ನಿರುದ್ಯೋಗಿಗಳಿಗೆ ತಲಾ 10 ಸಾವಿರ ನಿರುದ್ಯೋಗ ಭತ್ಯೆ ನೀಡಿ
ಮೈಸೂರು

ನಿರುದ್ಯೋಗಿಗಳಿಗೆ ತಲಾ 10 ಸಾವಿರ ನಿರುದ್ಯೋಗ ಭತ್ಯೆ ನೀಡಿ

November 19, 2019

ನಿರುದ್ಯೋಗಿಗಳ ಸಂಘದ ರಾಜ್ಯಾಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ ಒತ್ತಾಯ
ಮೈಸೂರು,ನ.18(ಆರ್‍ಕೆಬಿ)-ರಾಜ್ಯದಲ್ಲಿ ಸರ್ಕಾರಿ ಇಲಾಖಾ ಕಚೇರಿ, ನಿಗಮ ಮಂಡಳಿ ಹಾಗೂ ಸರ್ಕಾರಿ ಸ್ವಾಮ್ಯದ ವಿವಿಧ ಸಂಸ್ಥೆಗಳಲ್ಲಿ ಸುಮಾರು 6.5 ಲಕ್ಷ ಹುದ್ದೆಗಳಿದ್ದರೂ, ಇವುಗಳಲ್ಲಿ ಶೇ.30ರಷ್ಟು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡದಿರುವ ಬಗ್ಗೆ ವಿದ್ಯಾವಂತ ನಿರುದ್ಯೋಗಿಗಳ ಸಂಘದ ರಾಜ್ಯಾಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ ಆಕ್ಷೇಪಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. 40 ವರ್ಷಕ್ಕೂ ಕೆಳಗಿನವರು ಹಾಗೂ 40 ವರ್ಷ ಮೀರಿದ ಎರಡೂ ವರ್ಗದವರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ 60 ವರ್ಷ ತುಂಬಿದವರಿಗೆ ಮಾಸಾಶನ ನೀಡುತ್ತಿದ್ದರೆ, ಈ ನಿರುದ್ಯೋಗಿಗಳು ವಿದ್ಯಾಭ್ಯಾಸಕ್ಕಾಗಿ ಅಪಾರ ಖರ್ಚು ಮಾಡಿದ್ದರೂ ಜೀವನ ನಿರ್ವಹಣೆ, ವಿವಾಹ ಮೊದಲಾದ ವಿಷಯಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರಿಗೆ ಉದ್ಯೋಗ ಸಿಗುವವರೆಗೂ ಪ್ರತಿ ತಿಂಗಳು 5ರಿಂದ 10 ಸಾವಿರ ರೂ. ಉದ್ಯೋಗ ಭತ್ಯೆ ನೀಡ ಬೇಕು ಎಂದು ಆಗ್ರಹಿಸಿದರು. ಬ್ಯಾಂಕ್ ಮೊದಲಾದ ಹುದ್ದೆಗಳಿಗೆ ಆಯ್ಕೆ ಪರೀಕ್ಷೆಯನ್ನು ರಾಜ್ಯದಲ್ಲಿಯೇ, ಕನ್ನಡ ಭಾಷೆಯಲ್ಲಿಯೇ ನಡೆಸಿ, ಸ್ಥಳೀಯರಿಗೆ ಉದ್ಯೋಗ ಸಿಗುವಂತಾಗಬೇಕು. ದೊಡ್ಡ ದೊಡ್ಡ ಕಂಪನಿಗಳು ಸ್ಥಳೀಯರಿಗೇ ಉದ್ಯೋಗ ನೀಡುವಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವಕುಮಾರಸ್ವಾಮಿ, ರಂಗಸ್ವಾಮಿ, ಚಂದ್ರಶೇಖರ್, ಕುಮಾರಸ್ವಾಮಿ ಉಪಸ್ಥಿತರಿದ್ದರು.

Translate »