ಕೆರೆತೊಣ್ಣೂರಿನ ಕುಠೀರದ ರಾಮಾನುಜರಿಗೆ ವಿಶೇಷ ಪೂಜೆ
ಮಂಡ್ಯ

ಕೆರೆತೊಣ್ಣೂರಿನ ಕುಠೀರದ ರಾಮಾನುಜರಿಗೆ ವಿಶೇಷ ಪೂಜೆ

July 20, 2018

ಮೇಲುಕೋಟೆ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಇತ್ತೀಚೆಗೆ ಕೆರೆತೊಣ್ಣೂರಿನಲ್ಲಿ ಭಕ್ತರು ನಿರ್ಮಿಸಿರುವ ಕುಠೀರಕ್ಕೆ ಪ್ರವೇಶಿಸಿ ರಾಮಾ ನುಜರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಶ್ರೀನಂಬಿನಾರಾಯಣಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು, ಐತಿಹಾಸಿಕ ಕೆರೆತೊಂಡನೂರು 11ನೇ ಶತಮಾನದಲ್ಲಿ ರಾಮಾನುಜರಿಗೆ ಆಶ್ರಯ ನೀಡಿದ ಪವಿತ್ರ ಭೂಮಿ. ಈ ಪುಟ್ಟ ಗ್ರಾಮಕ್ಕೆ ರಾಮಾನುಜಾಚಾರ್ಯರ ಕಾಲದಲ್ಲಿದ್ದ ವೈಭವವನ್ನು ಮತ್ತೆ ತಂದು ಕೊಡಬಹುದು. ಪ್ರಕೃತಿಯ ಸುಂದರ ಮಡಿಲಲ್ಲಿರುವ ಕೆರೆತೊಣ್ಣೂರು ರಾಜ್ಯದ ಗಮನ ಸೆಳೆಯುವ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಬೇಕು. ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಿರುವ ರಾಮಾನುಜರ ಮೊದಲ ಆಶ್ರಯ ತಾಣ ಮತ್ತೆ ಗತವೈಭವ ಪಡೆಯಬೇಕು. ಗ್ರಾಮದ ಜನ ತಮ್ಮೂರಿನ ಅಭಿವೃದ್ಧಿಗೆ ಸಂಕಲ್ಪ ತೊಡಬೇಕು. ಇದಕ್ಕಾಗಿ ನಾನು ಎಲ್ಲಾ ರೀತಿಯ ಶ್ರಮವಹಿಸುತ್ತೇನೆ. ಕರ್ನಾಟಕದ ಪಂಚನಾರಾಯಣನ ಸನ್ನಿಧಿಗಳಲ್ಲೊಂದಾದ ನಂಬಿ ನಾರಾಯಣನ ದೇವಾಲಯದಲ್ಲಿ ನಿತ್ಯೋತ್ಸವ, ಮಾಸೋತ್ಸವ ಸಂವತ್ಸರೋತ್ಸವಗಳು ನಿರಂತರವಾಗಿ ನಡೆಯಬೇಕು ಎಂದರು.

ಇದೇ ವೇಳೆ ಕೆರೆತೊಣ್ಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ಕಂಪ್ಯೂಟರ್ ಗಳನ್ನು ಶ್ರೀಗಳು ವಿತರಿಸಿದರು. ಈ ವೇಳೆ ಶಿಕ್ಷಕರಾದ ಪುಟ್ಟರಾಜು, ಎಸ್‍ಡಿಎಂಸಿ ಅಧ್ಯಕ್ಷ ನಾಗರಾಜು, ಶಿಕ್ಷಕಿಯರಾದ ಮೇರಿ, ನಾಗರತ್ನ, ಗ್ರಾಪಂ ಸದಸ್ಯರಾದ ರಾಮೇಗೌಡ, ಶೃತಿ ಸೇರಿದಂತೆ ನೂರಾರು ಭಕ್ತರು ಮೇಲುಕೋಟೆಯ ಸ್ಥಾನೀಕರು, ಆಚಾರ್ಯರು ಭಾಗವಹಿಸಿದ್ದರು.

Translate »