ಆರು ಮಂದಿ ಯೋಗ ಸಾಧಕರಿಗೆ ಸನ್ಮಾನ
ಮೈಸೂರು

ಆರು ಮಂದಿ ಯೋಗ ಸಾಧಕರಿಗೆ ಸನ್ಮಾನ

June 21, 2018

ಮೈಸೂರು: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆರು ಮಂದಿ ಯೋಗ ಸಾಧಕರಿಗೆ ಬುಧವಾರ `ಯೋಗ ಕಲಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಹಿಮಾಲಯ ಕಲಾ ಸಾಹಿತ್ಯ ವೇದಿಕೆ ಹಾಗೂ ಮೈಸೂರು ಯೋಗ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ಯೋಗಪಟುಗಳಾದ ಮೈಸೂರಿನ ವಿ.ಸೋಮಶೇಖರ್, ರಮೇಶ್, ಕೆಆರ್ ನಗರದ ಪಿ.ಆರ್.ವಿಶ್ವನಾಥಶೆಟ್ಟಿ, ಮೈಸೂರಿನ ಯೋಗಪಟುಗಳಾದ ಶಶಿಕುಮಾರ್, ಎನ್.ಆರ್.ಸಂದೀಪ್, ಕೆ.ಆರ್.ಪಾರ್ವತಮ್ಮ ಅವರಿಗೆ ಯೋಗ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಮಾಜ ಸೇವಕ ಡಾ.ಕೆ.ಎಸ್.ರಘುರಾಮ್ ವಾಜಪೇಯಿ ಮಾತನಾಡಿ, ಪತಂಜಲಿ ಋಷಿಗಳು ಯೋಗಾಸನಕ್ಕೆ ಅನೇಕ ಸೂತ್ರಗಳನ್ನು ಕೊಡ ಮಾಡುವ ಮೂಲಕ ಯೋಗಾಸನಕ್ಕೆ ಹಲವು ಆಯಾಮಗಳನ್ನು ನೀಡಿದರು. ಮೈಸೂರು ಯೋಗಾಸನಕ್ಕೆ ತನ್ನದೇ ವಿಶಿಷ್ಟ ಕೊಡುಗೆ ನೀಡಿದ್ದು, ಇದೊಂದು ಯೋಗ ಸಾಮ್ರಾಜ್ಯ ಎಂದೇ ವರ್ಣಿಸಬಹುದು ಎಂದು ಹರ್ಷ ವ್ಯಕ್ತಪಡಿಸಿದರು.

ಯೋಗಕ್ಕೆ ನಾಲ್ವಡಿ ಕೊಡುಗೆ: ಅಂದಿನ ಮೈಸೂರು ಸಂಸ್ಥಾನದಲ್ಲಿ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಯೋಗಾಸನ ಶಿಕ್ಷಣಕ್ಕೆ ಉತ್ತೇಜನ ನೀಡಿದರು. ಟಿ.ಕೃಷ್ಣಮಾಚಾರ್ ಅವರ ಮುಖೇನ ಮೈಸೂರು ಸಂಸ್ಥಾನದಲ್ಲಿ ಯೋಗಾಸನ ಶಿಕ್ಷಣ ಕೊಡ ಮಾಡಿದರು. ಜೊತೆಗೆ ಕೃಷ್ಣಮಾಚಾರ್ ಅವರಿಂದ ನಾಲ್ವಡಿ ಸ್ವತಃ ಯೋಗಾಸನ ಅಭ್ಯಾಸವನ್ನೂ ಮಾಡಿದ್ದರು. ಮತ್ತೊಂದು ಗಮನಾರ್ಹ ವಿಷಯವೆಂದರೆ, ಕೃಷ್ಣಮಾಚಾರ್ ಅವರ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಯೋಗ ಪ್ರಚಾರಕ್ಕೂ ನಾಲ್ವಡಿ ಪ್ರೋತ್ಸಾಹ ನೀಡಿದರು ಎಂದು ಡಾ.ಕೆ.ಎಸ್.ರಘುರಾಮ್ ಸ್ಮರಿಸಿದರು.

ಯೋಗ ಗುರು ಕೃಷ್ಣಮಾಚಾರ್ ಅವರ ಶಿಷ್ಯರಾದ ಬಿಕೆಎಸ್ ಅಯ್ಯಂಗಾರ್ ಹಾಗೂ ಪಟ್ಟಾಭಿ ಜೋಯಿಸ್ ಯೋಗ ಪರಂಪರೆಯನ್ನು ಮುಂದುವರೆಸಿದರು ಎಂದು ಸ್ಮರಿಸಿದ ಅವರು, ಶುದ್ಧಶಾಸ್ತ್ರೀಯ ಯೋಗಾಸನ ವಿದ್ಯೆಯನ್ನು ಇಂದು ವ್ಯಾಪಾರೀಕರಣ ಮಾಡಿರುವ ಸನ್ನಿವೇಶವೂ ನಿರ್ಮಾಣವಾಗಿದ್ದು, ವ್ಯಾಯಾಮಗಳನ್ನೇ ಯೋಗ ಎಂದು ಹೇಳಿಕೊಡಲಾಗುತ್ತಿದೆ ಎಂದು ವಿಷಾದಿಸಿದರು.

ಹಿಮಾಲಯ ಕಲಾಸಾಹಿತ್ಯ ವೇದಿಕೆ ಸಂಚಾಲಕ ಯೋಗಪ್ರಕಾಶ್ ಮಾತನಾಡಿ, ಯೋಗ ಪರಂಪರೆಯನ್ನು ಹೊಂದಿರುವ ಮೈಸೂರಿನಲ್ಲಿ ಪ್ರಸ್ತುತ 350ಕ್ಕೂ ಹೆಚ್ಚು ಯೋಗ ಶಾಲೆಗಳಿವೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಯೋಗದಲ್ಲಿ ಸಾಧನೆ ಮಾಡುವವರನ್ನು ಗುರುತಿಸಿ ಯೋಗ ದಿನಾಚರಣೆಯಲ್ಲಿ ಸನ್ಮಾನಿಸಿ ಉತ್ತೇಜನ ನೀಡುವಂತಹ ಕಾರ್ಯಕ್ರಮವನ್ನು ಜಿಲ್ಲಾಡಳಿತ ರೂಪಿಸಬೇಕೆಂದು ಒತ್ತಾಯಿಸಿದರು. ಕವಯತ್ರಿ ಡಾ.ಎ.ಪುಷ್ಪ ಐಯ್ಯಂಗಾರ್, ಮೈಸೂರು ಯೋಗ ಅಸೋಸಿಯೇಷನ್ ಸಿ.ರಮೇಶ್, ಎನ್‍ಆರ್ ಮೊಹಲ್ಲಾದ ಶ್ರೀ ಶಾರದಾಂಬ ದೇವಸ್ಥಾನದ ಉಪಾಧ್ಯಕ್ಷ ಎಂ.ಎಲ್.ಕಲ್ಯಾಣ್‍ಕುಮಾರ್ ಮತ್ತಿತರರು ಹಾಜರಿದ್ದರು.

Translate »