ಇಂದು ಕಾವೇರಿಗೆ ಸಿಎಂ ಬಾಗೀನ
ಮಂಡ್ಯ

ಇಂದು ಕಾವೇರಿಗೆ ಸಿಎಂ ಬಾಗೀನ

July 20, 2018

ಮಂಡ್ಯ: ಜಿಲ್ಲೆಯ ಜೀವ ನಾಡಿ ಕೃಷ್ಣರಾಜ ಸಾಗರ ಜಲಾಶಯ ಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ (ಜು.20) ಬಾಗೀನ ಅರ್ಪಿಸಲಿದ್ದು, ಸಕಲ ಸಿದ್ಧತೆ ನಡೆದಿದೆ.

ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕೊಡಗು ಜಿಲ್ಲೆಯಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ  ಅವರು ಅಣೆಕಟ್ಟೆ ಯಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ, ತರುವಾಯ ಬಾಗೀನ ಅರ್ಪಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಇಂಧನ ಸಚಿವ ಎಚ್.ಡಿ. ರೇವಣ್ಣ, ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಮಂಡ್ಯದ ಸರ್‍ಎಂವಿ ಕ್ರೀಡಾಂಗಣದಲ್ಲಿ ಆಯೋಜಿ ಸಿರುವ ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.

124.80 ಗರಿಷ್ಠ ಮಟ್ಟ ಇರುವ ಜಲಾಶಯದಲ್ಲಿ ಪ್ರಸ್ತುತ 124.10 ನೀರು ಸಂಗ್ರಹ ಮಾಡಲಾಗಿದೆ. 58,719 ಸಾವಿರ ಕ್ಯೂಸೆಕ್ ಒಳಹರಿವು ಹರಿದು ಬರುತ್ತಿದ್ದು, 26,844 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 48.475 ಟಿಎಂಸಿ ನೀರು ಸಂಗ್ರಹವಾಗಿದೆ.

ರೈತ ಸಂಘದ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ, ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಕೃತಜ್ಞತಾ ಸಮಾವೇಶ: ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಸದರಿ ಕ್ಷೇತ್ರಗಳ ಮತದಾರರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸುವ ಬೃಹತ್ ಸಮಾವೇಶವನ್ನು ಮಂಡ್ಯದ ಸರ್ ಎಂವಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಇದೇ ಸಂದರ್ಭ ಜಿಲ್ಲೆಯ ಪರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಗುವುದು. ಕಾರ್ಯಕ್ರಮದ ಯಶಸ್ಸು ಹಾಗೂ ಶಕ್ತಿ ಪ್ರದರ್ಶನಕ್ಕೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಕಾರ್ಯ ಕರ್ತರನ್ನು ಬೃಹತ್ ಸಂಖ್ಯೆಯಲ್ಲಿ ಕರೆ ತರುವ ಜವಾಬ್ದಾರಿಯನ್ನು ಸ್ಥಳೀಯ ಶಾಸಕರು ವಹಿಸಿಕೊಂಡಿದ್ದಾರೆ.

ಇದೇ ಸಂದರ್ಭ ಕರ್ನಾಟಕ ಸಂಘದ ವತಿಯಿಂದ ನಿರ್ಮಾಣ ಮಾಡಿರುವ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನ ವನ್ನು ಲೋಕಾರ್ಪಣೆ ಮಾಡಲಾಗುವುದು.

ಬಿಗಿ ಪೊಲೀಸ್ ಭದ್ರತೆ

ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಮತ್ತು ಮಂಡ್ಯ ನಗರದ ಸರ್‍ಎಂವಿ ಕ್ರೀಡಾಂಗಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳ ಲಾಗಿದ್ದು, ಎಸ್ಪಿ ಸೇರಿದಂತೆ ಅಡಿಷನಲ್ 2, ಡಿಎಸ್ಪಿ 7, ಸಿಪಿಐ 14, ಪಿಎಸ್‍ಐ 38, ಎಎಸ್‍ಐ 107, ಸಿಪಿಸಿ/ಸಿಹೆಚ್‍ಸಿ 700, ಡಬ್ಲ್ಯೂಪಿಸಿ/ ಡಬ್ಲ್ಯೂಹೆಚ್‍ಸಿ 76, ಹೋಮ್ ಗಾರ್ಡ್ 400, 8 ಕೆಎಸ್‍ಆರ್‍ಪಿ ತುಕಡಿ, 10 ಡಿಎಆರ್, 5 ಎಎಸ್‍ಸಿ ತಂಡ, 6 ಆಂಬ್ಯುಲೆನ್ಸ್, 8 ಅಗ್ನಿಶಾಮಕ ವಾಹನ ಮಂಡ್ಯ ಮಾತ್ರವಲ್ಲದೇ ಹಾಸನ ಜಿಲ್ಲೆಯಿಂದ ಎಸ್ಪಿ, ಡಿವೈಎಸ್ಪಿ ಸೇರಿದಂತೆ ಐವರು ಸಿಪಿಐ, ಎಸ್‍ಐ 12, ಎಎಸ್‍ಐ 30, ಹೆಚ್‍ಸಿ/ಪಿಸಿ 250, ಡಬ್ಲ್ಯೂಪಿಸಿ 20, ಹಾಸನ ಸಂಚಾರ ಠಾಣೆಯಿಂದ ಎಸ್‍ಐ 2 ಎಎಸ್‍ಐ 2, ಹೆಚ್‍ಸಿ/ಪಿಸಿ 20 ಸೇರಿದಂತೆ ಮೈಸೂರು ವಲಯ ಕಚೇರಿಯಿಂದ ಇಬ್ಬರು ಡಿಎಸ್ಪಿಗಳನ್ನು ಭದ್ರತೆಗೆ ಕರೆಸಿಕೊಳ್ಳಲಾಗಿದೆ. ಒಟ್ಟಾರೆ 1700 ಕ್ಕೂ ಹೆಚ್ಚು ಸಿನ್ನಂದಿ ಮತ್ತು ಅಧಿಕಾರಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »