ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್ ಬಿಜೆಪಿ ಅಭ್ಯರ್ಥಿ?
ಚಾಮರಾಜನಗರ, ಮೈಸೂರು

ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್ ಬಿಜೆಪಿ ಅಭ್ಯರ್ಥಿ?

March 15, 2019

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರೂ ಆದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅವರೇ ಕಣಕ್ಕಿಳಿಯುವುದು ಬಹುತೇಕ ಖಚಿತವಾ ಗಿದೆ. ಅಭಿಮಾನಿಗಳು ಹಾಗೂ ಪಕ್ಷದ ವರಿಷ್ಠರ ಒತ್ತಾಯಕ್ಕೆ ಮಣಿದಿರುವ ಪ್ರಸಾದ್ ಈಗಾಗಲೇ ರಾಜ್ಯದ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಾಳೆಯೂ ರಾಜ್ಯ ಮತ್ತು ಕೇಂದ್ರ ವರಿಷ್ಠರೊಂದಿಗೆ ಮತ್ತೊಂದು ಸುತ್ತಿನ ಮಾತು ಕತೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಿ ದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇಂದು ರಾತ್ರಿ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಚುನಾವಣಾ ರಾಜಕೀಯದಿಂದ ದೂರ ಉಳಿಯುವ ನಿರ್ಧಾರವನ್ನು ಕೈಗೊಂಡಿ ದ್ದೇನೆ. ಆದರೆ, ಪಕ್ಷದ ವರಿಷ್ಠರು ಹಾಗೂ ಕಾರ್ಯಕರ್ತರು ಮಿಗಿಲಾಗಿ ನನ್ನ ಅಪಾರ ಅಭಿ ಮಾನಿಗಳು ಒತ್ತಡ ಹಾಕುತ್ತಿದ್ದಾರೆ. ಅವರ ಒತ್ತಾಸೆಯನ್ನು ಹೇಗೆ ನಿಭಾಯಿಸುವುದು ಎಂಬುದೇ ನನಗೆ ತೋಚುತ್ತಿಲ್ಲ. ಯೋಚಿಸುತ್ತಿದ್ದೇನೆ. ನಾಳೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದು ತಿಳಿಸಿದರು.

ಚಾಮರಾಜನಗರದಿಂದ ಐದು ಬಾರಿ ಗೆಲುವು ಸಾಧಿಸಿರುವ ಶ್ರೀನಿವಾಸ ಪ್ರಸಾದ್ ನಾನು ಸ್ಪರ್ಧೆ ಮಾಡುವುದಿಲ್ಲ, ಹೇಳಿದವರಿಗೆ ಟಿಕೆಟ್ ನೀಡಿ ಎಂದು ಹೇಳಿದ್ದರೂ ಸಹ ವರಿಷ್ಠರು ಮಾತ್ರ ನೀವೇ ಕಣಕ್ಕಿಳಿಯಬೇಕು, ಚುನಾವಣಾ ವೆಚ್ಚವನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಮನವೊಲಿ ಸುವ ಪ್ರಯತ್ನ ಮಾಡಿದ್ದಾರೆ. ಧ್ರುವನಾರಾಯಣ್ ಈಗಾಗಲೇ ಎರಡು ಬಾರಿ ಜಯಗಳಿಸಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಅವರ ಗೆಲುವಿಗೆ ಕಡಿವಾಣ ಹಾಕಲು ಬಿಜೆಪಿ ಮುಂದಾಗಿದೆ. ಇದ ಕ್ಕಾಗಿ ಇವರ ಗುರು ಶ್ರೀನಿವಾಸ ಪ್ರಸಾದ್ ಅವರನ್ನೇ ಕಣಕ್ಕಿಳಿಸಲು ತಯಾರಿ ನಡೆಸಿದೆ.

