ಮಳೆ ಲೆಕ್ಕಿಸದೇ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಗಾನ ಮಾಧುರ್ಯದಲ್ಲಿ ಮಿಂದೆದ್ದ ಯುವ ಸಮೂಹ
ಮೈಸೂರು, ಮೈಸೂರು ದಸರಾ

ಮಳೆ ಲೆಕ್ಕಿಸದೇ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಗಾನ ಮಾಧುರ್ಯದಲ್ಲಿ ಮಿಂದೆದ್ದ ಯುವ ಸಮೂಹ

October 15, 2018

ಮೈಸೂರು: ಯುವ ದಸರಾ ವೇದಿಕೆಯಲ್ಲಿ `ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ, ಹೇಗೋ ಜೊತೆ ಯಾಗಿ…’ ಎಂದು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡುತ್ತಿದ್ದರೆ, ನೆರೆದಿದ್ದ ಯುವ ಸಮೂಹ ಮಳೆಯನ್ನೂ ಲೆಕ್ಕಿಸದೆ ಸಂಭ್ರಮಿಸಿದರು.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾದ 3ನೇ ದಿನ ವಾದ ಭಾನುವಾರ ಸುಮಧುರ ಕಂಠದ ಅರ್ಮಾನ್ ಮಲ್ಲಿಕ್, ಒಂದರ ಹಿಂದೆ ಒಂದ ರಂತೆ ಜನಪ್ರಿಯ ಹಾಡುಗಳನ್ನು ಹರಿಬಿಟ್ಟು, ನೆರೆದಿದ್ದವರ ಮೆಚ್ಚುಗೆ ಗಳಿಸಿದರು.

`ಬಾಗಿ’ ಚಿತ್ರದ `ಸಬ್‍ತೆರಾ…’, `ಎಂ.ಎಸ್.ಧೋನಿ ದಿ ಅನ್‍ಟೋಲ್ಡ್ ಸ್ಟೋರಿ’ ಚಿತ್ರದ ಬೇಸ ಬ್ರಿಯಾನ…’ `ಇತುನಿ ಮೊಹಬ್ಬತ್ ಬೋಲ್ ದೋ ನಾ ಜರಾ…’, `ಕಭಿ ಕಭಿ ತೇರಾ ದಿಲ್ ಮೇ…’, `ತೇರೆ ದಿನ್ ಮೇನ್…’ ಹೀಗೆ ಹಲವಾರು ಹಿಂದಿ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು.

ಕನ್ನಡದ ಖ್ಯಾತ ಗಾಯಕಿ ಅನುರಾಧ ಭಟ್ ಜೊತೆಗೂಡಿ ಅರ್ಮಾನ್ ಮಲ್ಲಿಕ್ ಹಾಡಿದ `ಚಕ್ರವರ್ತಿ’ ಚಿತ್ರದ `ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ…’ ಗೀತೆ ಪ್ರೇಕ್ಷ ಕರಲ್ಲಿ ಹೊಸ ಸಂಚಲನ ಮೂಡಿಸಿತ್ತು. ಗಾಯಕರೊಂದಿಗೆ ತಾವೂ ಹಾಡಿ ಸಂತಸ ಪಟ್ಟರು. ಹಾಡು ಮುಗಿದ ಬಳಿಕ ಅರ್ಮಾನ್, ಒಂದು ಮಳೆ ಬಿಲ್ಲು ಎಂದು ಹಾಡಿದರೆ ಮುಂದಿನ ಸಾಲನ್ನು ಪ್ರೇಕ್ಷಕರೇ ಹಾಡಿ, ಉತ್ಸಾಹ ತುಂಬಿದರು. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ‘ನೋಡಿವಳಂದವಾ ಮುತ್ತಿನ ಮಾಲೆ ಚಂದವಾ…’ ಗೀತೆಯನ್ನು ಅರ್ಮಾನ್, ಮೊದಲ ಬಾರಿಗೆ ಯುವ ದಸರಾ ವೇದಿಕೆ ಯಲ್ಲಿ ಹಾಡಿ ಖುಷಿ ಹಂಚಿಕೊಂಡರು.

