ಬೆಂಗಳೂರು, ಜ.16(ಕೆಎಂಶಿ)-ರಾಜ್ಯದ ಎಲ್ಲ ಗ್ರಾಮ ಪಂಚಾ ಯ್ತಿಗಳ ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ಆರಂಭಿಸಿ ಮತ್ಸ್ಯ ಕ್ರಾಂತಿ ನಡೆಸಲು ನಿರ್ಧರಿಸಿರುವ ಸರ್ಕಾರ ಆ ಮೂಲಕ 50 ಸಾವಿರಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಿಗೆ ಉದ್ಯೋ ಗಾವಕಾಶ ಕಲ್ಪಿಸಿಕೊಡಲು ತೀರ್ಮಾನಿಸಿದೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತ ನಾಡಿದ ಮೀನುಗಾರಿಕೆ ಹಾಗೂ ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ವಿಷಯ ತಿಳಿಸಿದರಲ್ಲದೆ, ನಿರುದ್ಯೋಗಿ ಯುವಕರಿಗೆ ಮೀನುಗಾರಿಕೆಯಲ್ಲಿ ತರಬೇತಿ ನೀಡಿ ಸಾಲ ಸೌಲಭ್ಯ ದೊರಕಿಸಿ ಕೊಡಲು ಸರ್ಕಾರ ನಿರ್ಧಾರ ಮಾಡಿದೆ ಎಂದರು. ಮುಂದಿನ ಬಜೆಟ್‍ನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮುಖ್ಯಮಂತ್ರಿಗಳು ಘೋಷಿಸಲಿದ್ದು ಈ ಯೋಜನೆಯ ರೂಪು-ರೇಷೆಗಳ ಸಂಬಂಧ ಚರ್ಚಿಸಲು ನಿರಂತರವಾಗಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು. ಒಳನಾಡು ಮೀನುಗಾರಿಕೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ನಿರುದ್ಯೋಗಿ ಯುವಕ-ಯುವತಿ ಯರು ಉದ್ಯೋಗಾವಕಾಶ ಪಡೆಯಲು, ಆ ಮೂಲಕ ಸ್ವಾವಲಂಬಿ ಗಳಾಗಲು ಈ ಯೋಜನೆಯಿಂದ ಸಾಧ್ಯವಾಗಲಿದೆ ಎಂದರು.
ರಾಜ್ಯದಲ್ಲಿ ಸುಸ್ಥಿರ ಸ್ಥಿತಿಯಲ್ಲಿರುವ ಎಲ್ಲ ಕೆರೆಗಳಲ್ಲಿ ಇಂತಹ ಮೀನುಗಾರಿಕೆಗೆ ಅವಕಾಶ ಮಾಡಿಕೊಡುವುದರಿಂದ ಆಹಾರ ಉತ್ಪಾದನೆಯ ವಿಷಯದಲ್ಲಿ ಇನ್ನಷ್ಟು ಸ್ವಾವಲಂಬನೆ ಕಾರ್ಯ ಸಾಧ್ಯವಾಗುತ್ತದೆ. ಈ ಮುಂಚೆ ಒಳನಾಡು ಮೀನುಗಾರಿಕೆಯ ವಿಷಯ ಬಂದಾಗ ಕೆಆರ್‍ಎಸ್ ಸೇರಿದಂತೆ ಪ್ರಮುಖ ಜಲಾ ಶಯಗಳಲ್ಲಿ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ ಎಲ್ಲ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಮೀನುಗಾರಿಕೆ ಕಾರ್ಯಕ್ಕೆ ಉತ್ತೇಜನ ನೀಡುವುದರಿಂದ ಅಪಾರ ಪ್ರಮಾಣದ ಉದ್ಯೋಗಾವ ಕಾಶ ಸೃಷ್ಟಿಯಾಗುತ್ತದೆ. ಈ ರೀತಿ ಕೆರೆಗಳಲ್ಲಿ ಮೀನುಗಾರಿಕೆ ನಡೆ ಸುವ ಪ್ರಕ್ರಿಯೆಯಲ್ಲಿ ಮೀನು ಮರಿಗಳನ್ನು ಬಿಡುವುದು, ಅವು ಗಳನ್ನು ಪೋಷಿಸುವುದು ಮತ್ತು ನಿರ್ದಿಷ್ಟ ಅವಧಿಯ ನಂತರ ಮೇಲೆ ತೆಗೆಯುವುದರಿಂದ ಕೆರೆಗಳೂ ಉತ್ತಮ ಸ್ಥಿತಿಗೆ ಬರುತ್ತವೆ.
