ವಿಶೇಷ ಮಾದರಿಗಳ ಮೂಲಕ   ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ
ಮೈಸೂರು

ವಿಶೇಷ ಮಾದರಿಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ

January 5, 2019

ಮೈಸೂರು: ಮೈಸೂರಿನ ದಟ್ಟಗಳ್ಳಿಯ ಕನಕದಾಸನಗರದ ಕೌಟಿಲ್ಯ ವಿದ್ಯಾಲಯದಲ್ಲಿ ಶುಕ್ರವಾರ ನಡೆದ `ವಿಜ್ಞಾನ ವಿಹಾರ’ ಮೈಸೂರು ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಜಿಲ್ಲೆಯ 24 ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಾವು ತಯಾರಿಸಿ ತಂದಿದ್ದ ಸ್ವಚ್ಛತೆ, ಹಸಿರು ಮತ್ತು ಆರೋಗ್ಯಕರ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತು ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು. ಈ ಮೂಲಕ ತಮ್ಮ ವಿಜ್ಞಾನದ ಬಗೆಗಿನ ಪ್ರತಿಭೆಯನ್ನು ಪ್ರದರ್ಶಿಸಿದರು.

ಕೌಟಿಲ್ಯ ವಿದ್ಯಾಲಯ, ಅಟಲ್ ಟಿಂಕರಿಂಗ್ ಲ್ಯಾಬ್, ಮೈಸೂರು ಸೈನ್ಸ್ ಫೌಂಡೇಷನ್ ಸಹಯೋಗದಲ್ಲಿ `ಚೆನ್ನಾ ಗಿರಲೆಂದು ಫ್ಯೂಚರ್’, ದೇವರು ನೀಡಿದ್ದಾನೆ ನೇಚರ್, ಅದನ್ನು ಹಾಳು ಮಾಡುವವರು ನೀಚರು’ ಎಂಬ ಧ್ಯೇಯ ವಾಕ್ಯದಡಿ ವಿಜ್ಞಾನ ವಿಹಾರ ಮೇಳ ಆಯೋಜಿಸ ಲಾಗಿತ್ತು. ಪರಿಸರ ವ್ಯವಸ್ಥೆ ಮತ್ತು ಪರಿಸರ ಸೇವೆಗಳು, ಆರೋಗ್ಯ ನೈರ್ಮಲ್ಯ, ತ್ಯಾಜ್ಯದಿಂದ ಸಂಪತ್ತು, ಸಮಾಜ, ಸಂಸ್ಕøತಿ ಮತ್ತು ಜೀವನೋಪಾಯ, ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆ ಕುರಿತ ವಿಷಯಗಳ ಮೇಲೆ ತಮ್ಮ ಮಾದರಿ ಗಳನ್ನು ಪ್ರದರ್ಶಿಸಿದರು. ಒಂದಕ್ಕಿಂತ ಒಂದು ಹೆಚ್ಚು ಎಂಬಂತೆ ತಮ್ಮ ಪ್ರತಿಭೆಗಳನ್ನು ಮೆರೆದ ವಿದ್ಯಾರ್ಥಿಗಳು, ಪ್ರದರ್ಶನ ನೋಡಲು ಬಂದ ವಿದ್ಯಾರ್ಥಿಗಳಿಗೆ, ಅತಿಥಿ ಗಳಿಗೆ ಮತ್ತು ತೀರ್ಪುಗಾರರೆದುರು ತಮ್ಮ ಮಾದರಿಯ ಕುರಿತು ಸಂತಸದಿಂದ ವಿಶ್ಲೇಷಣೆ ನೀಡಿದರು.

ಪರಿಸರ ಸ್ನೇಹಿ ರೆಪ್ರಿಜಿರೇಟರ್: ಸರಗೂರು ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಆದಿತ್ಯ ಮತ್ತು ನೂತನ್ ತಾವು ತಂದಿದ್ದ ಪರಿಸರ ಸ್ನೇಹಿ ರೆಫ್ರಿಜಿರೇಟರ್ ಗಮನ ಸೆಳೆಯಿತು. ಆರ್ಥಿಕವಾಗಿ ಶಕ್ತರಲ್ಲದವರು ಸಾವಿರಾರು ರೂ. ನೀಡಿ ರೆಫ್ರಿಜಿರೇಟರ್ ಖರೀದಿಸಲು ಸಾಧ್ಯವಾಗು ವುದಿಲ್ಲ. ಅಂಥವರಿಗಾಗಿಯೇ ತಯಾರಿಸಬಹುದಾದ ವಿದ್ಯುತ್ ಅಥವಾ ಬ್ಯಾಟರಿಗಳ್ಯಾವುದೂ ಇಲ್ಲದ ಪರಿಸರ ಸ್ನೇಹಿ ರೆಫ್ರಿಜಿರೇಟರ್. ತರಕಾರಿ, ಸೊಪ್ಪು ಇನ್ನಿತರೆ ಪದಾರ್ಥ ಗಳನ್ನು ತಂಪಾದ ವಾತಾವರಣದಲ್ಲಿ ಸಂಗ್ರಹಿಸಿಟ್ಟುಕೊಳ್ಳ ಬಹುದಾಗಿದೆ ಎಂದು ವಿದ್ಯಾರ್ಥಿ ಆದಿತ್ಯ ವಿಶ್ಲೇಷಣೆ ನೀಡುತ್ತಿದ್ದ ರೀತಿ ಗಮನಾರ್ಹವಾಗಿತ್ತು.

