ಜು.16ರಿಂದ ಮೈಸೂರು ವಿವಿ ಕ್ರೀಡೆಗಳಿಗೆ ತಂಡಗಳ ಆಯ್ಕೆ
ಮೈಸೂರು

ಜು.16ರಿಂದ ಮೈಸೂರು ವಿವಿ ಕ್ರೀಡೆಗಳಿಗೆ ತಂಡಗಳ ಆಯ್ಕೆ

June 21, 2018

ಮೈಸೂರು:  ವರ್ಷಪೂರ್ತಿ ನಡೆಯಲಿರುವ ಮೈಸೂರು ವಿಶ್ವವಿದ್ಯಾನಿಲಯದ ಕ್ರೀಡೆಗಳಿಗೆ ಜುಲೈ 16ರಿಂದ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ಇರುವ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಭಾಂಗಣದಲ್ಲಿ ಇಂದು ನಡೆದ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ಗಳ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಸಂಸ್ಥೆಗಳ ಕಾರ್ಯದರ್ಶಿಗಳ ಸಭೆಯಲ್ಲಿ ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಡುವ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ 200 ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ 100 ಮಂದಿ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಸಂಸ್ಥೆಗಳ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡು ಕ್ರೀಡಾ ತಂಡಗಳ ಆಯ್ಕೆ ಮಾನ ದಂಡಗಳ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
2018-19ನೇ ಸಾಲಿನ ವಿವಿ ಮಟ್ಟದ ಕ್ರೀಡೆಗಳು ಅಂತರ ಕಾಲೇಜು ಮಟ್ಟದ ಕ್ರೀಡಾಕೂಟಗಳ ಕ್ರೀಡಾಕೂಟಗಳ ವೇಳಾಪಟ್ಟಿ, ಸ್ಥಳ, 22 ಬಗೆಯ ಕ್ರೀಡಾ ತಂಡಗಳ ಗುರ್ತಿಸಿ ನಿಗದಿಪಡಿಸಲು ಸಲಹೆ, ಮಾರ್ಗದರ್ಶನಗಳನ್ನು ಸಭೆಯಲ್ಲಿ ನೀಡಿದರು.

ಒಟ್ಟು 36 ತಂಡಗಳನ್ನು ರಚಿಸಬೇಕು, ಅದರಲ್ಲಿ 15 ಮಹಿಳಾ ತಂಡಗಳಿರಬೇಕು, ವಲಯ ಸಂಚಾಲಕರ ನೇಮಕ ಮಾಡಿಕೊಂಡು ಕ್ರೀಡಾಕೂಟಗಳು ಯಾವುದೇ ನ್ಯೂನತೆ ಇಲ್ಲದೆ ಯಶಸ್ವಿಯಾಗಿ ನಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಸಲಹೆ ನೀಡಿದರು. ಕಳೆದ ವರ್ಷದ ಕ್ರೀಡಾಕೂಟಗಳಲ್ಲಿನ ನ್ಯೂನತೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕ ವಾಗಿರಬೇಕು, ಆಟದ ಮೈದಾನದಲ್ಲಿ ಮೂಲ ಸೌಕರ್ಯಗಳಿರುವಂತೆ ಎಚ್ಚರ ವಹಿಸಬೇಕೆಂದೂ ಡಾ.ಕೃಷ್ಣಯ್ಯ ಅವರು ಇದೇ ಸಂದರ್ಭ ಸೂಚನೆ ನೀಡಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಅವರು, ಕ್ರೀಡಾಕೂಟಗಳಿಗೆ ಬೇಕಾದ ಅಗತ್ಯ ಸಹಕಾರ ನೀಡಲಾಗುವುದು. ತಾವೂ ಸಹ ಕ್ರಿಕೆಟ್ ಮತ್ತು ಖೋಖೋ ಆಟಗಾರನಾಗಿರುವುದರಿಂದ ಮೈಸೂರು ವಿಶ್ವವಿದ್ಯಾನಿಲಯದ ಘನತೆಯನ್ನು ವೃದ್ಧಿಸುವಂತೆ ಕ್ರೀಡಾಕೂಟ ನಡೆಸುವಂತೆ ಸಲಹೆ ನೀಡಿದರು.

Translate »