ಅಭಿಮಾನಿಗಳ ಒತ್ತಾಯ: ಶ್ರೀನಿವಾಸ ಪ್ರಸಾದ್ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಳೆದ ಕೆಲ ದಿನ ಗಳಿಂದ ಶ್ರೀನಿವಾಸ್ ಪ್ರಸಾದ್ ಅವರೇ ಚಾಮ ರಾಜನಗರ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಒತ್ತಾಯಿ ಸುತ್ತಲೇ ಬಂದಿದ್ದರು. ಚುನಾವಣೆ ಘೋಷಣೆ ಯಾದ ನಂತರ ಪ್ರತಿದಿನ ನೂರಾರು ಕಾರ್ಯ ಕರ್ತರು ಅವರ ಮೈಸೂರು ನಿವಾಸಕ್ಕೆ ಭೇಟಿ ನೀಡಿ, ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹಾಕುತ್ತಲೇ ಇದ್ದಾರೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಹಾಲಿ ಸಂಸದ ಆರ್.ಧ್ರುವನಾರಾಯಣ್ ಅಖಾಡಕ್ಕಿಳಿ ಯುವ ಸಂಬಂಧ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಇವರನ್ನು ಮಣಿಸಿ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕಾದರೆ ವಿ.ಶ್ರೀನಿವಾಸ್ ಪ್ರಸಾದ್ ಅವರೇ ಸಮರ್ಥರು ಎಂಬುದು ಪ್ರಸಾದ್ ಅಭಿಮಾನಿಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಲೆಕ್ಕಾಚಾರವಾಗಿದೆ. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ಅವರ ನಿವಾಸದ ಆವರಣದಲ್ಲಿ ಗುರುವಾರ ನೆರೆದಿದ್ದ ಅವರ ಅಭಿಮಾನಿಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಚಾಮರಾಜನಗರದಿಂದ ಸ್ಪರ್ಧಿಸ ಬೇಕೆಂದು ಒತ್ತಾಯಿಸಿದರು. ಈಗಾಗಲೇ ಚುನಾ ವಣಾ ರಾಜಕೀಯದಿಂದ ನಿವೃತ್ತಿಯಾಗಿರುವು ದಾಗಿ ಘೋಷಿಸಿದ್ದ ಪ್ರಸಾದ್ ಇದರಿಂದ ಇಕ್ಕಟ್ಟಿಗೆ ಸಿಲುಕಿದಂತಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವ ರೊಂದಿಗೆ ಸಮಾಲೋಚಿಸಿ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಪ್ರಸಾದ್, ಚಾಮರಾಜ ನಗರಕ್ಕೆ ಬಿಜೆಪಿಯಿಂದ 17 ಮಂದಿ ಆಕಾಂಕ್ಷಿಗಳಿದ್ದು, ಅಭ್ಯರ್ಥಿ ಆಯ್ಕೆ ಸಂಬಂಧ ಈಗಾಗಲೇ ವೀಕ್ಷಕರು ಪರಿಶೀಲಿಸಿದ್ದಾರೆ. ಮಾ.18ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ.

2004ರಲ್ಲೇ ಚುನಾ ವಣಾ ರಾಜಕೀಯ ಬೇಡವೆಂದು ಸಮ್ಮನಾಗಿದ್ದೆ. ಆದರೆ ನಂತರದ ಬೆಳವಣಿಗೆಯಲ್ಲಿ ಒತ್ತಾಯಕ್ಕೆ ಕಟ್ಟುಬಿದ್ದು ನಂಜನಗೂಡು ವಿಧಾನಸಭೆಗೆ ಸ್ಪರ್ಧೆ ಮಾಡಬೇಕಾಯಿತು ಎಂದು ಹೇಳಿದರು.

