ವೈದ್ಯರಿಲ್ಲದೆ ನಿತ್ಯ ರೋಗಿಗಳ ಪರದಾಟ
ಚಾಮರಾಜನಗರ

ವೈದ್ಯರಿಲ್ಲದೆ ನಿತ್ಯ ರೋಗಿಗಳ ಪರದಾಟ

August 26, 2018

ಬೇಗೂರು: – ಸಮೀಪದ ಹಸಗೂಲಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆ ರೂಪ ಅವರ ವರ್ಗಾವಣೆಯಾಗಿ ಒಂದು ವಾರ ಕಳೆದರೂ ಬೇರೊಬ್ಬ ವೈದ್ಯರನ್ನು ನಿಯೋಜನೆ ಮಾಡದ ಪರಿಣಾಮ ರೋಗಿಗಳು ವೈದ್ಯರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಸಗೂಲಿಯು ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಭಾಗದಲ್ಲಿ ಇರುವುದರಿಂದ ಮಂಚಹಳ್ಳಿ, ಶೆಟ್ಟಹಳ್ಳಿ, ಪಾಳ್ಯ, ಆಲತ್ತೂರು, ಬೆಟ್ಟದಮಾದಳ್ಳಿ, ಗರಗನಹಳ್ಳಿ, ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಆದರೆ, ವಾರದಿಂದ ವೈದ್ಯರಿಲ್ಲದೆ ಪರದಾಡುವಂತಾಗಿದೆ.

ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳಿವೆ. ಆದರೆ, ವೈದ್ಯರನ್ನು ನಿಯೋಜನೆ ಮಾಡದ ಕಾರಣ ರೋಗಿಗಳಿಗೆ ಸಮಸ್ಯೆಯಾಗಿದ್ದು ಸಣ್ಣಪುಟ್ಟ ಸಮಸ್ಯೆಗಳಿಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕೂಡಲೇ ಜಿಲ್ಲಾ ವೈದ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹಸಗೂಲಿ ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನು ನಿಯೋಜನೆ ಮಾಡಬೇಕು ಮತ್ತು ಉತ್ತಮ ಸ್ಥಿತಿಯಲ್ಲಿರುವ ಆಸ್ಪತ್ರೆಯನ್ನು ಸದುಪಯೋಗವಾಗುವಂತೆ ಕಾರ್ಯ ಪ್ರವೃತ್ತರಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Translate »