ಗಾಯಕಿ ಅನುರಾಧ ಭಟ್ ಹಾಡಿದ `ಚೌಕ’ ಚಿತ್ರ `ನಾನು ನೋಡಿದ ಮೊದಲ ವೀರ, ಮಾತು ಕಲಿಸಿದ ಜಾದುಗಾರ… ಅಪ್ಪಾ ಐ ಲವ್ ಯೂ ಅಪ್ಪಾ…’ ಹಾಡು ನೆರೆದಿ ದ್ದವರನ್ನು ಮಂತ್ರಮುಗ್ಧಗೊಳಿಸಿತು. ತಂದೆಯ ಬಗ್ಗೆ ಪ್ರತಿಯೊಬ್ಬರ ಮನದಲ್ಲೂ ಸುಪ್ತವಾಗಿರುವ ಅಪ್ಪನ ಮೇಲಿನ ಪ್ರೀತಿಯನ್ನು ತೆರೆದಿಡುವ ಈ ಹಾಡಿಗೆ ಎಲ್ಲರೂ ಮನ ಸೋತು, `ಅಪ್ಪಾ ಐ ಲವ್ ಯೂ…’ ಎಂದು ಸಾರಿ ಹೇಳಿದ್ದು ವಿಶೇಷವಾಗಿತ್ತು. ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭಿಸಿದ ಅರ್ಮಾನ್ ಮಲ್ಲಿಕ್, ರಾತ್ರಿ 11 ಗಂಟೆವರೆಗೂ ನಿರಂತರವಾಗಿ ಹಾಡಿ ರಂಜಿಸಿದರು. ಮಳೆಯ ಅಬ್ಬರಕ್ಕೂ ಅಳುಕದೆಆಸೀನರಾಗಿದ್ದ ಪ್ರೇಕ್ಷಕರು ಅರ್ಮಾನ್ ಮಲ್ಲಿಕ್ ಅವರ ಹಾಡಿನ ಮೋಡಿಯಲ್ಲಿ ತೇಲಿ ಹೋದರು. ಕನ್ನಡದ ಹಲವು ಚಿತ್ರಗಳಿಗೆ ಹಾಡಿರುವ ಯುವ ಗಾಯಕ ಅರ್ಮಾನ್, `ನಮಸ್ಕಾರ ಮೈಸೂರು ಹೇಗಿದ್ದಿರಾ’ ಎಂದು ಕನ್ನಡದಲ್ಲೇ ಹೇಳಿದ್ದಲ್ಲದೆ `ಕನ್ನಡ ವೆರಿ ಸ್ವೀಟೆಸ್ಟ್ ಲಾಂಗ್ವೇಜ್’ ಎಂದು ಕನ್ನಡದ ಬಗ್ಗೆ ತಮ್ಮಲ್ಲಿರುವ ಅಭಿಮಾನ ಪ್ರದರ್ಶಿಸಿದರು. ಕಾರ್ಯಕ್ರಮದುದ್ದಕ್ಕೂ ಪ್ರೇಕ್ಷಕರು ಕೇಕೆ, ಶಿಳ್ಳೆ, ಚಪ್ಪಾಳೆಯೊಂದಿಗೆ ಅರ್ಮಾನ್ ಅವರನ್ನು ಪ್ರೋತ್ಸಾಹಿಸಿದರು.

ನೃತ್ಯ ರಸದೌತಣ: ಇದಕ್ಕೂ ಮುನ್ನ ಯುವ ದಸರಾ ವೇದಿಕೆಯಲ್ಲಿ ಅನೇಕ ನೃತ್ಯ ತಂಡಗಳು ಧೂಳೆಬ್ಬಿಸಿದವು. ಮೈಸೂರಿನ ಫ್ರೀಕರ್ಜ್ ಡ್ಯಾನ್ಸ್ ಅಕಾಡೆಮಿ ಕಲಾವಿದರು, ಗಣಪತಿ, ಕೃಷ್ಣ, ರಾಮನ ಸ್ಮರಣೆಯೊಂದಿಗೆ ನೃತ್ಯ ಆರಂಭಿಸಿ, `ಟಗರು ಬಂತು ಟಗರು…’ `ಓ ಗೆಳೆಯ ಜೀವದ್ ಗೆಳೆಯಾ…’ `ಅಣ್ಣಾ ನನ್ನ ಊರು, ