ಸಂವಿಧಾನ ಪ್ರತಿ ದಹನ ಖಂಡಿಸಿ ಬೃಹತ್ ಪ್ರತಿಭಟನೆ
ಚಾಮರಾಜನಗರ

ಸಂವಿಧಾನ ಪ್ರತಿ ದಹನ ಖಂಡಿಸಿ ಬೃಹತ್ ಪ್ರತಿಭಟನೆ

August 26, 2018

ಸಂವಿಧಾನ ಸಂರಕ್ಷಣಾ ವೇದಿಕೆಯಡಿ ದಲಿತ ಸಂಘಟನೆಗಳ ಆಕ್ರೋಶ
ಚಾಮರಾಜನಗರ: ದೆಹಲಿಯ ಜಂತರ್-ಮಂತರ್‍ನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟುಹಾಕಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿರುವುದನ್ನು ಖಂಡಿಸಿ ನಗರದಲ್ಲಿ ಶನಿವಾರ ಸಂವಿಧಾನ ಸಂರಕ್ಷಣಾ ವೇದಿಕೆಯಡಿ ವಿವಿಧ ದಲಿತಪರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಸಂವಿಧಾನ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾವೇಶಗೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಸಂವಿಧಾನ ದೇಶದ ಜೀವಾಳ’ ಅದನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ. ‘ಸಂವಿಧಾನವೇ ದೇಶದ ಪವಿತ್ರ ಗ್ರಂಥ’ ‘ಸಂವಿಧಾನ ವಿರೋಧಿಸುವ ದುಷ್ಕರ್ಮಿಗಳನ್ನು ಗಲ್ಲಿಗೇರಿಸಿ’, ‘ಸಂವಿಧಾನದ ಪ್ರತಿ ಸುಟ್ಟಿರುವ ಕಿಡಿಗೇಡಿಗಳಿಗೆ ಧಿಕ್ಕಾರ’ ‘ಕೇಂದ್ರ ಸರ್ಕಾರಕ್ಕೆ ಧಿಕ್ಕಾರ’, ‘ಬಡ್ತಿ ಮೀಸಲಾತಿ ಜಾರಿಗೊಳಿಸದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ’ ಎಂಬೆಲ್ಲಾ ಘೋಷಣೆಗಳನ್ನು ಬರೆದಿರುವ ಭಿತ್ತಿ ಪತ್ರ ಹಿಡಿದು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಮನುವಾದಿಗಳ ವಿರುದ್ಧ ಘೋಷಣೆ ಕೂಗಿದರು.

ಸತ್ತಿ ರಸ್ತೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮೂಲಕ ಭುವನೇಶ್ವರಿ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ನಡೆಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾಪ್ರಭುತ್ವದ ಪವಿತ್ರ ಗ್ರಂಥವಾದ ಸಂವಿಧಾನದ ಪ್ರತಿಯನ್ನು ದೆಹಲಿಯ ಜಂತರ್, ಮಂತರ್‍ನಲ್ಲಿ ಸುಟ್ಟು ಹಾಕಲಾಗಿದೆ. ಇದಲ್ಲದೇ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ. ಈ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸಂವಿಧಾನ ವಿರೋಧಿಸುವ ದೇಶದ್ರೋಹಿಗಳನ್ನು ಗಲ್ಲಿಗೇರಿಸುವ ಕಾನೂನನ್ನು ಜಾರಿಗೆ ತರಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೇಲಿನ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯನ್ನು ಬಲಿಷ್ಠಗೊಳಿಸಬೇಕು. ರಾಷ್ಟ್ರಪತಿಗಳು ಅಂಕಿತ ಹಾಕಿರುವ ಎಸ್‍ಸಿ, ಎಸ್‍ಟಿ ಮುಂಬಡ್ತಿ ರಕ್ಷಿಸುವ ಕಾಯ್ದೆಯನ್ನು ಶೀಘ್ರವೇ ಜಾರಿಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲಾ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವೇ ಶ್ರೇಷ್ಠ ಹಾಗೂ ಪವಿತ್ರವಾದ ಗ್ರಂಥ. ಇಂತಹ ಸಂವಿಧಾನದ ಪ್ರತಿಯನ್ನು ದಹಿಸುವ ಮೂಲಕ ಮನುವಾದಿಗಳು ದೇಶದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರನ್ನು ಈ ಕೂಡಲೇ ಬಂಧಿಸಿ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಎಸ್‍ಸಿ/ಎಸ್‍ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ.ಎಸ್.ಮಾದಯ್ಯ, ದಲಿತ ಮುಖಂಡರಾದ ಪ್ರೊ.ಮಹೇಶ್ ಚಂದ್ರಗುರು, ಸಿ.ಎಂ.ಕೃಷ್ಣಮೂರ್ತಿ, ಸಿ.ಎಂ.ನರಸಿಂಹಮೂರ್ತಿ, ಬ್ಯಾಡಮೂಡ್ಲುಬಸವಣ್ಣ, ಕಂದಹಳ್ಳಿನಾರಾಯಣ್, ನಿಜಧನಿಗೋವಿಂದರಾಜು, ಪರ್ವತ್‍ರಾಜು, ಸಿ.ಕೆ.ಮಂಜುನಾಥ್, ಉಮ್ಮತ್ತೂರು ಚಂದ್ರು, ಕೆ.ಎಂ.ನಾಗರಾಜು, ಆಲೂರು ನಾಗೇಂದ್ರ, ದೊಡ್ಡಿಂದುವಾಡಿ ಸಿದ್ದರಾಜು, ಸೋಮಶೇಖರ್ ಬಿಸಲ್ವಾಡಿ, ಕೊಳ್ಳೇಗಾಲದ ಸಿದ್ದರಾಜು, ಪುಟ್ಟಸ್ವಾಮಿ, ಎಸ್.ಪಿ.ಮಹೇಶ್, ಸುರೇಶ್, ಸೋಮಣ್ಣ, ಸಿದ್ದಯ್ಯ, ಮಹದೇವಸ್ವಾಮಿ, ಶ್ರೀಕಾಂತ್, ಸಂಘಸೇನಾ, ಪುಟ್ಟರಾಜು, ರೈತ ಸಂಘದ ಚನ್ನಬಸಪ್ಪ ಇತರರು ಪಾಲ್ಗೊಂಡಿದ್ದರು.

Translate »