ಚಾಮರಾಜನಗರ ಜಿಲ್ಲೆಗೂ ಶ್ರೀ ಶಿವಕುಮಾರಸ್ವಾಮೀಜಿಗೂ ಅವಿನಾಭಾವ ಸಂಬಂಧ ಜಿಲ್ಲೆಯಲ್ಲೂ ಅಪಾರ ಶಿಷ್ಯ ಕೋಟಿ
ಚಾಮರಾಜನಗರ

ಚಾಮರಾಜನಗರ ಜಿಲ್ಲೆಗೂ ಶ್ರೀ ಶಿವಕುಮಾರಸ್ವಾಮೀಜಿಗೂ ಅವಿನಾಭಾವ ಸಂಬಂಧ ಜಿಲ್ಲೆಯಲ್ಲೂ ಅಪಾರ ಶಿಷ್ಯ ಕೋಟಿ

January 22, 2019

ಚಾಮರಾಜನಗರ: ಸೋಮವಾರ ಬೆಳಿಗ್ಗೆ ಶಿವೈಕ್ಯರಾದ ಸಿದ್ದಗಂಗಾ ಡಾ. ಶ್ರೀ ಶಿವಕುಮಾರಸ್ವಾಮೀಜಿ ಅವರಿಗೂ ಗಡಿ ಚಾಮರಾಜನಗರ ಜಿಲ್ಲೆಗೂ ಅವಿನಾಭಾವ ಸಂಬಂಧ ಇತ್ತು. ಹೀಗಾಗಿ ಶ್ರೀಗಳು ಜಿಲ್ಲೆಗೆ ಹಲವಾರು ಬಾರಿ ಭೇಟಿ ನೀಡಿದ್ದರು.

ಸಿದ್ಧಗಂಗಾ ಮಠದ ಯಾವುದೇ ಶಾಖೆಯಾಗಲೀ, ಶಿಕ್ಷಣ ಸಂಸ್ಥೆಯಾಗಲೀ ಜಿಲ್ಲೆಯಲ್ಲಿ ಇಲ್ಲ. ಆದರೂ ಸಹ ಸಿದ್ಧಗಂಗಾ ಮಠದಲ್ಲಿ ಜಿಲ್ಲೆಯ ನೂರಾರು ಮಂದಿ ವಿದ್ಯಾಭ್ಯಾಸ ನಡೆಸಿದ್ದಾರೆ. ಇದರಲ್ಲಿ ಹಲವರು ಉನ್ನತ ಹುದ್ದೆಗಳನ್ನು ಅಲಂ ಕರಿಸಿರುವುದು ಗಮನಾರ್ಹ. ಹೀಗಾಗಿ ಸಿದ್ಧಗಂಗಾ ಶ್ರೀ ಶಿವಕುಮಾರಸ್ವಾಮೀಜಿ ಅವರು ಜಿಲ್ಲೆಯಲ್ಲಿ ಅಪಾರ ಶಿಷ್ಯಕೋಟಿಯನ್ನು ಹೊಂದಿದ್ದರು.

ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ, ಹೋಬಳಿ ಕೇಂದ್ರಗಳಲ್ಲಿ ಪ್ರಮುಖ ಗ್ರಾಮಗಳಲ್ಲಿ ಆಯೋಜಿ ಸಿದ್ದ ಧಾರ್ಮಿಕ ಕಾರ್ಯಕ್ರಮಗಳು, ಮಠಗಳಿಗೆ ಶ್ರೀಗಳು ಭೇಟಿ ನೀಡಿದ್ದನ್ನು ಹಿರಿಯರು ಸ್ಮರಿಸಿದ್ದಾರೆ. ಮಠಾಧಿಪತಿಗಳ ಗದ್ದುಗೆ ಏರಿಕೆ ಕಾರ್ಯಕ್ರಮ ಗಳಲ್ಲಿ ಶ್ರೀ ಶಿವಕುಮಾರಸ್ವಾಮೀಜಿ ಅವರು ಪಾಲ್ಗೊಂ ಡಿದ್ದ ನಿದರ್ಶನವೂ ಇದೆ. ಇದಲ್ಲದೇ ಹಲವರ ಮನೆಗೆ ಭೇಟಿ ನೀಡಿ ಪಾದಪೂಜೆ ನಡೆಸಿದ್ದಾರೆ.

ಜಿಲ್ಲೆಗೆ ಸಾಕಷ್ಟು ಬಾರಿ ಭೇಟಿ ನೀಡಿರುವ ಶ್ರೀ ಸಿದ್ಧಗಂಗಾ ಶ್ರೀಗಳು ಜಿಲ್ಲೆಯ ಜನತೆಗೆ ದರ್ಶನ ಭಾಗ್ಯ ಕರುಣಿಸಿದ್ದಾರೆ. ಹೀಗಾಗಿ ಜಿಲ್ಲೆಯ ಜನತೆ ಸ್ವಾಮೀಜಿ ಅವರು ಲಿಂಗೈಕ್ಯರಾದದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ. ನೂರಾರು ಜನರು ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ತುಮಕೂರಿಗೆ ತೆರಳಿದ್ದಾರೆ. ಮರಿಯಾಲ ಮಠದ ಹಿರಿಯ ಶ್ರೀಗಳು ಗದ್ದುಗೆ ಏರುವಾಗ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶ್ರೀಮಠಕ್ಕೆ ಭೇಟಿ ನೀಡಿದ್ದರು.

ನನಗೆ 2001ರಲ್ಲಿ ಪೀಠಾರೋಹಣ ಮಾಡುವಾಗಲೂ ಶ್ರೀ ಶಿವಕುಮಾರಸ್ವಾಮೀಜಿ ಅವರು ಆಗಮಿಸಿದ್ದರು. ಇದಲ್ಲದೇ ಆರಾಧನೆ ಸೇರಿದಂತೆ ಮಠದಲ್ಲಿ ನಡೆಯು ತ್ತಿದ್ದ ಅನೇಕ ಕಾರ್ಯಕ್ರಮಗಳಲ್ಲಿ ಸಿದ್ಧಗಂಗಾ ಶ್ರೀಗಳು ಭೇಟಿ ನೀಡಿದ್ದರು ಎಂದು ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಅವರು ‘ಮೈಸೂರು ಮಿತ್ರ’ನೊಂದಿಗೆ ಶ್ರೀಮಠಕ್ಕೂ ಶ್ರೀ ಶಿವಕುಮಾರಸ್ವಾಮೀಜಿಗೂ ಇದ್ದ ಸಂಬಂಧವನ್ನು ಸ್ಮರಿಸಿಕೊಂಡರು.

ಚಾಮರಾಜನಗರ ತಾಲೂಕಿನ ಕುದೇರು ಗ್ರಾಮ ದಲ್ಲಿ 1991 ನವೆಂಬರ್ 5 ರಂದು ಆಯೋಜಿಸಿದ್ದ ಶ್ರೀ ಗುರು ಮಲ್ಲೇಶ್ವರ ಮಠದ ಉದ್ಘಾಟನೆಗೆ ಸಿದ್ಧಗಂಗಾ ಶ್ರೀಗಳು ಆಗಮಿಸಿದ್ದರು. ಇದಲ್ಲದೆ 1995ರಲ್ಲಿ ಇದೇ ಮಠದಲ್ಲಿ ಆಯೋಜಿಸಿದ್ದ ವಾರ್ಷಿ ಕೋತ್ಸವ ಸಮಾರಂಭದಲ್ಲಿ ಶ್ರೀಗಳು ಭಾಗವಹಿ ಸಿದ್ದನ್ನು ಗ್ರಾಮದ ಹಿರಿಯರು ಸ್ಮರಿಸಿದರು.
ಚಾಮರಾಜನಗರದ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠ, ಕೊತ್ತಲವಾಡಿಯಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ, ವಿ.ಸಿ.ಹೊಸೂರಿನಲ್ಲಿ ಮಠದ ಉದ್ಘಾಟನೆ, ಯರಗನಹಳ್ಳಿಯಲ್ಲಿ 1998 ರಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ದಲ್ಲಿ ಶ್ರೀ ಸಿದ್ಧಗಂಗಾ ಶ್ರೀಗಳು ಭಾಗವಹಿಸಿದ್ದರು. ಅಂದು ರಾತ್ರಿ ಗ್ರಾಮದಲ್ಲಿ ನಡೆದ ನಾಟಕವನ್ನು ಪೂರ್ಣವಾಗಿ ಶ್ರೀಗಳು ನೋಡಿ ಮೆಚ್ಚುಗೆ ವ್ಯಕ್ತಪಡಿ ಸಿದ್ದನ್ನು ಗ್ರಾಮದ ಹಿರಿಯರು ಸ್ಮರಿಸಿಕೊಂಡರು.

ಇದಲ್ಲದೇ ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿ ನಡೆದ ನಾನಾ ಕಾರ್ಯಕ್ರಮಗಳಲ್ಲಿ ಡಾ. ಶ್ರೀ ಶಿವ ಕುಮಾರಸ್ವಾಮೀಜಿ ಅವರು ಪಾಲ್ಗೊಂಡಿದ್ದನ್ನು ಜಿಲ್ಲೆಯ ಹಿರಿಯರು ನೆನಪಿಸಿಕೊಂಡಿದ್ದಾರೆ.

Translate »