ಕಳೆಕಟ್ಟಿದ ಸುತ್ತೂರು ಜಾತ್ರಾ ಮಹೋತ್ಸವ
ಮೈಸೂರು ಗ್ರಾಮಾಂತರ

ಕಳೆಕಟ್ಟಿದ ಸುತ್ತೂರು ಜಾತ್ರಾ ಮಹೋತ್ಸವ

January 22, 2020

ಮುಂಜಾನೆಯಿಂದಲೇ ಧಾರ್ಮಿಕ ಕೈಂಕರ್ಯ ಕಂಗೊಳಿಸುತ್ತಿರುವ ಕ್ಷೇತ್ರದಲ್ಲಿ ಜನವೋ-ಜನ
ಆರು ದಿನಗಳ ಕಾಲ ಮೇಳೈಸುವ ಕಾರ್ಯಕ್ರಮಗಳು ಭಕ್ತರಿಗೆ ವಿಧ-ವಿಧವಾದ ಪ್ರಸಾದ ವಿತರಣೆ
ಸ್ವಚ್ಛತೆಗೆ ಆದ್ಯತೆ, ಪ್ಲಾಸ್ಟಿಕ್‍ಗೆ ನಿಷೇಧ
ಮೈಸೂರು, ಜ.21(ರವಿ/ಎಲ್‍ಎಂಡಿ)-ಇಂದಿನಿಂದ ಆರಂಭವಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆ ಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿ ಗಳು ಆಗಮಿಸಿದ್ದಾರೆ. ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ.

6 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನಿತ್ಯವೂ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜಾತ್ರೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂ ಪರೆ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲೆಂದೇ ನೆರೆಯ ರಾಜ್ಯಗಳಿಂದ ಅಪಾಋ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.

ಮುಂಜಾನೆಯಿಂದ ಪೂಜಾ ಕೈಂಕರ್ಯ: ಜಾತ್ರಾ ಮಹೋತ್ಸವದ ಮೊದಲ ದಿನದ ಇಂದು ಶ್ರೀ ಶಿವಯೋಗಿಗಳ ಗದ್ದುಗೆಗೆ ವಿವಿಧ ಬಗೆಯ ಪುಷ್ಪಾಲಂಕಾರ ಮಾಡ ಲಾಗಿತ್ತು. ಭಕ್ತರು ಸರತಿ ಸಾಲಲ್ಲಿ ಬಂದು ದರ್ಶನ ಪಡೆದರು. ಮುಂಜಾನೆ 4 ಗಂಟೆಯಿಂದಲೇ ಕರ್ತೃ ಗದ್ದುಗೆಯಲ್ಲಿ ಧಾರ್ಮಿಕ ಪೂಜಾ ಕಾರ್ಯಗಳು ಆರಂಭ ವಾದವು. ಪ್ರಧಾನ ಆಗಮಿಕರಾದ ಶಾಂತ ವೀರದೇವರು, ಸೋಮೇಶ್‍ರಿಂದ ಅನುಜ್ಞಾ ಪೂಜೆ, ಮಹಾಸಂಕಲ್ಪ, ಮಹಾ ರುದ್ರಾಭಿಷೇಕ ಸೇರಿ ದಂತೆ ವಿವಿಧ ಕೈಂಕರ್ಯ ಜರುಗಿದವು.

46 ಸಾವಿರ ಸ್ಟೀಲ್ ತಟ್ಟೆ!: ಜಾತ್ರಾ ಮಹೋ ತ್ಸವಕ್ಕೆ ಆಗಮಿಸುವ ಸಮಸ್ತ ಭಕ್ತರಿಗೆ ಪ್ರತಿನಿತ್ಯ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮಹಾ ದಾಸೋಹ ಸೇರಿದಂತೆ 5 ಕಡೆಗಳಲ್ಲಿ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಐಪಿ, ವಿವಿಐಪಿ, ಸ್ವಯಂ ಸೇವಕರು, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಚ್ಛತೆ ದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದು, ದಾಸೋಹಕ್ಕಾಗಿ ರಾಜಸ್ಥಾನದಿಂದ 46 ಸಾವಿರ ಸ್ಟೀಲ್ ತಟ್ಟೆಗಳನ್ನು ತರಿಸಲಾಗಿದೆ.