ಲೋಕಸಭಾ ಚುನಾವಣೆ ಎಂಬುದು ದೊಡ್ಡ ಮಟ್ಟದ್ದು. ಇಲ್ಲಿ ಅಭ್ಯರ್ಥಿ ಸಾಂಕೇತಿಕವಷ್ಟೇ. ಸ್ಥಳೀಯ ಮುಖಂಡರ ಶ್ರಮವೇ ಮಹತ್ವದ ಪಾತ್ರ ವಹಿಸು ತ್ತದೆ. ಹೀಗಾಗಿ ಅಭ್ಯರ್ಥಿ ಯಾರಾದರೂ ನಮಗೆ ನಿರುತ್ಸಾಹ-ಅಂಜಿಕೆ ಬೇಡ. ನಾವೆಲ್ಲ ಒಟ್ಟಾಗಿ ಕ್ಷೇತ್ರ ವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಶ್ರಮಿಸಬೇಕಿದೆ. ಅದಾಗ್ಯೂ ನಿಮ್ಮ ಪ್ರೀತಿಪೂರ್ವಕ ಒತ್ತಾಯ ಮನಸ್ಸಿ ನಲ್ಲಿದ್ದು, ಇಂದು ಬೆಂಗಳೂರಿಗೆ ತೆರಳಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಮಾಲೋಚಿಸಿ ನಾಳೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಕಾಂಗ್ರೆಸ್‍ಗೆ ರಾಷ್ಟ್ರ ಮಟ್ಟದ ನಾಯಕರ ಕೊರತೆ ಇದೆ. ಆದರೆ ನರೇಂದ್ರ ಮೋದಿಯವರ ಆಡಳಿತದ ಹಿನ್ನೆಲೆಯಲ್ಲಿ ಬಿಜೆಪಿ ಜನಮನ್ನಣೆ ಗಳಿಸಿಕೊಂಡಿದೆ. ಕಳೆದ ಬಾರಿ ಚಾಮರಾಜನಗರ ಬಿಜೆಪಿಗೆ ದಕ್ಕದಿದ್ದರೂ 543 ಕ್ಷೇತ್ರಗಳಲ್ಲಿ ಬಿಜೆಪಿ 283ರಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಕೇವಲ 44ಕ್ಕೆ ತೃಪ್ತಿ ಪಟ್ಟುಕೊಂಡಿತು. ಮತ್ತೆ ಎನ್‍ಡಿಎ ಅಧಿಕಾರಕ್ಕೆ ಬರುತ್ತದೆ, ಮತ್ತೆ ಮೋದಿಯವರೇ ಪ್ರಧಾನಿಯಾಗುತ್ತಾರೆ ಎಂಬುದನ್ನು ಹಲವು ಸಮೀಕ್ಷೆಗಳು ಹೇಳುತ್ತಿವೆ. ಹೀಗಾಗಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ವರ್ಚಸ್ಸಿನ ಹಿನ್ನೆಲೆಯಲ್ಲಿ ಚಾಮರಾಜನಗರವೂ ಈ ಬಾರಿ ಪಕ್ಷಕ್ಕೆ ಒಲಿಯಲಿದ್ದು, ಅದಕ್ಕಾಗಿ ಅಭ್ಯರ್ಥಿ ಯಾರೇ ಆದರೂ ನಾವೆಲ್ಲಾ ಒಟ್ಟಾಗಿ ಶ್ರಮಿಸಬೇಕಿದೆ ಎಂದು ನುಡಿದರು.

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಶಾಸಕ ಸಿ.ಗುರುಸ್ವಾಮಿ, ಈಗಾಗಲೇ ಚಾಮರಾಜನಗರ ಅಭ್ಯರ್ಥಿ ಸಂಬಂಧ ವಿ.ಶ್ರೀನಿವಾಸ ಪ್ರಸಾದ್ ಅವರ ಹೆಸರಿಗೆ `ಬಿ ಫಾರಂ’ ಅನ್ನು ನೀಡಲಾಗಿದೆ. ಪ್ರಸಾದ್ ಅವರ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ. ಹೊಸ ಮುಖಗಳಿಗೆ ಅವಕಾಶ ನೀಡಿದ್ದಲ್ಲಿ ಅವರ ಪರಿಚಯ ಮಾಡುವುದು ಕಷ್ಟವಾಗು ತ್ತದೆ. ಹೀಗಾಗಿ ಶ್ರೀನಿವಾಸ ಪ್ರಸಾದ್ ಅವರೇ ಅಭ್ಯರ್ಥಿ ಆಗಬೇಕೆಂದು ಒತ್ತಾಯಿಸಿ ದರು. ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ್, ನಂಜನಗೂಡು ತಾಪಂ ಸದಸ್ಯ ಬಿ.ಎಸ್.ರಾಮು, ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ, ಕೂಡಲೂರು ಶ್ರೀಧರಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »