ಬೆಟ್ಟಕ್ಕೆ ಪೈಪ್ ಹೊತ್ತು ಶ್ರಮದಾನ ಮಾಡಿದ ವಿದ್ಯಾರ್ಥಿಗಳು
ಹಾಸನ

ಬೆಟ್ಟಕ್ಕೆ ಪೈಪ್ ಹೊತ್ತು ಶ್ರಮದಾನ ಮಾಡಿದ ವಿದ್ಯಾರ್ಥಿಗಳು

May 7, 2019

ಅರಸೀಕೆರೆ: ದಶಮಾನಗಳಿಂದ ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿದ್ದ ಮಾಲೇಕಲ್ಲು ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿಯ ಬೆಟ್ಟದ ಮೇಲ್ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ನಡೆಯುತ್ತಿರುವ ಕಾಮ ಗಾರಿಯಲ್ಲಿ ಚಂದ್ರಶೇಖರ ಭಾರತಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನ ಮಾಡುವುದರ ಮೂಲಕ ಪೈಪ್‍ಗಳನ್ನು ಬೆಟ್ಟದ ಮೇಲ್ಭಾಗಕ್ಕೆ ಕೊಂಡೊಯ್ಯುವ ಮೂಲಕ ಭಕ್ತಾದಿಗಳ ಶ್ಲಾಘನೆಗೊಳಗಾದರು.

ರಾಜ್ಯದ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಅರಸೀಕೆರೆ ಮಾಲೇಕಲ್ಲು ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಬೆಟ್ಟವು 1,250 ಮೆಟ್ಟಿಲುಗಳನ್ನು ಹೊಂದುವ ಮೂಲಕ ಕಡಿದಾಗಿದ್ದು, ಬೆಟ್ಟದ ಮೇಲಿರುವ ದೇವರ ಪೂಜೆ ಸೇರಿದಂತೆ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಳೆದ 800 ವರ್ಷಗಳ ಹಿಂದಿನಿಂದಲೂ ಮಾಡಲು ಆಗದೇ ಜಾತ್ರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು.

ನೀರಿನ ಸಮಸ್ಯೆ ಬಗೆಹರಿಸಲು ಬೆಂಗಳೂ ರಿನ ಭಕ್ತಾದಿಗಳ ವೃಂದವು ದಾನದ ಮೂಲಕ ಸುಮಾರು 11ಲಕ್ಷ ಅಂದಾಜು ವೆಚ್ಚದ ಕುಡಿಯುವ ನೀರಿನ ವ್ಯವಸ್ಥೆ ಯನ್ನು ಮಾಡಿಸುತ್ತಿದ್ದಾರೆ. ಈ ಯೋಜನೆಯ ಮೂಲಕ ನಡೆಯುತ್ತಿರುವ ಕಾಮಗಾರಿಗಳಿಗೆ ಚಂದ್ರಶೇಖರ ಭಾರತಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಬೆಟ್ಟದ ಮೇಲ್ಘಾಗಕ್ಕೆ ಸುಮಾರು ಇಪ್ಪತ್ತು ಅಡಿಗಳ ಉದ್ದದ 50 ಪೈಪ್‍ಗಳನ್ನು ಕೊಂಡೊಯ್ದು ಶ್ರಮದಾನ ಮಾಡಿದರು.

ಕಾಲೇಜು ವಿದ್ಯಾರ್ಥಿಗಳು ಸುಮಾರು 2 ಸಾವಿರ ಅಡಿ ಗಳಷ್ಟು ಪೈಪ್‍ಗಳನ್ನು ಬೆಟ್ಟಕ್ಕೆ ಅಳವಡಿಸಲು ಸೋಮವಾರವೂ ಶ್ರಮಿಸುತ್ತಿದ್ದು ವಿಶೇಷವಾಗಿತ್ತು. ಮುಂಬರುವ ಜಾತ್ರೆಯ ವೇಳೆಗೆ ಈ ಯೋಜನೆಯು ಸಂಪೂರ್ಣಗೊಳ್ಳಲಿದ್ದು ಇದರಿಂದಾಗಿ ಜಾತ್ರಾ ಮಹೋತ್ಸವದಲ್ಲಿ ಹಾಗೂ ನಂತರದ ವಿಶೇಷ ದಿನಗಳಲ್ಲಿ ದೇವರ ಅಭಿಷೇಕ ಸೇರಿದಂತೆ ಭಕ್ತಾದಿ ಗಳಿಗೆ ಕುಡಿಯುವ ನೀರಿನ ಸೌಕರ್ಯ ಲಭಿಸಲಿದೆ.

Translate »