ಯೂತ್ ಹಾಸ್ಟೆಲ್‍ನಲ್ಲಿ ಸಾಹಸ ಚಟುವಟಿಕೆ ಸಂಬಂಧ ಕೋರ್ಸ್ ಆರಂಭಿಸಲು ಕ್ರಮ
ಮೈಸೂರು

ಯೂತ್ ಹಾಸ್ಟೆಲ್‍ನಲ್ಲಿ ಸಾಹಸ ಚಟುವಟಿಕೆ ಸಂಬಂಧ ಕೋರ್ಸ್ ಆರಂಭಿಸಲು ಕ್ರಮ

July 22, 2019

ಮೈಸೂರು,ಜು.21(ಪಿಎಂ)- ಮೈಸೂ ರಿನ ಯೂತ್ ಹಾಸ್ಟೆಲ್‍ನಲ್ಲಿ ಸಾಹಸ ಚಟುವಟಿಕೆಗಳ ಸಂಬಂಧ ಮೈಸೂರು ವಿವಿಯಿಂದ ಡಿಪ್ಲೊಮಾ ಮತ್ತು ಪ್ರಮಾಣ ಪತ್ರದ ಕೋರ್ಸ್‍ಗಳನ್ನು ಆರಂಭಿಸಲು ಕ್ರಮ ವಹಿಸಲಾಗುವುದು. ಜೊತೆಗೆ ವಿವಿ ಆಡಳಿತ ವ್ಯಾಪ್ತಿಯ ಕಾಲೇಜುಗಳಲ್ಲಿ ಯೂತ್ ಹಾಸ್ಟೆಲ್ ಘಟಕಗಳನ್ನು ಪ್ರಾರಂ ಭಿಸಲಾಗುವುದು ಎಂದು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರು ಪ್ರಕಟಿಸಿದರು.

ಮೈಸೂರಿನ ಗೋಕುಲಂ 2ನೇ ಹಂತದ ಲ್ಲಿರುವ ಯೂತ್ ಹಾಸ್ಟೆಲ್ ಅಸೋಸಿ ಯೇಷನ್ ಆಫ್ ಇಂಡಿಯಾದ (ವೈಹೆಚ್‍ಎಐ) ಮೈಸೂರು ಘಟಕದ ಆವರಣದಲ್ಲಿ ಅಸೋ ಸಿಯೇಷನ್‍ನ ಕರ್ನಾಟಕ ರಾಜ್ಯ ಘಟಕ ಹಾಗೂ ಮೈಸೂರು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ `ಸಾಹಸಾನ್ವೇಷಣೆಯತ್ತ ಯುವ ಪಡೆ’ ಶೀರ್ಷಿಕೆಯಡಿ ಹಮ್ಮಿ ಕೊಂಡಿದ್ದ ಎರಡು ದಿನಗಳ ರಾಜ್ಯಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಸಮಾರೋಪ ಭಾಷಣ ಮಾಡಿದರು.

