ಗೌರಿ ಲಂಕೇಶ್ ಹತ್ಯೆ ಪ್ರಕರಣ ಮಡಿಕೇರಿಯಲ್ಲಿ ಎಸ್‍ಐಟಿ ತಂಡ ಮೊಕ್ಕಾಂ
ಕೊಡಗು

ಗೌರಿ ಲಂಕೇಶ್ ಹತ್ಯೆ ಪ್ರಕರಣ ಮಡಿಕೇರಿಯಲ್ಲಿ ಎಸ್‍ಐಟಿ ತಂಡ ಮೊಕ್ಕಾಂ

July 28, 2018

ಮಡಿಕೇರಿ:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕ ರಣದ ತನಿಖೆಯನ್ನು ಬಿರುಸುಗೊಳಿಸಿರುವ ವಿಶೇಷ ತನಿಖಾ ದಳ (ಎಸ್‍ಐಟಿ) ಮಡಿಕೇರಿಯಲ್ಲಿ ಮೊಕಾಂ ಹೂಡಿದೆ. ಜುಲೈ.22 ರಂದು ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಆಪ್ತ ಸಹಾಯಕ ರಾಜೇಶ್ ಡಿ.ಬಂಗೇರ ನೀಡಿರುವ ಕೆಲವು ಸುಳಿವುಗಳನ್ನು ಆಧರಿಸಿ ತನಿಖೆಯ ಜಾಡು ಹಿಡಿದಿದ್ದು, ಮಡಿಕೇರಿಯ ಮುಖ್ಯ ಬೀದಿಯಲ್ಲಿರುವ ಬಂದೂಕು ಮಳಿಗೆಯೊಂದಕ್ಕೆ ತೆರಳಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದೆ.

ನಾಟಿ ವೈದ್ಯ ಮೋಹನ್ ನಾಯಕ್‍ನ ಹೇಳಿಕೆ ಆಧರಿಸಿ ಬಂಧಿತನಾದ ರಾಜೇಶ್ ಡಿ.ಬಂಗೇರ ಮಡಿಕೇರಿಯ ಬಂದೂಕು ಮಳಿಗೆಯಲ್ಲಿ ಖರೀದಿಸಿದ್ದಾರೆ ಎನ್ನಲಾದ ಬಂದೂಕು ಮತ್ತು ಅದರ ಮದ್ದು ಗುಂಡಗಳ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದು, ರಾಜೇಶ್ ಅವರ ಕೆಲ ಆಪ್ತ ವರ್ಗದವರನ್ನು ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.

ಒಟ್ಟು 3 ತಂಡಗಳಾಗಿ ಕೊಡಗಿ ನೆಲ್ಲೆಡೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ. ತಂಡ ಪ್ರಕರಣದ ಕುರಿತು ಗೌಪತ್ಯೆ ಕಾಯ್ದುಕೊಂಡಿದ್ದು, ಯಾವುದೇ ಮಾಹಿತಿ ಬಹಿರಂಗ ಪಡಿಸುತ್ತಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹೆಸರು ತಳುಕು ಹಾಕಿ ಕೊಂಡಿರುವ ರಾಜೇಶ್ ಡಿ.ಬಂಗೇರ ನೀಡಿದ ಸುಳಿವನ್ನು ಆಧರಿಸಿ ಮಡಿಕೇರಿಯ ವ್ಯಕ್ತಿಯೋರ್ವನನ್ನು ಎಸ್‍ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದು, ಒಟ್ಟು ಇಬ್ಬರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ವಿಶ್ವಾಸನೀಯ ಮೂಲಗಳು ಮಾಹಿತಿ ನೀಡಿದೆ.

ಮೂಲವೊಂದರ ಪ್ರಕಾರ ಗೌರಿ ಲಂಕೇಶ್ ಹತ್ಯೆಗೆ 0.9ಎಂ.ಎಂ ರಿವ್ವಾಲರ್ ಗುಂಡು ಬಳಕೆಯಾಗಿದ್ದು, ಇದೀಗ ಬಂಧಿಸಲಾಗಿರುವ ರಾಜೇಶ್ ಡಿ.ಬಂಗೇರ .32 ಎಂ.ಎಂ.ನ 2 ಸಜೀವ ಗುಂಡುಗಳನ್ನು ಹತ್ಯೆ ಆರೋಪಿಗಳಿಗೆ ನೀಡಿದ್ದ ಎನ್ನಲಾಗುತ್ತಿದೆ. ಈ ದಿಸೆಯಲ್ಲಿ ಎಸ್‍ಐಟಿ ಅಧಿಕಾರಿಗಳ ತಂಡ ತನಿಖೆ ಮುಂದುವರಿಸಿದ್ದು, ಜಿಲ್ಲಾ ಗುಪ್ತದಳದ ನೆರವನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಎಸ್.ಐ.ಟಿ.ಯ ಒಂದು ತಂಡ ರಾಜೇಶ್ ಡಿ.ಬಂಗೇರಾನ ನಿವಾಸವಿರುವ ನಾಪೋಕ್ಲುವಿನ ಪಾಲೂರು ಗ್ರಾಮಕ್ಕೆ ತೆರಳಿ ರಾಜೇಶ್ ಕುಟುಂಬ ವರ್ಗವನ್ನು ವಿಚಾರಣೆ ನಡೆಸಿ ಕೆಲವು ಮಾಹಿತಿ ಪಡೆದಿರುವುದಾಗಿ ತಿಳಿದು ಬಂದಿದೆ.

Translate »