ಬಿಳಿಗಿರಿ ರಂಗಪ್ಪನಿಗೆ ಶ್ರಾವಣ ಮಾಸದ ವಿಶೇಷ ಪೂಜೆ
ಚಾಮರಾಜನಗರ

ಬಿಳಿಗಿರಿ ರಂಗಪ್ಪನಿಗೆ ಶ್ರಾವಣ ಮಾಸದ ವಿಶೇಷ ಪೂಜೆ

August 26, 2018

ಯಳಂದೂರು: ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಬಿಳಿಗಿರಿ ರಂಗನಬೆಟ್ಟದ ದೇವಸ್ಥಾನಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ರಾಜ್ಯದ ವಿವಿಧ ಜಿಲ್ಲೆಯಿಂದ ಸಾವಿರಾರು ಭಕ್ತರು ಭೇಟಿ ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಬೆಳಿಗ್ಗೆಯಿಂದಲೇ ಬೆಟ್ಟಕ್ಕೆ ಭಕ್ತರು ಬಸ್, ಕಾರು, ಬೈಕ್‍ಗಳಲ್ಲಿ ತಂಡೋಪ ತಂಡವಾಗಿ ಬಂದು ವಿವಿಧ ಸೇವಾ ಕಾರ್ಯಗಳನ್ನು ಸಲ್ಲಿಸಿದರು.

ಸದ್ಯ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ನವೀಕರಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬಿಳಿಗಿರಿ ರಂಗನಾಥ ಸ್ವಾಮಿ, ಅಲುಮೇಲು ರಂಗನಾಯಕಿ ಅವರ ಜೀವಕಳೆ ತುಂಬಿರುವ ಮೂರ್ತಿಗಳನ್ನು ದೇವಾಲಯದ ಪಕ್ಕದಲ್ಲಿರುವ ಕಾಶಿ ಗುರುಗಳ ಮಂಟಪದಲ್ಲಿ ಇರಿಸಲಾಗಿದ್ದು, ಮೂರ್ತಿಗಳಿಗಳಿಗೆ ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು.

ಶ್ರಾವಣ ಮಾಸದ ಅಂಗವಾಗಿ ಇಂದು ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಯಳಂದೂರು ಪೊಲೀಸ್ ಠಾಣೆ ಪಿಎಸೈ ಶ್ರೀಧರ್ ಮತ್ತು ಸಿಬ್ಬಂದಿಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಹೂರ ಜಿಲ್ಲೆಯಿಂದ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.

ಬಿತ್ತನೆ ಬೀಜಕ್ಕೆ ಪೂಜೆ: ಮುಂಗಾರು ಹಂಗಾಮಿನಡಿ ಪ್ರಸಕ್ತ ವರ್ಷ ಹೆಚ್ಚಿನ ಮಳೆಯಾಗಿದ್ದರಿಂದ ಜಲಾಶಯಗಳು ಭರ್ತಿಯಾಗಿದ್ದು, ಕಬಿನಿ ನಾಲೆಗೆ ನೀರು ಬಿಡಲಾಗಿದೆ. ಇದರಿಂದ ಈ ಭಾಗದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು, ಬಿತ್ತನೆಗೆ ಪೂಜೆ ಸಲ್ಲಿಸಿದರು. ಉತ್ತಮ ಬೆಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಹನುಮಂತರಾಯನಿಗೆ ಬೆಣ್ಣೆ ಅಲಂಕಾರ
ಶ್ರಾವಣ ಮಾಸದ ವಿಶೇಷವಾಗಿ ಬೆಟ್ಟದ ತಪ್ಪಲಿನಲ್ಲಿರುವ ವಡೆಗೆರೆ ಗ್ರಾಮದ ಬಿದ್ದ ಹನುಮಂತರಾಯನಿಗೆ ವಿಶೇಷವಾಗಿ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಬಿಳಿಗಿರಿರಂಗನಾಥಸ್ವಾಮಿ ಮತ್ತು ಅಲುಮೇಲು ರಂಗನಾಯಕಿ ಅಮ್ಮನವರ ದರ್ಶನ ಪಡೆಯುವ ಮೊದಲು ವಡೆಗರೆ ಗ್ರಾಮದಲ್ಲಿರುವ ಶ್ರೀ ಬಿದ್ದಹನುಮಂತರಾಯನ ದರ್ಶನ ಮಾಡುವುದು ವಾಡಿಕೆ. ಅದರಂತೆ ಭಕ್ತರು ಹಾಗೂ ರೈತರು ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Translate »