ಯಶಸ್ವಿ ದಸರಾ ಸಾಂಸ್ಕೃತಿಕ ಮೆರವಣಿಗೆ
ಮೈಸೂರು, ಮೈಸೂರು ದಸರಾ

ಯಶಸ್ವಿ ದಸರಾ ಸಾಂಸ್ಕೃತಿಕ ಮೆರವಣಿಗೆ

October 15, 2018

ಮೈಸೂರು: ಮೈಸೂರು ಸಾಂಸ್ಕೃತಿಕ ಸಿರಿವಂತಿಕೆಯ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ದಸರಾ ಸಾಂಸ್ಕೃತಿಕ ಮೆರವಣಿಗೆ, ಅರ್ಥಾತ್ `ಮಿನಿ ಜಂಬೂ ಸವಾರಿ’ ಭಾನುವಾರ ಅತ್ಯಂತ ಸಂಭ್ರಮದಿಂದ ನೆರವೇರಿತು.

ಕಲಾ ತಂಡಗಳಿಗೆ ಉತ್ತೇಜನ ನೀಡುವುದು ಹಾಗೂ ಮಹತ್ವದ ವಿಜಯದಶಮಿ ಮೆರವಣಿಗೆ ಯಶಸ್ಸಿಗೆ ಪೂರಕವಾಗಿ ಆಯೋಜಿಸಿದ್ದ ಈ ಮಿನಿ ಜಂಬೂಸವಾರಿ ಅದ್ಧೂರಿಯಾಗಿಯೇ ನೆರವೇರಿತು. ಆ ಮೂಲಕ ಮೈಸೂರಿಗರು, ಪ್ರವಾಸಿಗರು ವಿಜಯದಶಮಿಯ ವೈಭವದ ಒಂದು ನೋಟವನ್ನು ಮುಂಗಡವಾಗಿಯೇ ಕಣ್ತುಂಬಿಕೊಂಡರು.

750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರ್ಜುನ ಹೊತ್ತು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಲಿಲ್ಲವಾದರೂ ಸಂಗಡಿಗರಾದ ವರಲಕ್ಷ್ಮೀ ಹಾಗೂ ಕಾವೇರಿ ನಡುವೆ ವಿರಾಜಮಾನವಾಗಿ ಹೆಜ್ಜೆ ಇಡುತ್ತ ನೆರೆದಿದ್ದ ಜನ ಸಮೂಹಕ್ಕೆ ಪುಳಕವಿಟ್ಟಿತು. ನಾಡಿನ ಕಲೆ, ಸಾಹಿತ್ಯ, ಪರಂಪರೆ ಹಾಗೂ ಇತಿಹಾಸ ಪ್ರತಿಬಿಂಬಿಸುವ ಹಾಗೂ ಪ್ರಸ್ತುತದ ಸಾಮಾಜಿಕ ಸಮಸ್ಯೆಗಳ ಅನಾವರಣಗೊಳಿಸಿ ಚಿಂತನೆಗೆ ಹಚ್ಚುವ ವೈವಿಧ್ಯಮಯ ಸ್ತಬ್ಧಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ಸಾಗುವುದು ಹಿಂದಿನಿಂದಲೂ ನಡೆದು ಬಂದಿದೆ. ಅದೇ ರೀತಿ ಅ.19ರಂದು ನಡೆಯಲಿರುವ ವಿಜಯದಶಮಿ ಮೆರವಣಿಗೆಯಲ್ಲಿ ಸರತಿ ಸಾಲಿನಲ್ಲಿ ಸಾಗಲು ಸ್ತಬ್ಧಚಿತ್ರಗಳು ಸಿದ್ಧಗೊಳ್ಳುವ ಹಂತದಲ್ಲಿವೆ. ಈ ಕಾರಣ ಇವುಗಳ ಹೊರತಾಗಿ ಕಲಾ ತಂಡಗಳು ಇಂದು ಕಲಾತ್ಮಕ ಸ್ಪರ್ಶ ನೀಡಿ ಮೆರವಣಿಗೆಗೆ ಮೆರಗು ನೀಡಿದವು.