ಪ್ರತಿ ಕೆರೆಗಳಲ್ಲೂ ಮೀನುಗಾರಿಕೆ ಕಾರ್ಯ ನಡೆಸುವುದರಿಂದ ಆರ್ಥಿಕ ಚಟುವಟಿಕೆ ಹೆಚ್ಚಿ ರಾಜ್ಯಕ್ಕೂ ಅನುಕೂಲವಾಗುತ್ತದೆ. ನಿರುದ್ಯೋಗದ ಪ್ರಮಾಣವೂ ಕಡಿಮೆಯಾಗುತ್ತದೆ ಎಂದರು.
ಕಾರವಾರದಲ್ಲಿ ಸಾಗರಮಾಲಾ ಯೋಜನೆಯಡಿ ಬಂದರು ನಿರ್ಮಾಣ ಕಾರ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು,ಇದರ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದರು. ಸುಮಾರು 880 ಮೀಟರ್‍ಗಳಷ್ಟು ಉದ್ದದ ಬಂದರು ನಿರ್ಮಾಣ ಕಾರ್ಯದಿಂದ ಸಾಂಪ್ರದಾಯಿಕ ಮೀನು ಗಾರಿಕೆಗೆ ಧಕ್ಕೆಯಾಗುತ್ತದೆ ಎಂದು ಸ್ಥಳೀಯ ಮೀನುಗಾರರು ಆತಂಕ ಗೊಂಡಿದ್ದಾರೆ. ಇಂತಹ ಆತಂಕ ಅನಗತ್ಯ ಎಂದರು. ವಾಸ್ತವ ವಾಗಿ ಈ ಯೋಜನೆಗೆ ಶಿಲಾನ್ಯಾಸ ಕಾರ್ಯ ನಡೆದಿದ್ದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಸಮ್ಮಿಶ್ರ ಸರ್ಕಾರ ಇರುವ ಕಾಲದಲ್ಲಿ ಈ ಯೋಜನೆಗೆ ಮತ್ತಷ್ಟು ಸ್ಪಷ್ಟತೆ ದೊರೆಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನ ಈ ಯೋಜನೆ ಯಿಂದ ಕಾರವಾರ ಬಂದರು ನಿಜಕ್ಕೂ ಅಭಿವೃದ್ಧಿಯಾಗುತ್ತದೆ.ಆ ಮೂಲಕ ಸ್ಥಳೀಯ ಮೀನುಗಾರರಿಗೂ ಅನುಕೂಲವಾಗುತ್ತದೆ. ಇದು ಗೊತ್ತಿದ್ದರೂ ವಿರೋಧ ಪಕ್ಷಗಳು ಒಳಗಿಂದೊಳಗೇ ಮೀನು ಗಾರರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ ಎಂದು ದೂರಿದರು. ಯೋಜನೆಯನ್ನು ಜಾರಿಗೊಳಿಸುವ ವಿಷಯದಲ್ಲಿ ಸ್ಥಳೀಯ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ಸುಳ್ಳು. ಈ ಸಂಬಂಧ ನಿರಂತರವಾಗಿ ಸಭೆಗಳನ್ನು ನಡೆಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಾಗಿದೆ ಎಂದರು.