ಮೈಸೂರು-ನಂಜನಗೂಡು, ಮೈಸೂರು-ತಿ.ನರಸೀಪುರ ಮಾರ್ಗದಲ್ಲಿ ಟೋಲ್ ಶುಲ್ಕ ಸಂಗ್ರಹ ಆರಂಭ
ಮೈಸೂರು

ಮೈಸೂರು-ನಂಜನಗೂಡು, ಮೈಸೂರು-ತಿ.ನರಸೀಪುರ ಮಾರ್ಗದಲ್ಲಿ ಟೋಲ್ ಶುಲ್ಕ ಸಂಗ್ರಹ ಆರಂಭ

December 9, 2019

ಮೈಸೂರು, ಡಿ.8- ಮೈಸೂರು-ನಂಜನಗೂಡು ಹಾಗೂ ಮೈಸೂರು-ತಿ.ನರಸೀಪುರ ಮಾರ್ಗದಲ್ಲಿ ಭಾನುವಾರ ಮಧ್ಯಾಹ್ನದಿಂದ ಟೋಲ್ ಸಂಗ್ರಹ ಆರಂಭವಾಗಿದೆ. ನಂಜನಗೂಡು ರಸ್ತೆ, ಕಡಕೊಳ ಸಮೀಪದ ಕೆ.ಎನ್.ಹುಂಡಿ ಹಾಗೂ ಟಿ.ನರಸೀಪುರ ರಸ್ತೆಯ ಎಡತೊರೆ ಬಳಿ ನಿರ್ಮಿ ಸಿರುವ ಟೋಲ್ ಪ್ಲಾಜಾದಲ್ಲಿ ಸೂಚನಾ ಪತ್ರ ಅಳವಡಿಸಿ, ಶುಲ್ಕ ಸಂಗ್ರಹ ಆರಂಭಿಸಲಾಗಿದ್ದು, ಸ್ಥಳೀಯರು ಹಾಗೂ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಾರು, ಜೀಪ್ ಹಾಗೂ ವ್ಯಾನ್‍ಗೆ ಒನ್ ವೇ ಟ್ರಿಪ್ 45, ಆ ದಿನವೇ ವಾಪಸ್ಸಾದರೆ ಒಟ್ಟು 70 ರೂ., ಮಾಸಿಕ ಪಾಸ್(50 ಸಿಂಗಲ್ ಜರ್ನಿ)1550ರೂ. ನಿಗದಿಪಡಿಸಲಾಗಿದೆ. ಎಲ್‍ಸಿವಿ, ಎಲ್‍ಜಿವಿ ಹಾಗೂ ಮಿನಿ ಬಸ್‍ಗಳಿಗೆ ಒನ್ ವೇ ಟ್ರಿಪ್ 75, ರಿಟನ್ ಜರ್ನಿಗೆ 115ರೂ. ಹಾಗೂ ಮಾಸಿಕ ಮಾಸ್ 2,500ರೂ., ಟ್ರಕ್ ಮತ್ತು ಬಸ್‍ಗೆ ಒನ್ ವೇ ಟ್ರಿಪ್ 155 ರೂ., ರಿಟರ್ನ್ ಜರ್ನಿ 115 ರೂ., ಮಾಸಿಕ ಪಾಸ್ 5,240 ರೂ., ಹೆವಿ ಕನ್ಸ್ಟ್ರಕ್ಷನ್ ಮೆಷಿನರಿ, ಅರ್ಥ್ ಮೂವಿಂಗ್ ಎಕ್ಯೂಪ್‍ಮೆಂಟ್ ವಾಹನ ಗಳಿಗೆ ಒನ್ ವೇ ಟ್ರಿಪ್ 170-245ರೂ., ರಿಟರ್ನ್ ಜರ್ನಿ 255-370ರೂ., ಮಾಸಿಕ ಪಾಸ್ 5715-8220ರೂ., ಭಾರೀ ವಾಹನ ಗಳು(7 ಅಕ್ಸೆಲ್ಸ್‍ಗಿಂತ ಹೆಚ್ಚು) ಒನ್ ವೇ ಟ್ರಿಪ್ 300ರೂ., ರಿಟರ್ನ್ ಜರ್ನಿ 450ರೂ., ಮಾಸಿಕ ಪಾಸ್ 10,005 ರೂ. ನಿಗದಿಪಡಿಸಿ, ಸಂಗ್ರಹಿಸಲಾಗುತ್ತಿದೆ.