ಮೈಸೂರು ವಿವಿಯಲ್ಲಿ ಈಗಾಗಲೇ ಯೋಗಿಕ್ ಸೈನ್ಸ್‍ನಲ್ಲಿ ಎಂಎಸ್‍ಸಿ ಆರಂಭಿಸಲು ಕ್ರಮ ವಹಿಸಲಾಗಿದೆ. ಇದರ ಜೊತೆಗೆ ಮೈಸೂರಿನ ಯೂತ್ ಹಾಸ್ಟೆಲ್‍ನಲ್ಲಿ (ವೈಹೆಚ್‍ಎಐ) ಸಾಹಸ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ಹಾಗೂ ಪ್ರಮಾಣ ಪತ್ರದ ಕೋರ್ಸ್ ನಡೆಸಲು ಮೈಸೂರು ವಿವಿಯಿಂದ ಅನುಮತಿ ನೀಡಲು ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿವಿ ಆಡಳಿತ ವ್ಯಾಪ್ತಿಯ ಮಹಾರಾಜ ಕಾಲೇಜು, ಸಂಜೆ ಕಾಲೇಜು, ಯುವರಾಜ ಕಾಲೇಜು, ಲಲಿತ ಕಲೆ ಕಾಲೇಜುಗಳಲ್ಲಿ ಯೂತ್ ಹಾಸ್ಟೆಲ್ ಘಟಕಗಳನ್ನು ಆರಂಭಿ ಸಲು ಕ್ರಮ ವಹಿಸಲಾಗುವುದು. ಇದಾದ ಬಳಿಕ ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಇನ್ನಿತರೆಡೆ ಇರುವ ಮೈಸೂರು ವಿವಿ ಸ್ನಾತಕೋತ್ತರ ಕೇಂದ್ರ ಗಳಲ್ಲಿ ಯೂತ್ ಹಾಸ್ಟೆಲ್ ಘಟಕಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಯುವ ಶಕ್ತಿ ಸಬಲೀಕರಣದಲ್ಲಿ ಮೈಸೂರು ವಿವಿ ಯೂತ್ ಹಾಸ್ಟೆಲ್‍ನೊಂದಿಗೆ ಸಕ್ರಿಯ ವಾಗಿ ತೊಡಗಿಸಿಕೊಳ್ಳಲಿದೆ ಎಂದು ತಿಳಿಸಿದರು.

ವಿವಿ ವ್ಯಾಪ್ತಿಯಲ್ಲಿ 1 ಲಕ್ಷದ 20 ಸಾವಿರ ವಿದ್ಯಾರ್ಥಿಗಳಿದ್ದು, ಈ ಪೈಕಿ 25 ಸಾವಿರ ವಿದ್ಯಾರ್ಥಿಗಳು ಮಾತ್ರ ಎನ್‍ಎಸ್‍ಎಸ್ ಹಾಗೂ ಎನ್‍ಸಿಸಿ ಅಂತಹ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿ ದಂತೆ 95 ಸಾವಿರ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಿಂದ ಹೊರ ಉಳಿದಿದ್ದು, ಅವರನ್ನೂ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡ ಬೇಕಿದೆ ಎಂದು ತಿಳಿಸಿದರು.

ವೈಜ್ಞಾನಿಕ ನೆಲೆಯಲ್ಲಿರಲಿ ಯುವಪೀಳಿಗೆ: ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಮಾತನಾಡಿ, ಯೂತ್ ಹಾಸ್ಟೆಲ್ ಸಂಘಟನೆ ಅತ್ಯಂತ ಮಹಾತ್ವಾ ಕಾಂಕ್ಷೆಯಿಂದ ರೂಪುಗೊಂಡಿದೆ. ಇದನ್ನು ಮೈಸೂರಿನಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಡಿ.ಮಾದೇಗೌಡರು ಶ್ರಮಿಸುತ್ತಿದ್ದಾರೆ. ಯುವಶಕ್ತಿ ಸಬಲೀಕರಣಕ್ಕಾಗಿ ಇನ್ನೂ ಅನೇಕ ವೈವಿಧ್ಯಮಯ ಕಾರ್ಯಕ್ರಮ ಗಳನ್ನು ರೂಪಿಸಲು ಯೂತ್ ಹಾಸ್ಟೆಲ್ ಸಂಘಟನೆಗೆ ಸಾಧ್ಯವಿದ್ದು, ಯುವಪೀಳಿಗೆ ಯನ್ನು ವೈಜ್ಞಾನಿಕ ನೆಲೆಯಲ್ಲಿ ಮುನ್ನಡೆ ಸಲು ಪೂರಕ ಕಾರ್ಯಕ್ರಮಗಳ ಮೂಲಕ ಈ ಸಂಘಟನೆ ಹೆಜ್ಜೆ ಹಾಕಲಿ ಎಂದು ಹಾರೈಸಿದರು. ಇದೇ ವೇಳೆ ವೈಹೆಚ್‍ಎಐ ರಾಷ್ಟ್ರೀಯ ಘಟಕದ ಸ್ಮರಣ ಕಾಣಿಕೆಯನ್ನು ಸಮ್ಮೇಳನಾಧ್ಯಕ್ಷ ಡಿ. ಮಾದೇಗೌಡ ಅವರಿಗೆ ಪ್ರೊ.ಜಿ.ಹೇಮಂತ್ ಕುಮಾರ್ ನೀಡಿ, ಅಭಿನಂದಿಸಿದರು.