ಬಗೆಬಗೆಯ ಪ್ರಸಾದ: ಸಿಹಿಪೆÇಂಗಲ್, ಉಪ್ಪಿಟ್ಟು ಬೆಳಗಿನ ಪ್ರಸಾದವಾದರೆ, ಮಧ್ಯಾಹ್ನ ಹಾಗೂ ರಾತ್ರಿ ತರಕಾರಿ ಹುಳಿ, ಪಾಯಸ, ಬೂಂದಿ, ಅನ್ನ ಸಂಬಾರ್, ಮಜ್ಜಿಗೆ, ಉಪ್ಪಿನ ಕಾಯಿಯನ್ನು ಪ್ರಸಾದವನ್ನಾಗಿ ನೀಡಲಾಗು ತ್ತದೆ. 6 ದಿನದ ಜಾತ್ರೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಜಾತ್ರೆಗೆ ಬರುವ ಅಂದಾಜಿನೊಂದಿಗೆ ಪ್ರಸಾದದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಶೇಷ ದೀಪಾಂಕಾರ: ಶ್ರೀ ಮಠದ ಕರ್ತೃಗದ್ದುಗೆ, ನದಿ ಬಳಿ ಸೇರಿದಂತೆ ವಿವಿಧ ವೇದಿಕೆಗಳಿಗೆ ದೀಪಾಲಂಕಾರ ಮಾಡ ಲಾಗಿದೆ. ಕ್ಷೇತ್ರವೆಲ್ಲ ವಿದ್ಯುತ್ ದ್ವೀಪಾಲಂಕಾರ ದಿಂದ ಕಂಗೊಳಿಸುತ್ತಿದೆ. ರಾತ್ರಿ ವೇಳೆ ಭಕ್ತಾದಿ ಗಳಿಗೆ ತೊಂದರೆಯಾಗದಂತೆ ಅಲ್ಲಲ್ಲಿ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಲಾಗಿದ್ದು, ವಸ್ತು ಸಂಗ್ರಹಾಲಯದ ನೂತನ ಕಟ್ಟಡಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದೆ.

ಅಗತ್ಯ ಸೌಕರ್ಯ: ದೂರದಿಂದ ಬರುವ ಭಕ್ತರಿಗೆ ತಾತ್ಕಾಲಿಕ ಕುಟೀರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ.

Start to Suttur Jatra -1

ಸ್ವಚ್ಛತೆಗೆ ಆದ್ಯತೆ: ಶ್ರೀಕ್ಷೇತ್ರದಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಬೆಳಿಗ್ಗೆ ಹಾಗೂ ಸಂಜೆ ರಸ್ತೆಯಲ್ಲಿ ಧೂಳು ಮೇಲೇಳದಂತೆ ಟ್ಯಾಂಕರ್‍ಗಳ ಮೂಲಕ ನೀರು ಸಿಂಪಡಿಸಲಾಗುತ್ತಿದೆ. ಎಲ್ಲೂ ಕಸ, ತ್ಯಾಜ್ಯ ಬೀಳದಂತೆ ಎಚ್ಚರ ವಹಿಸಿದ್ದು, ಅಪಾರ ಸಂಖ್ಯೆಯ ಸ್ವಚ್ಛತಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜನವೋ ಜನ: ಸೋಮವಾರದಿಂದಲೇ ಕ್ಷೇತ್ರದತ್ತ ಭಕ್ತರ ದಂಡೇ ಆಗಮಿಸುತ್ತಿದ್ದು, ಜಾತ್ರೆಯ ಮೊದಲ ದಿನವೇ ಎಲ್ಲೆಲ್ಲೂ ಜನ ಸಂದಣಿ ಏರ್ಪಟಿತ್ತು. ಮಕ್ಕಳ ಆಟಿಕೆ ಮಳಿಗೆ ಗಳು, ವಿವಿಧ ಬಗೆಯ ತಿಂಡಿ-ತಿನಿಸುಗಳ ಅಂಗಡಿಗಳು, ಮಹಿಳೆಯರ ಉಡುಗೆ-ತೊಡುಗೆ ಗಳ ಮಳಿಗೆಗಳಲ್ಲಿ ಜನ ಜಮಾಯಿಸಿದ್ದರು.

ಭಾರೀ ಬಂದೋಬಸ್ತ್…
ನಂಜನಗೂಡು: ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವಕ್ಕೆ ಭಾರೀ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ.

6 ದಿನಗಳ ಜಾತ್ರಾ ಮಹೋತ್ಸ ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತ ವಾಗಿ ಜರುಗಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿವೆ. ಜಿಲ್ಲಾಧಿಕಾರಿ ಅಭಿರಾಮ್ ಬಿ.ಶಂಕರ್, ಎಸ್ಪಿ ರಿಷ್ಯಂತ್ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಪ್ರಭಾಕರ್‍ರಾವ್ ಶಿಂಧೆ ಮಾತನಾಡಿ, ಶ್ರೀಕ್ಷೇತ್ರದಲ್ಲಿ ಅಗತ್ಯ ಭದ್ರತೆ ಕೈಗೊಳ್ಳಲಾಗಿದೆ. ಇಬ್ಬರು ಡಿವೈಎಸ್ಪಿ ಸೇರಿದಂತೆ 9 ಸರ್ಕಲ್ ಇನ್ಸ್‍ಪೆಕ್ಟರ್, 34 ಇನ್ಸ್‍ಪೆಕ್ಟರ್, 62 ಸಬ್‍ಇನ್ಸ್‍ಪೆಕ್ಟರ್‍ಗಳು, 300 ಮಂದಿ ಮುಖ್ಯಪೇದೆ ಹಾಗೂ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೆ ಕೆಎಸ್‍ಆರ್‍ಪಿ-ಡಿಎಆರ್ ತುಕಡಿಗಳು ಹಾಗೂ 3 ಕಡೆ ಮೇಟಲ್ ಡಿಕ್ಟೇಟರ್, ಶ್ವಾನ ದಳವನ್ನು ಬಳಸಿಕೊಳ್ಳ ಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಸಾದ ವಿತರಿಸುವ ಸ್ಥಳಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಿದ್ದು, ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ವಿವರಿಸಿದರು.

Translate »