ನಂದೀಧ್ವಜಕ್ಕೆ ಡಿಸಿಎಂ ಪೂಜೆ: ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಉಪಮುಖ್ಯಮಂತ್ರಿಗಳೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ತಮ್ಮ ಪತ್ನಿ ಕನ್ನಿಕಾ ಪರಮೇಶ್ವರಿ ಜೊತೆಯಲ್ಲಿ ನಂದೀ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮಿನಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಈ ವೇಳೆ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾ ಸೋದ್ಯಮ ಸಚಿವ ಸಾ.ರಾ. ಮಹೇಶ್ ಹಾಗೂ ಡಿಸಿ ಅಭಿರಾಮ್ ಜಿ. ಶಂಕರ್ ಸೇರಿದಂತೆ ಇನ್ನಿತರ ಗಣ್ಯರು ಉಪ ಸ್ಥಿತರಿದ್ದರು. ಇದೇ ವೇಳೆ ಡಾ.ಜಿ.ಪರಮೇಶ್ವರ್ ಅವರಿಗೆ ನೀಲಿ ಪೇಟ ತೊಡಿಸಿ ಜಿ.ಟಿ.ದೇವೇಗೌಡ ಸನ್ಮಾನಿಸಿದರು. ಇದಕ್ಕೂ ಮುನ್ನ ಜಿ.ಟಿ.ದೇವೇಗೌಡರು ನಂದಿಧ್ವಜ ಕಲಾವಿದರೊಂದಿಗೆ ಕೊಂಬು ಕಹಳೆ ಮೊಳಗಿಸಿ ಪುಳಕಗೊಂಡರು.

ತಡವಾಯ್ತು: ನಂದೀಧ್ವಜ ಪೂಜೆಗೆ ಮಧ್ಯಾಹ್ನ 2ರಿಂದ 2.30 ರವರೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಉಪ ಮುಖ್ಯಮಂತ್ರಿಗಳು ಸುಮಾರು 3 ಗಂಟೆಗೆ ಆಗಮಿಸಿ, ನಂದೀಧ್ವಜಕ್ಕೆ ಪೂಜೆ ನೆರವೇರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಚುಟುಕಾಗಿ ಮಾತನಾಡಿದ ಅವರು, ವಿಜಯದಶಮಿ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಇದೇ ವೇಳೆ ನಂದೀಧ್ವಜ ಎಂಬುದು ಅಗ್ರಪೂಜೆಯಾ ಗಿದ್ದು, ಇದಕ್ಕೆ ಮುಹೂರ್ತ ಏನಾದರೂ ನಿಗದಿಯಾಗಿತ್ತೇ? ಎಂಬ ಮಾಧ್ಯಮದವರ ಪ್ರಶ್ನಿಗೆ `ಗೊತ್ತಿಲ್ಲ’ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದರು. ಬಳಿಕ ಅರಮನೆ ಒಳಾವರಣಕ್ಕೆ ಸಚಿವರು ಹಾಗೂ ಗಣ್ಯರು ತೆರಳಿ ಕಲಾ ತಂಡಗಳ ಕಲಾ ಪ್ರದರ್ಶನಕ್ಕೆ ಮುನ್ನುಡಿ ಬರೆಯುತ್ತಿದ್ದಂತೆ ಕಲಾ ತಂಡಗಳು ಸರತಿ ಸಾಲಿನಲ್ಲಿ ಮುನ್ನಡೆದವು. ನಂತರ ಬಲರಾಮ, ಅಭಿಮನ್ಯು, ಧನಂಜಯ, ಪ್ರಶಾಂತ, ಚೈತ್ರ, ವಿಜಯಾ, ದ್ರೋಣ ಒಳಗೊಂಡ ಗಜಪಡೆ ನಿಶಾನೆ ಹಾಗೂ ನೌಪತ್ ಆನೆಗಳಾಗಿ ಹೆಜ್ಜೆ ಹಾಕಿದವು. ಅಂತಿಮವಾಗಿ ಕುಮ್ಕಿ ಆನೆಗಳಾದ ವರಲಕ್ಷ್ಮೀ ಹಾಗೂ ಕಾವೇರಿಯೊಂದಿಗೆ ದಸರಾ ಗಜಪಡೆಯ ನಾಯಕ ಅರ್ಜುನ ಆಗಮಿಸುತ್ತಿದ್ದಂತೆ ಅರಮನೆ ಆರವಣದಲ್ಲಿ ನೆರೆದಿದ್ದ ಜನಸ್ತೋಮದ ಹರ್ಷೋಧ್ಘಾರ ಮುಗಿಲು ಮುಟ್ಟಿತು.

