ಪಿಕ್‍ಪಾಕೆಟ್ ಮಾಡಲೆತ್ನಿಸಿದ್ದರಿಂದ ಹಲ್ಲೆ ಪೊಲೀಸರಿಗೆ ಬಂಧಿತ ಆರೋಪಿಗಳ ಹೇಳಿಕೆ
ಮೈಸೂರು

ಪಿಕ್‍ಪಾಕೆಟ್ ಮಾಡಲೆತ್ನಿಸಿದ್ದರಿಂದ ಹಲ್ಲೆ ಪೊಲೀಸರಿಗೆ ಬಂಧಿತ ಆರೋಪಿಗಳ ಹೇಳಿಕೆ

June 9, 2018

ಮೈಸೂರು: ಕೆ.ಆರ್.ಆಸ್ಪತ್ರೆ ಆವರಣದಲ್ಲಿ ರೋಗಿಗಳ ಕಡೆಯವರ ಜೇಬಿಗೆ ಕತ್ತರಿ ಹಾಕಲೆತ್ನಿಸಿದ್ದರಿಂದ ನಾವು ಆತನನ್ನು ಹಿಡಿದು ಹೊಡೆದೆವು ಎಂದು ಇರ್ಫಾನ್ ಸಾವಿಗೆ ಕಾರಣರೆಂದು ಬಂಧಿತರಾಗಿರುವ 6 ಮಂದಿ ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ನಮ್ಮ ಸಂಬಂಧಿಕರನ್ನು ಚೆಲುವಾಂಬ, ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರಿಂದ ನಾವು ಆಸ್ಪತ್ರೆ ಆವರಣದಲ್ಲಿದ್ದೆವು. ಮೇ 10ರಂದು ರಾತ್ರಿ ಆ ವ್ಯಕ್ತಿ, ರೋಗಿಯ ಕಡೆಯವರ ಬಳಿ ಪಿಕ್‍ಪಾಕೆಟ್ ಮಾಡಿದ್ದನ್ನು ನೋಡಿದ ನಾವು, ತಕ್ಷಣ ಆತನನ್ನು ಹಿಡಿದು ಹೊಡೆದೆವು ಎಂದು ಮಹದೇವ, ರಾಘವೇಂದ್ರ, ಶಶಿಕುಮಾರ್, ಪ್ರೇಮ್‍ಕುಮಾರ್, ಮದನ್ ಗೋಪಾಲ್ ಹಾಗೂ ರವಿ ದೇವರಾಜ ಠಾಣೆ ಪೊಲೀಸರಿಗೆ ವಿಚಾರಣೆ ವೇಳೆ ಹೇಳಿದ್ದಾರೆ.

ಈ ಹಿಂದೆಯೂ ಆಸ್ಪತ್ರೆ ಆವರಣದಲ್ಲಿ ಪಿಕ್‍ಪಾಕೆಟ್ ಆಗುತ್ತಿದೆ ಎಂಬುದನ್ನು ಕೇಳಿದ್ದ ನಮಗೆ ಕಣ್ಮುಂದೆಯೇ ಆತ ಪಿಕ್‍ಪಾಕೆಟ್ ಮಾಡಿದ್ದರಿಂದ ಕೋಪ ಬಂದು ಹಲ್ಲೆ ಮಾಡಿದೆವು. ಆ ಸಂದರ್ಭ ಹತ್ತಿರದಲ್ಲಿ ಯಾರೂ ಪೊಲೀಸರು ಕಾಣದ ಕಾರಣ ನಾವು ಈ ಕೃತ್ಯ ಎಸಗಿದೆವು ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Translate »