ಯುವಶಕ್ತಿ ಪರಿಸರ ಸಂರಕ್ಷಿಸಿ ರಾಷ್ಟ್ರ ನಿರ್ಮಿಸಲಿ: ಇದಕ್ಕೂ ಮುನ್ನ ವಿವಿಧ ವಿಷಯಗಳ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. `ಚಾರಣಿಗರ ಸಾಹಸ ಕ್ರೀಡೆ, ಹಸುರೀ ಕರಣದ ಗುರಿ, ಇದು ಪರಿಸರ ಸಂರ ಕ್ಷಣೆಯ ಪರಿ’ ಕುರಿತು ಮಾತನಾಡಿದ ನಿವೃತ್ತ ಸೇನಾಧಿಕಾರಿ ಕರ್ನಲ್ ರವಿ ಶಿರಹಟ್ಟಿ, ಯುವಶಕ್ತಿ ಪರಿಸರ ಸಂರಕ್ಷಣೆ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಕೇವಲ ಒಂದೊಂದು ಗಿಡ ನೆಟ್ಟರೂ ಸಾಕು. ಪರಿಸರ ಸಂರಕ್ಷಣೆಗೆ ಮಹತ್ವ ಕೊಡುಗೆ ದೊರೆಯಲಿದೆ ಎಂದರು.

ಚಾರಣ ಕೈಗೊಳ್ಳುವುದು ಕೇವಲ ಮೋಜಿಗಲ್ಲ, ಬದಲಾಗಿ ಪ್ರಕೃತಿಯಲ್ಲಿ ಅಡಗಿರುವ ಸಂದೇಶ ಅರಿಯಬೇಕು. ಯಾವುದೇ ವಯೋಮಾನದವರಾದರೂ ಪ್ರಕೃತಿಗೆ ಪೂರಕ ಚಟುವಟಿಕೆಗಳೊಂದಿಗೆ ಬಾಳುವುದನ್ನು ಕಲಿಯಬೇಕಿದೆ. ಸಸ್ಯ ಸಂಕುಲದಲ್ಲಿ 87 ಲಕ್ಷ ವೈವಿಧ್ಯತೆ ಕಾಣ ಬಹುದು. ಅವುಗಳ ನಡುವೆ ದ್ವೇಷ ಭಾವನೆಯನ್ನು ಎಂದೂ ಕಾಣಲಾಗದು. ಅದೇ ರೀತಿ ಮಾನವರಾದ ನಾವೂ ಬದುಕಬೇಕು. ನಾವು ಬದುಕಿ ಇತರರನ್ನು ಬದುಕಲು ಬಿಡುವ ಜೀವನ ಶೈಲಿ ನಮ್ಮದಾಗಬೇಕು ಎಂದು ತಿಳಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾ ಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ, ವೈಹೆಚ್‍ಎಐ ರಾಜ್ಯಾಧ್ಯಕ್ಷ ಕೆ.ಪುರುಷೋತ್ತಮ್, ಮೈಸೂರು ಘಟಕದ ಅಧ್ಯಕ್ಷ ಹೆಚ್.ರವಿ ಕುಮಾರ್, ಜನ ಶಿಕ್ಷಣ ಸಂಸ್ಥೆ ನಿರ್ದೇಶಕ ಎ.ಪಿ.ರಮೇಶ್, ನಿವೃತ್ತ ಪ್ರಾಧ್ಯಾಪಕಿ ಪ್ರೊ.ವಸಂತಮ್ಮ ಮತ್ತಿತರರು ಹಾಜರಿದ್ದರು.

Translate »