ಕನ್ನಡ ಓದಲು ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳ ಹಿಂಜರಿಕೆ
ಮೈಸೂರು

ಕನ್ನಡ ಓದಲು ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳ ಹಿಂಜರಿಕೆ

October 15, 2019

ಮೈಸೂರು, ಅ.14(ಆರ್‍ಕೆಬಿ)-ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿ ಗಳು ಕನ್ನಡ ಭಾಷೆಯನ್ನು ಓದಲು ಹಿಂಜರಿಯುತ್ತಿದ್ದಾರೆ. ಹೀಗಾದರೆ ಕನ್ನಡದ ಪರಿಸ್ಥಿತಿ ಏನಾಗಬಹುದು ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾ ಪಕಿ ಡಾ.ಎನ್.ಕೆ.ಲೋಲಾಕ್ಷಿ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ವಿಜಯನಗರ ಮೊದಲ ಹಂತದಲ್ಲಿ ಜಿಲ್ಲಾ ಸಾಹಿತ್ಯ ಭವನದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಾಲ ಸಾಹಿತ್ಯ ಚಿಂತನ ಬಳಗ ಆಯೋಜಿಸಿದ್ದ ಕೆ.ಎಸ್. ರೇಣುಕಾಪ್ರಸಾದ್ ಅವರ `ಶಬ್ಧಮಣಿದರ್ಪಣ’ದ ಅವಲೋಕನ ಹಾಗೂ `ಛಂದೋಲೋಕ’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಹಳೆಗನ್ನಡ ವ್ಯಾಕರಣವಷ್ಟೇ ಅಲ್ಲ. ನಮ್ಮ ನಡುವೆ ಇರುವ ಭಾಷೆಗಳು ಕೂಡ ಕನ್ನಡವನ್ನು ರೂಪಿಸುತ್ತವೆ. ಆದರೆ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕಲಿಯಲು ಹಿಂಜರಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃತಿ ಕುರಿತು ಮಾತನಾಡಿದ ಅವರು, ಬದುಕಿಗೂ ವ್ಯಾಕರಣಕ್ಕೂ ಏನೋ ಸಂಬಂಧವಿದೆ. ಈ ಕೃತಿಗಳನ್ನು ನಾವು ಏಕೆ ಓದಬೇಕು? ಕೃತಿಗಳು ನಮ್ಮ ಬದುಕಿಗೆ ಏಕೆ ಮುಖ್ಯ? ಕನ್ನಡ ಭಾಷೆಯಲ್ಲಿ ಸಾವಿರಾರು ವರ್ಷ ಪ್ರಯಾಣ ಮಾಡಿದ್ದೇವೆ. ಕನ್ನಡ ಬೇಕಾದಷ್ಟು ಬದಲಾವಣೆಗಳಿಗೆ ಒಳಗಾಗಿದೆ. ಆಡುಗನ್ನಡ ಕೂಡ ಒಂದು ಕನ್ನಡ ಭಾಷೆಯ ಗ್ರಾಂಥಿಕ ರೂಪಕ್ಕೆ ಸಮನಾದ ಸ್ಥಾನವನ್ನು ಪಡೆ ಯುವ ನೆಲೆಯಲ್ಲಿ ನಮಗೆ ಈ ಛಂದಸ್ಸಿನ ಪುಸ್ತಕಗಳು ಮತ್ತು ಅಧ್ಯ ಯನ ಹಾಗೂ ವ್ಯಾಕರಣಗಳ ಅಧ್ಯಯನಗಳು ಕೂಡ ಏಕೆ ಮುಖ್ಯ? ಹಾಗಾದರೆ ಕನ್ನಡ ಭಾಷೆಗೆ ಇರುವ ಪ್ರಾಚೀನ ನೆಲೆ ಯಾವುದು? ಜಗತ್ತಿಗೆ ಬೇಕಾದಷ್ಟು ಭಾಷೆಗಳಿವೆ. ಭಾರತಕ್ಕೂ ಬೇಕಾದಷ್ಟು ಭಾಷೆಗಳಿವೆ. ಹಾಗಾದರೆ ಭಾಷೆ ಎಂದರೇನು? ಭಾಷೆ ನಮಗೆ ಏಕೆ ಮುಖ್ಯ? ನಾವು ಭಾಷೆಯ ನೆಲೆಯಲ್ಲಿ ಏಕೆ ಬದುಕಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಕೆ.ಎಸ್.ರೇಣುಕಾಪ್ರಸಾದ್ ಅವರ ಈ ಕೃತಿಯ ಮೂಲಕ ಉತ್ತರ ಕಂಡುಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಹಲವು ಸಾಧಕರಿಗೆ ಕರ್ನಾಟಕ ಗುರು ಶಿರೋಮಣಿ, ಕರ್ನಾಟಕ ಸಾಹಿತ್ಯ ಶಿರೋಮಣಿ, ಕರ್ನಾಟಕ ಸಂಘಟನಾ ಶಿರೋಮಣಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಹುಣಸೂರು ತಾಲೂಕು ಕಸಾಪ ಮಾಜಿ ಅಧ್ಯಕ್ಷ ನವೀನ್ ಎನ್.ರೈ, ಕೃತಿಕಾರ ಕೆ.ಎಸ್.ರೇಣುಕಾಪ್ರಸಾದ್, ಡಾ.ಮಹದೇವಪ್ರಸಾದ್, ರಾಜಶೇಖರ ಕದಂಬ, ಕವಿ ಡಾ.ಜಯಪ್ಪ ಹೊನ್ನಾಳಿ, ಇನ್ನಿತರರು ಉಪಸ್ಥಿತರಿದ್ದರು. ಬಳಿಕ ಆದರ್ಶ ಶಿಕ್ಷಕಿ ದಿ.ಸಿಸ್ಟರ್ ಲೀನಾ ಮಸ್ಕರೇನ್ಹಸ್‍ರ ಸ್ಮರಣಾರ್ಥ ಕವಿಗೋಷ್ಠಿ ನಡೆಯಿತು.

Translate »