ಪುಷ್ಪಾರ್ಚನೆ: ಅಂತಿಮವಾಗಿ ಅರಮನೆ ಆವರಣದಲ್ಲಿ ಗಡಪಡೆಯ ಸಾರಥಿ ಅರ್ಜುನ, ಕಾವೇರಿ ಹಾಗೂ ವರಲಕ್ಷ್ಮೀ ಆನೆಗಳೊಂದಿಗೆ ಶೃಂಗಾರಗೊಂಡು ಬಂದು ನಿಂತಾಗ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪುಷ್ಪಾರ್ಚನೆ ನೆರವೇರಿಸಿ, ಮಿನಿ ಜಂಬೂ ಸವಾರಿಗೆ ಮುನ್ನುಡಿ ಬರೆದರು. ಈ ವೇಳೆ ಡಾ.ಪರಮೇಶ್ವರ್ ಅವರ ಪತ್ನಿ ಕನ್ನಿಕಾ ಪರಮೇಶ್ವರಿ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಾಸಕ ಹರ್ಷವರ್ಧನ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಡಿಸಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಅರ್ಜುನ ಆನೆಗೆ ಪುಷ್ಪಾರ್ಚನೆ ಸಲ್ಲಿಸುವ ವೇಳೆಗೆ ಏಳು ಪಿರಂಗಿಗಳಿಂದ ತಲಾ 3 ಸುತ್ತಿನಂತೆ 21 ಬಾರಿ ಕುಶಾಲ ತೋಪು ಸಿಡಿಸಲಾಯಿತು. ಇಂದಿನ ಸಿಡಿ ಮದ್ದು ಸಿಡಿಸಲು 1.5 ಕೆಜಿ ಮದ್ದನ್ನು ಬಳಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯ ಎಸ್‍ಐಗಳಾದ ನಾಗರಾಜು, ಕುಮಾರ್ ನೇತೃತ್ವದಲ್ಲಿ ಕುಶಾಲ ತೋಪು ಸಿಡಿಸಲಾಯಿತು.

ಮುಂಗಡವಾಗಿಯೇ ಕಣ್ತುಂಬಿಕೊಂಡರು: ಅರಮನೆ ಅಂಗಳದಲ್ಲಿದ್ದ ಪ್ರವಾಸಿಗರು ಹಾಗೂ ಅರಮನೆಗೆ ನೆಂಟರಿಷ್ಟರೊಂದಿಗೆ ಭೇಟಿ ನೀಡಿದ್ದ ಸ್ಥಳೀಯರು ಮಿನಿ ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು. ಅರ್ಜುನ ನೇತೃತ್ವದ ಗಜಪಡೆ ಸೇರಿದಂತೆ ಕಲಾ ತಂಡಗಳ ವೈಭವವನ್ನೂ ಕಣ್ತುಂಬಿಕೊಂಡರಲ್ಲದೆ, ತಮ್ಮ ಮೊಬೈಲ್‍ಗಳಲ್ಲಿ ಸಡಗರದ ದೃಶ್ಯಗಳನ್ನು ಸೆರೆ ಹಿಡಿದರು. ಚಾಮರಾಜ ಒಡೆಯರ್ ವೃತ್ತ, ಕೆಆರ್ ವೃತ್ತ ಸೇರಿದಂತೆ ಸಯ್ಯಾಜಿರಾವ್ ರಸ್ತೆಯಲ್ಲಿ ಆಯುರ್ವೇದ ವೃತ್ತ ದಾಟುತ್ತಿದ್ದಂತೆ ಅಲ್ಲಿನ ಸ್ಥಳೀಯ ನಿವಾಸಿಗಳ ಹೊರತಾಗಿ ಭಾರೀ ಜನಸ್ತೋಮವೇನು ಇರಲಿಲ್ಲ.

ಬಂದೋಬಸ್ತ್: ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಡಿಸಿಪಿ ವಿಷ್ಣುವರ್ಧನ್ ಸೇರಿದಂತೆ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬೀಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸಾಂಸ್ಕೃತಿಕ ಮೆರವಣಿಗೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯೂ ಸೆಲ್ಫಿ, ಫೋಟೋ ಗ್ರಾಫಿಯಲ್ಲಿ ಆಗಾಗ್ಗೆ ತಲ್ಲೀನರಾಗುತ್ತಿದ್ದ ದೃಶ್ಯ ಕಂಡು ಬಂದಿತು.

ಕಾಣಿಸಿಕೊಳ್ಳದ ಇನ್ನಿತರ ಕಾಂಗ್ರೆಸಿಗರು: ಡಾ.ಜಿ.ಪರಮೇಶ್ವರ್ ಹೊರತಾಗಿ ಕಾಂಗ್ರೆಸ್‍ನ ಯಾವುದೇ ನಾಯಕರು ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡರೂ ಇಲ್ಲದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದಲ್ಲಿದೆ ಎನ್ನಲಾದ ಮನಸ್ತಾಪದ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದಂತಾಯಿತು.

Translate »