ಸಂವಿಧಾನ ಕುರಿತ ಶಿಕ್ಷಣ ಇಲಾಖೆ ಸುತ್ತೋಲೆ: ವಿ.ಶ್ರೀನಿವಾಸಪ್ರಸಾದ್ ಹೇಳಿಕೆಗೆ ಮಾಜಿ ಮೇಯರ್ ಪುರುಷೋತ್ತಮ್ ಅಸಮಾಧಾನ
ಮೈಸೂರು

ಸಂವಿಧಾನ ಕುರಿತ ಶಿಕ್ಷಣ ಇಲಾಖೆ ಸುತ್ತೋಲೆ: ವಿ.ಶ್ರೀನಿವಾಸಪ್ರಸಾದ್ ಹೇಳಿಕೆಗೆ ಮಾಜಿ ಮೇಯರ್ ಪುರುಷೋತ್ತಮ್ ಅಸಮಾಧಾನ

November 19, 2019

ಮೈಸೂರು, ನ.18(ಆರ್‍ಕೆಬಿ)- ಸಂವಿಧಾನ ದಿನಾಚರಣೆಗೆ ಸಂಬಂಧಿಸಿದಂತೆ ಹೊರಡಿಸಿದ ಸುತ್ತೋಲೆ ಹಿಂದೆ ಸಚಿವ ಸುರೇಶ್‍ಕುಮಾರ್ ಕೈವಾಡವಿಲ್ಲ. ಈಗ ಎಲ್ಲವೂ ಸರಿ ಹೋಗಿರುವ ಕಾರಣ ಅದರ ವಿರುದ್ಧದ ಹೋರಾಟ ಕೈಬಿಡಬೇಕೆಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಮಾಡಿಕೊಂಡಿರುವ ಮನವಿ ಸಮಂಜಸವಾಗಿಲ್ಲ ಎಂದು ಮಾಜಿ ಮೇಯರ್ ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಪ್ರಸಾದ್ ಅವರು ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಪೂರಕ ವಾಗಿರುತ್ತಾರೆಂಬ ಕಾರಣದಿಂದ ಜನರು ಅವರನ್ನು ಗೆಲ್ಲಿಸಿದ್ದಾರೆ. ಆದರೆ ಈಗ ಅವರು ಆಡುತ್ತಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿವೆ ಎಂದರು. ಇದೇ ವೇಳೆ ಪ್ರಜಾಪ್ರಭುತ್ವ, ರಾಜಪ್ರಭುತ್ವದ ವಿಷಯ ಬಂದಾಗ ಅವರು ಬಹುಮತ ಇದೆ ಎಂಬ ಕಾರಣಕ್ಕೆ ತಮಗೆ ಬೇಕಾದ ಯಾವುದಾದರೂ ನಿರ್ಧಾರ ಕೈಗೊಳ್ಳಬಹುದೇ ಎಂದು ಪ್ರಶ್ನಿಸಿ, ಆ ರೀತಿ ಹೇಳಿಕೆ ನೀಡುವಾಗ ಎಚ್ಚರದಿಂದಿರಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಎನ್.ಮಹೇಶ್ ಸಹ ನಗರದಲ್ಲಿ ಕಾರ್ಯಕ್ರಮವೊಂದರ ವೇಳೆ ಗಾಂಧೀಜಿ ಹಾಗೂ ಅಂಬೇಡ್ಕರ್ ವಿಚಾರಗಳ ಕಸಿ ಆಗಬೇಕಿದೆ ಎಂದಿದ್ದಾರೆ. ಇಷ್ಟು ವರ್ಷವೂ ಅವರು ಮಾತನಾಡುತ್ತಿದ್ದುದರ ವಿರುದ್ಧ ಈಗ ಮಾತನಾಡಿದ್ದು, ಬಿಎಸ್‍ಪಿ ಪಕ್ಷ ಅವರನ್ನು ಕೈಬಿಟ್ಟಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಪಕ್ಷದಿಂದ ಗೆದ್ದ ಮೇಲೆ ಆ ಪಕ್ಷದ ಸಿದ್ಧಾಂತದಂತೆಯೇ ನಡೆದುಕೊಳ್ಳಬೇಕೆಂದು ತಾಕೀತು ಮಾಡಿದರು.

ಈಗಿನ ಹುಣಸೂರು ಉಪ ಚುನಾವಣೆ ವೇಳೆ ದಲಿತರು ತಮ್ಮ ಶಕ್ತಿ ಏನೆಂಬುದನ್ನು ತೋರಿಸಬೇಕು ಎಂದರಲ್ಲದೆ, ಪಂಜಾಬ್‍ನಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಮೂತ್ರ ಕುಡಿಸಿ ಕೊಲ್ಲಲಾಗಿದ್ದು, ಒಂದು ವೇಳೆ ದೇಶದಲ್ಲಿ ಸಂವಿಧಾನ ಇಲ್ಲದಿದ್ದರೆ ಏನಾಗುತ್ತಿತ್ತೆಂಬ ಕಲ್ಪನೆ ಊಹೆಗೂ ನಿಲುಕದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ದಲಿತರ ಮೇಲಿನ ಹಲ್ಲೆ, ದೌರ್ಜನ್ಯವನ್ನು ಕಾನೂನು ಮೂಲಕ ಪೊಲೀಸರು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

Translate »