ಪಂಚ ಮಹಾರಥಗಳ ಸದ್ದಿಲ್ಲದೆ ಜರುಗಿದ `ದೊಡ್ಡ ಜಾತ್ರೆ’
ಮೈಸೂರು ಗ್ರಾಮಾಂತರ

ಪಂಚ ಮಹಾರಥಗಳ ಸದ್ದಿಲ್ಲದೆ ಜರುಗಿದ `ದೊಡ್ಡ ಜಾತ್ರೆ’

April 5, 2020

ನಂಜನಗೂಡು, ಏ.4(ರವಿ/ಪವನ್)-ದಕ್ಷಿಣಕಾಶಿ ಪ್ರಸಿದ್ಧ ಗರಳಪುರಿ ಕ್ಷೇತ್ರ, ಪಂಚ ಮಹಾರಥಗಳನ್ನು ಎಳೆಯುವ ಕ್ಷೇತ್ರವೆನಿಸಿರುವ ನಂಜನಗೂಡಿನಲ್ಲಿಂದು ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಗೌತಮ ಪಂಚ ಮಹಾರಥೋತ್ಸವವು ಲಾಕ್‍ಡೌನ್ ಹಿನ್ನೆಲೆ ರದ್ದಾದರೂ ದೇವಾಲಯದ ಒಳಾವರಣದಲ್ಲಿ ಸಂಪ್ರದಾಯಕ್ಕೆ ಚ್ಯುತಿ ಇಲ್ಲದಂತೆ ನೆರವೇರಿತು.

ಶನಿವಾರ ಬೆಳಿಗ್ಗೆ 5.25ರಿಂದ 6.30ರೊಳಗೆ ಸಲ್ಲುವ ಶುಭ ಮೀನ ಲಗ್ನ, ಮಘಾ ನಕ್ಷತ್ರದಲ್ಲಿ ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತರು ಹಾಗೂ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ ನಂತರ ಸಕಲ ಪೂಜಾ ಕೈಂಕರ್ಯ ನೇರವೇರಿಸಲಾಗಿತು. ನಂತರ ದೇವಾಲಯದಲ್ಲೇ ಇರುವ ಚಿಕ್ಕ ರಥಕ್ಕೆ ಪೂಜೆ ಸಲ್ಲಿಸಿ, ದೇವಾಲಯದ ಒಳ ಪ್ರಾಂಗಣದಲ್ಲೇ ಆ ತೇರನ್ನು ಪ್ರದಕ್ಷಾಣಾಕಾರವಾಗಿ ಸುತ್ತಿಸಿದ ಬೆರಳೆಣಿಕೆಯಷ್ಟು ಅರ್ಚಕರು, ಧಾರ್ಮಿಕ ವಿಧಿ-ವಿಧಾನಗಳಿಂದ ರಥೋತ್ಸವದ ಆಚರಣೆಗೆ ಮಂಗಳ ಹಾಡಿದರು.

ಆರಂಭದಲ್ಲಿ ಗಣಪತಿ, ನಂತರ ಕ್ರಮವಾಗಿ ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರ ರಥಗಳನ್ನು ಹೀಗೆಯೇ ಒಳಾವರಣಕ್ಕೆ ಸಿಮಿತವಾಗಿ ಪ್ರದಕ್ಷಿಣಾಕಾರವಾಗಿ ತಂದು ಧಾರ್ಮಿಕ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಂಧನ ಬಾಬು, ಸದಸ್ಯರು ಹಾಗೂ ಬೆರಳೆಣಿಕೆಯ ಅರ್ಚಕರಿದ್ದರು.

ರಥೋತ್ಸವ ರದ್ದಾದರೂ ಭಕ್ತರ ಆಗಮನ: ಮಹಾರಥೋತ್ಸವ ರದ್ದಾಗಿದ್ದರೂ ಶ್ರೀಕಂಠೇಶ್ವರನ ನೂರಾರು ಭಕ್ತರು ಇಂದು ಬೆಳಗಿನ ಜಾವವೇ ದೇವಾಲಯದತ್ತ ಆಗಮಿಸಲಾರಂಭಿಸಿದರು. ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ಭಕ್ತರು ದೇವಾಲಯದ ಬಳಿ ಬಾರದಂತೆ ವಾಪಸ್ ಕಳಿಸಿದರು.

ರಥ ಬೀದಿಯಲ್ಲಿ ಸಾಗಿದ ಚಿಕ್ಕ ತೇರು: ರಥೋತ್ಸವ ರದ್ದಾದ ಹಿನ್ನೆಲೆಯಲ್ಲಿ ನಂಜನಗೂಡಿನ ಯುವ ಬ್ರಿಗೇಡ್ ಸದಸ್ಯರು ಪುಟ್ಟ ರಥವನ್ನು ಮಾಡಿ ಮುಹೂರ್ತದ ಸಮಯಕ್ಕೆ ಸರಿಯಾಗಿ ನಂಜನಗೂಡಿನ ರಥ ಬೀದಿಯಲ್ಲಿ ಎಳೆಯುವ ಮೂಲಕ ಗಮನ ಸೆಳೆದರು. ರಥ ಬೀದಿಯಲ್ಲಿ ದೊಡ್ಡ ತೇರು ಸಾಗದಿದ್ದರೂ ಸಾಂಕೇತಿಕವಾಗಿ ಚಿಕ್ಕ ತೇರು ಸಾಗಿದನ್ನು ಕಂಡು ಭಕ್ತ ಸಮೂಹ ಮಹಾರಥೋತ್ಸವ ಜರುಗಿದ ತೃಪ್ತಿ ಹೊಂದಿದರು.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕಂಠೇಶ್ವರ ಸ್ವಾಮಿ ದೇವಾಲಯದ ಮಹಾರಥೋತ್ಸವ ಪ್ರತಿ ವರ್ಷ ಲಕ್ಷಾಂತರ ಜನಸಾಗರದ ನಡುವೆ ವೈಭವದಿಂದ ಜರುಗುತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ಕಾರಣ ಲಾಕ್‍ಡೌನ್ ಜಾರಿಯಲ್ಲಿ ರುವುದರಿಂದ ಸಾಂಕೇತಿಕವಾಗಿ ಮಿನಿ ರಥೋತ್ಸವ ನಡೆದಿದೆ.

Translate »