ಮೈಸೂರು ವಿವಿ 129 ಗುತ್ತಿಗೆ ಉಪನ್ಯಾಸಕರ ಖಾಯಂ ಸಾಧ್ಯವಿಲ್ಲ
ಮೈಸೂರು

ಮೈಸೂರು ವಿವಿ 129 ಗುತ್ತಿಗೆ ಉಪನ್ಯಾಸಕರ ಖಾಯಂ ಸಾಧ್ಯವಿಲ್ಲ

May 7, 2019

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 129 ಗುತ್ತಿಗೆ ಉಪ ನ್ಯಾಸಕರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‍ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರೊ. ಜೆ.ಶಶಿಧರ್ ಪ್ರಸಾದ್ ಅವರು ಉಪಕುಲಪತಿಗಳಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿದ್ದ ಈ ಉಪನ್ಯಾಸಕರು ಅಂದಿನಿಂದ ಇಂದಿನವರೆಗೂ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 10 ವರ್ಷಗಳಿಗಿಂತ ಹೆಚ್ಚು ಸಮಯ ದಿಂದ ನಾವು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದೇವೆ, ನಮ್ಮನ್ನು ಖಾಯಂಗೊಳಿಸುವಂತೆ ಮೈಸೂರು ವಿಶ್ವ ವಿದ್ಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಇವರು ನ್ಯಾಯಾಲಯದ ಮೊರೆ ಹೋಗಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಗುತ್ತಿಗೆ ಉಪನ್ಯಾಸಕರನ್ನು ಖಾಯಂಗೊಳಿಸಿ ಅವರಿಗೆ ವಿವಿಯ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ಇತ್ತೀಚೆಗಷ್ಟೇ ತೀರ್ಪು ನೀಡಿತ್ತು. ನ್ಯಾಯಾಲಯದ ತೀರ್ಪಿನಿಂದ ಕಂಗಾಲಾದ ವಿಶ್ವ ವಿದ್ಯಾಲಯ ಯುಜಿಸಿ ನಿಯಮಾವಳಿ ಪ್ರಕಾರ ಗುತ್ತಿಗೆ ನೌಕರರನ್ನು ಖಾಯಂ ಗೊಳಿಸಲು ಸಾಧ್ಯವಿಲ್ಲ. ಆದರೆ, ಹೈಕೋರ್ಟ್ ತೀರ್ಪನ್ನು ಮಾನ್ಯ ಮಾಡಬೇಕು, ಖಾಯಮಾತಿ ವಿಷಯದಲ್ಲಿ ವಿವಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಹೇಳಿ ಕಡತವನ್ನು ಸರ್ಕಾರಕ್ಕೆ ಹಸ್ತಾಂತರಿಸಿತ್ತು. ವಿವಿ ಕಡತದ ಬಗ್ಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ತಮ್ಮ ಇಲಾಖೆ ಮತ್ತು ಕಾನೂನು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಹೈಕೋರ್ಟ್‍ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ನಿರ್ಧಾರ ಕೈಗೊಂಡಿತು. ಯು.ಜಿ.ಸಿ. ನಿಯಮಾವಳಿಗಳ ಪ್ರಕಾರ ಯಾವುದೇ ಕಾರಣಕ್ಕೂ ಗುತ್ತಿಗೆ ಉಪನ್ಯಾಸಕರ ಸೇವೆ ಖಾಯಂಗೊಳಿಸಲು ಬರುವುದಿಲ್ಲ ಎಂದು ಉನ್ನತ ಅಧಿಕಾರಿಗಳು ಸಚಿವರಿಗೆ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ, ಇದೇ ಅಂಶ ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲು ಏರಲು ಸಭೆ ನಿರ್ಧರಿಸಿತು.

Translate »