸಂಘ ವನ್ನು ಸ್ಥಾಪಿಸುವ ವಿಚಾರವನ್ನು ವಾಟ್ಸಪ್ ಮೂಲಕ ಪ್ರಸ್ತಾಪಿಸಿದ ವಕೀಲ ಭಾನು ಪ್ರಕಾಶ್ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಸಂಶಯವಿದೆ ಎಂದು ಭಾಸ್ಕರ್ ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಾನಿಗಳಾದ ಕೆದಂ ಬಾಡಿ ಬೆಳ್ಯಪ್ಪ ಹಾಗೂ ಶಿಕ್ಷಣ ಸಂಸ್ಥೆಯ ಸದಸ್ಯ ರಾಜೀವ್ ಉಪಸ್ಥಿತರಿದ್ದರು.

Translate »