ಹನಗೋಡು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದಿವಾಸಿ ಜನಾಂಗದ ಉನ್ನತಿಗೆ ನೀಡುತ್ತಿರುವ ಸೌಲಭ್ಯಗಳನ್ನು ಹಣದ ಆಸೆಗೆ ಇತರರಿಗೆ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎ.ಹೆಚ್. ವಿಶ್ವನಾಥ್ ಎಚ್ಚರಿಸಿದರು.
ಹನಗೋಡಿನಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ವತಿಯಿಂದ ಜೇನುಕುರುಬ ಜನಾಂಗದವರಿಗೆ ಉಳುಮೆ ಎತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ಅರಣ್ಯದ ಮೇಲೆ ಅವಲಂಬಿತವಾಗಿದ್ದ ಆದಿವಾಸಿಗಳ ಆರ್ಥಿಕ ಸ್ಥಿತಿ ಬದಲಾವಣೆಗಾಗಿ ಸರ್ಕಾರಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿ ಕೊಂಡು ಆರ್ಥಿಕಾಭಿವೃದ್ಧಿ ಹೊಂದಿ ಉತ್ತಮ ನಾಗರಿಕ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆದಿವಾಸಿಗಳು ಪಾರಂಪರಿಕವಾಗಿ ಅರಣ್ಯ ಕಿರು ಉತ್ಪನ್ನಗಳ ಸಂಗ್ರಹಕ್ಕೆ ಅವಕಾಶ ಕಲ್ಪಿಸುವ ಹಾಗೂ ಮುಖ್ಯವಾಹಿನಿಗೆ ಕರೆ ತರುವ ಹಾಗೂ ಹಾಡಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಸಮಗ್ರ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಶೀಘ್ರ ಹುಣಸೂರು ತಾಲೂಕಿನ ಹಾಡಿಯೊಂದರಲ್ಲಿ ಸಚಿವ ಸಂಪುಟ ಸಭೆ ನಡೆಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.
ಸಮಗ್ರ ಸಿಸಿಡಿ ಯೋಜನೆಗೆ ಬದ್ಧ: ಸಿಸಿಡಿ ಯೋಜನೆಯಡಿ ಆದಿವಾಸಿಗಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳಿದ್ದು, ಆ ಮೂಲಕ ಅಗತ್ಯ ಮನೆಗಳು, ಅಂಗನ ವಾಡಿ ಕಟ್ಟಡಗಳ ನಿರ್ಮಾಣ, ಶುದ್ಧಕುಡಿಯುವ ನೀರಿನ ಘಟಕಗಳ ಸ್ಥಾಪಿಸಲಾಗುವುದು, ಗಂಗಾ ಕಲ್ಯಾಣ ಯೋಜನೆಯಡಿ 350 ಪಂಪ್‍ಸೆಟ್, ಪುನರ್ವಸತಿ ಕೇಂದ್ರ ಸೇರಿದಂತೆ ಹಾಡಿಗಳಲ್ಲಿ ಬಿರ್ಸಾ ಮುಂಡ ಹೆಸರಿನ ಭವನ ನಿರ್ಮಿಸಲಾಗುವುದು. ಇದರ ಅನುಷ್ಟಾನಕ್ಕಾಗಿ ಶೀಘ್ರ ಅಧಿಕಾರಿಗಳು ಹಾಗೂ ಆದಿವಾಸಿ ಮುಖಂಡರ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪಿ.ಸಿ. ಮೋಹನ್, ಜಿಪಂ ಸದಸ್ಯ ಕಟ್ಟನಾಯಕ, ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್, ಇಓ ಕೃಷ್ಣಕುಮಾರ್, ಗ್ರಾಪಂ ಅಧ್ಯಕ್ಷ ಎಚ್.ಬಿ.ಮಧು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ವಿಸ್ತೀರ್ಣಾಧಿಕಾರಿ ಶಂಕರ್ ಸೇರಿದಂತೆ ಆದಿವಾಸಿಗಳು ಹಾಜರಿದ್ದರು.