ಟೋಲ್ ಪ್ಲಾಜಾ ಇರುವ ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಮರ್ಷಿಯಲ್ ವೆಹಿಕಲ್(ಹಳದಿ ಬೋರ್ಡ್)ಗಳಿಗೆ ಶುಲ್ಕದಲ್ಲಿ ಶೇ.45ರಿಂದ 50ರಷ್ಟು ರಿಯಾಯ್ತಿ ನೀಡ ಲಾಗಿದೆ. ನಾನ್ ಕಮರ್ಷಿಯಲ್(ವೈಟ್ ಬೋರ್ಡ್) ಸ್ಥಳೀಯ ವಾಹನಗಳಿಗೆ ಮಾಸಿಕ 265 ರೂ. ಮಾಸಿಕ ಪಾಸ್ ವ್ಯವಸ್ಥೆ ಮಾಡ ಲಾಗಿದೆ. ದ್ವಿಚಕ್ರ, ತ್ರಿಚಕ್ರ, ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಚಟುವಟಿಕೆಗೆ ಬಳಸುವ ವಾಹನ ಗಳಿಂದ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ. ಸಾರಿಗೆ ಸಂಸ್ಥೆ ಬಸ್‍ಗಳಿಂದಲೂ ಟೋಲ್ ಸಂಗ್ರಹಿಸಲಾಗುತ್ತಿದೆ. ಮೈಸೂರು-ನಂಜನ ಗೂಡು ನಡುವೆ ಭಾನುವಾರ ಸಿಟಿ ಬಸ್‍ನ 48 ಟ್ರಿಪ್‍ಗೆ ಚಾಲಕರು ಶುಲ್ಕ ಪಾವತಿಸಿ ದ್ದಾರೆ. ಸಾರಿಗೆ ಸಂಸ್ಥೆ ಬಸ್‍ಗಳಿಗೆ ರಿಯಾಯ್ತಿ ಸಂಬಂಧ ಸಂಸ್ಥೆ ಮಟ್ಟದಲ್ಲಿ ಚರ್ಚೆ ನಡೆಯು ತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಾದ್ಯಂತ ಹೆದ್ದಾರಿಗಳಲ್ಲಿ ವಾಹನಗಳಿಂದ ಟೋಲ್ ಸಂಗ್ರಹ ಮಾಡಲು ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ನಿರ್ಧರಿಸಿ, ಕಳೆದ ನವೆಂಬರ್ 20ರಂದು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. 24 ಕಿ.ಮೀ ಉದ್ದದ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ 766 ಯೋಜನೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದ್ದು, ಅದು ಕೊಳ್ಳೇಗಾಲದ ಉತ್ತಂಬಳ್ಳಿ, ಬಂಡೀಪುರದ ಮೂಲೆಹೊಳೆ ಹಾಗೂ ಕೇರಳದ ಕೋಜೀಕೋಡ್‍ಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಯೋಜನೆಗೆ 429.45 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಈ ರಸ್ತೆಯನ್ನು ನಿರ್ವಹಣೆ ಮಾಡಬೇಕಾಗಿರುವುದರಿಂದ ಇಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವಾಲಯ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಟೋಲ್‍ಗೆ ಭಾರೀ ವಿರೋಧ: ಟೋಲ್ ಸಂಗ್ರಹದ ವಿಚಾರ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಮಂಗಳಮುಖಿಯರು ಟೋಲ್ ಪ್ಲಾಜಾ ಬಳಿ ಜಮಾಯಿಸಿದರು. ರಸ್ತೆ ಸುಸ್ಥಿತಿಯಲ್ಲಿಲ್ಲ ಅಲ್ಲದೆ ಟೋಲ್ ವ್ಯವಸ್ಥೆಯೂ ಸಮರ್ಪಕ ವಾಗಿಲ್ಲ. ಹಲವೆಡೆ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ 4 ಪಥದ ರಸ್ತೆಯೇ ಆಗಿಲ್ಲ. ಹೀಗಿರುವಾಗ ತರಾತುರಿಯಲ್ಲಿ ಟೋಲ್ ಸಂಗ್ರಹಿಸಿದರೆ ಸಾರ್ವಜನಿಕರಿಗೆ ಅನ್ಯಾಯವಾ ದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಒಂದೂವರೆ ಗಂಟೆಗಳ ಕಾಲ ಟೋಲ್ ಸಂಗ್ರಹವನ್ನೇ ಬಂದ್ ಮಾಡಲಾಗಿತ್ತು. ಮೈಸೂರು ದಕ್ಷಿಣ ಠಾಣೆ ಸಬ್‍ಇನ್ ಸ್ಪೆಕ್ಟರ್ ವನರಾಜು ಹಾಗೂ ಸಿಬ್ಬಂದಿ ಯಾವುದೇ ಗಲಾಟೆಗೆ ಅವಕಾಶ ನೀಡದಂತೆ ನಿಗಾ ವಹಿಸಿದ್ದರು. ಇತ್ತೀಚೆಗೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರು ವಿರೋಧ ವ್ಯಕ್ತಪಡಿಸಿದ್ದರು. ರಸ್ತೆ ಅಭಿವೃದ್ಧಿಯಾಗದೆ ಟೋಲ್ ಸಂಗ್ರಹಿಸುವುದು ಸರಿಯಲ್ಲ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಅವರೂ ಬೇಸರ ವ್ಯಕ್ತಪಡಿಸಿದ್ದರು.

Translate »