ಪರಿಸರ ವ್ಯವಸ್ಥೆ ಹಾಳಾಗಬಾರದು: ಪರಿಸರ ವ್ಯವಸ್ಥೆ ಹಾಳಾದರೆ ಏನಾಗುತ್ತದೆ ಎಂಬುದಕ್ಕೆ ಕೊಡಗಿನ ಇತ್ತೀಚಿನ ಜಲಪ್ರಳಯವೇ ಕಾರಣ ಎಂಬುದನ್ನು ಮೈಸೂರಿನ ವಿಜಯ ವಿಠಲ ಪ್ರೌಢಶಾಲೆ ವಿದ್ಯಾರ್ಥಿಗಳಾದ ಸುಹಾಸ್, ಸುಜನ್. ತಮ್ಮ ಮಾದರಿಯ ಮೂಲಕ ಪ್ರದರ್ಶಿಸಿದರು. ಪರಿಸರ ವ್ಯವಸ್ಥೆಗೆ ವಿರುದ್ಧವಾಗಿ ನಡೆಯದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆಯೂ ಮನನ ಮಾಡಿದರು.

ಜೀವ ಸಂಕುಲಕ್ಕೆ ಅರಣ್ಯ ರಕ್ಷಣೆ: ಇದೇ ಕಲ್ಪನೆಯಡಿ ಇಲವಾಲದ ಶ್ರೀರಾಮ ವಿದ್ಯಾಕುಲದ ಪೃಥ್ವಿ ಮತ್ತು ಮೇಘನಾ, ಅರಣ್ಯ ಅಭಿವೃದ್ಧಿಯಾದರೆ ಪರಿಸರ ಉಳಿಯುತ್ತದೆ. ಅರಣ್ಯ ಬೆಳೆಸಿ, ರಕ್ಷಿಸಿದರೆ ಮಳೆ, ಬೆಳೆ, ಪ್ರಾಣಿ, ಪಕ್ಷಿ, ಮಾನವರಿಗೆ ಏಕೆ ಇಡೀ ಜೀವ ಸಂಕುಲಕ್ಕೆ ನೆರವಾಗು ತ್ತದೆ. ಅರಣ್ಯ ರಕ್ಷಿಸದಿದ್ದರೆ ಜೀವ ಸಂಕುಲಕ್ಕೆ ಎರವಾಗು ತ್ತದೆ ಎಂದು ತಮ್ಮ ಮಾದರಿಯನ್ನು ಪ್ರದರ್ಶಿಸಿದರು.

ಇದೇ ರೀತಿ ಬೆಳವಾಡಿಯ ಜ್ಞಾನೋದಯ ಪ್ರೌಢಶಾಲೆ, ಸರೋಜಿನಿ ಮತ್ತು ಸ್ಪಂದನಾ, ಬೋಗಾದಿ 2ನೇ ಹಂತದ ಪ್ರಗತಿ ವಿದ್ಯಾಕೇಂದ್ರದ ವಿಶ್ರುತಾ, ಸ್ನೇಹಾ, ಗೀತಾ ಶಿಶು ಶಿಕ್ಷಣ ಸಂಸ್ಥೆಯ ಹರ್ಷಿತಾ, ನಟರಾಜ್, ಕುವೆಂಪುನಗರದ ಕಾವೇರಿ ಪ್ರೌಢಶಾಲೆಯ ವಿಧಾತ್ರಿ, ಅನಘ ಇನ್ನಿತರ ಶಾಲೆಗಳ ತಂಡಗಳ ಮಾದರಿಗಳು ಗಮನ ಸೆಳೆಯಿತು.

ಒಬ್ಬರಿಗಿಂತ ಒಬ್ಬರು ತಮ್ಮ ಮಾದರಿಯನ್ನು ತಯಾರಿಸಿ ತಂದಿದ್ದು, ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಮಧ್ಯಾಹ್ನದವರೆಗೂ ನಡೆದ ವಿಜ್ಞಾನ ಮೇಳ ನಂತರ ಸಮಾರೋಪಗೊಂಡಿತು. ಅತ್ಯುತ್ತಮ ಮಾದರಿಗಳನ್ನು ಪ್ರದರ್ಶಿಸಿದ ವಿಜಯ ವಿಠ್ಠಲ ಶಾಲೆ, ಸಿಎಫ್‍ಟಿಆರ್‍ಐ ಶಾಲೆ, ಆರ್ಕಿಡ್ ಪಬ್ಲಿಕ್ ಶಾಲೆ, ಪಾಂಡವಪುರದ ಬಿಜಿಎಸ್ ಶಾಲೆಗಳಿಗೆ ಬಹುಮಾನಗಳನ್ನು ನೀಡಲಾಯಿತು.

ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಆಡಳಿತಾಧಿ ಕಾರಿ ಎಸ್.ಆರ್.ಸತೀಶ್‍ಚಂದ್ರ, ಸ್ಪರ್ಧೆಯ ತೀರ್ಪು ಗಾರರಾಗಿ ನಿವೃತ್ತ ಪ್ರೊ. ಅನ್ನಪೂರ್ಣೇಶ್ವರ್, ಲೊಕ್ಕನ ಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥ ಕಾಂತರಾಜು, ಯುವರಾಜ ಕಾಲೇಜಿನ ಪ್ರೊ.ಮಹೇಶ್ ಕಾರ್ಯ ನಿರ್ವಹಿಸಿದರು. ಕೌಟಿಲ್ಯ ವಿದ್ಯಾಲಯದ ಅಧ್ಯಕ್ಷ ಆರ್.ರಘು, ಪ್ರಾಂಶುಪಾಲರಾದ ಡಾ.ಎಲ್.ಸವಿತಾ, ಮೈಸೂರ್ ಸೈನ್ಸ್ ಫೌಂಡೇಷನ್‍ನ ಕಾರ್ಯದರ್ಶಿ ಸಂತೋಷ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »