ಎಸ್‍ಎಸ್‍ಎಲ್‍ಸಿ: ರಾಜ್ಯಕ್ಕೆ ಹಾಸನ ಪ್ರಥಮಶೇ 89.75ರಷ್ಟು ಫಲಿತಾಂಶ, ಬಾಲಕಿಯರೇ ಮೇಲುಗೈ
ಹಾಸನ

ಎಸ್‍ಎಸ್‍ಎಲ್‍ಸಿ: ರಾಜ್ಯಕ್ಕೆ ಹಾಸನ ಪ್ರಥಮಶೇ 89.75ರಷ್ಟು ಫಲಿತಾಂಶ, ಬಾಲಕಿಯರೇ ಮೇಲುಗೈ

May 1, 2019

ಹಾಸನ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟ ಗೊಂಡಿದ್ದು, ಹೊಯ್ಸಳರ ನಾಡು ಹಾಸನ ಜಿಲ್ಲೆ ಶೇ. 89.75ರಷ್ಟು ಫಲಿತಾಂಶದೊಂದಿಗೆ ರಾಜ್ಯದ 34 ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯು 7ನೇ ಸ್ಥಾನ ಪಡೆದಿತ್ತು. ಆಗ ಶೇ 84.68ರಷ್ಟು ಫಲಿತಾಂಶ ದೊರಕಿತ್ತು. ಈ ಬಾರಿ ಶೇ 89.75ರಷ್ಟು ಫಲಿತಾಂಶ ಬಂದಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 19,709 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 17,689 ಮಂದಿ ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯ ಒಟ್ಟು 512 ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಪೈಕಿ ಒಟ್ಟು 147 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿದೆ. ಎಸ್.ಮಾನಸ ಶಾಲೆ, ಕುಶಾಲನಗರ, ಸಕಲೇಶಪುರ ಈ ಶಾಲೆ ಶೂನ್ಯ ಫಲಿತಾಂಶ ಪಡೆದಿದೆ.

ತಾಲೂಕುವಾರು ಫಲಿತಾಂಶದಲ್ಲಿ ಸಕಲೇಶಪುರ ಶೇ. 91.13 ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯಲ್ಲಿ ತಾಲೂಕು ವಾರು ಸಕಲೇಶಪುರ ಪ್ರಥಮ ಸ್ಥಾನ ಪಡೆದಿದೆ. ವಿಜಯ ಆಂಗ್ಲ ಪ್ರೌಢ ಶಾಲೆಯ ಬಿ.ಅಭಿನ್ ಮತ್ತು ಪ್ರಗತಿ ಎಂ.ಗೌಡ ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 2ನೇ ಸ್ಥಾನವನ್ನು ಪಡೆದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 10,163 ಬಾಲಕಿಯರು, 9,546 ಬಾಲಕರು ಪರೀಕ್ಷೆ ಬರೆದಿದ್ದು, ಈ ಪೈಕಿ 9,293 ಬಾಲಕಿಯರು ಹಾಗೂ 8,396 ಬಾಲಕರು ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ವಿಜಯ ಶಾಲೆಯ ವಿದ್ಯಾರ್ಥಿಗಳ ಸಾಧನೆ: ವಿಜಯ ಶಾಲೆಯ ವಿದ್ಯಾರ್ಥಿಗಳಾದ ಅಭಿನ್.ಬಿ ಮತ್ತು ಪ್ರಗತಿ ಎಂ.ಗೌಡ 625ಕ್ಕೆ 624 ಅಂಕಗಳಿಸಿದ್ದು, ರಾಜ್ಯಕ್ಕೆ ಎರಡನೇ ಸ್ಥಾನವನ್ನು ಹಂಚಿ Éೂಂಡಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪ್ರಗತಿ ಎಂ.ಗೌಡ ಕನ್ನಡದಲ್ಲಿ 124, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 100, ಹಾಗೂ ಸಮಾಜ ವಿಜ್ಞಾನ 100 ಅಂಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅಭಿನ್.ಬಿ ಕನ್ನಡದಲ್ಲಿ 125, ಇಂಗ್ಲೀಷ್ 100, ಹಿಂದಿ 99, ಗಣಿತ 100, ವಿಜ್ಞಾನ 100, ಹಾಗೂ ಸಮಾಜ ವಿಜ್ಞಾನ 100 ಅಂಕಗಳನ್ನು ತನ್ನದಾಗಿಸಿ ಕೊಂಡಿದ್ದು ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.
ಬೇಲೂರು ವರದಿ: ತಾಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ಶೇ. 77.68 ರಷ್ಟು ಫಲಿತಾಂಶ ಬಂದಿದ್ದು ಪರೀಕ್ಷೆಗೆ ಹಾಜರಾಗಿದ್ದ 2,161 ವಿದ್ಯಾರ್ಥಿಗಳ ಪೈಕಿ 1,777 ವಿದ್ಯಾರ್ಥಿಗಳು ತೇರ್ಗಡೆಯಾಗಿ ದ್ದಾರೆ. ತಾಲೂಕಿನ ಗೆಂಡೆಹಳ್ಳಿಯ ಸರ್ಕಾರಿ ಶಾಲೆಯಲ್ಲಿ ರಕ್ಷಿತ್.ಜಿ ಎಂಬ ವಿದ್ಯಾರ್ಥಿ 578 ಅಂಕಗಳಿಂದ ಉನ್ನತ ದರ್ಜೆಯಲ್ಲಿ ಉತ್ತೀರ್ಣ ನಾಗಿದ್ದಾನೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾನೆ. ಖಾಸಗಿ ಶಾಲೆಯ ವಿದ್ಯಾರ್ಥಿನಿ ಕೆ.ಎಂ.ಪ್ರತೀಕ್ಷಾ 619 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

Translate »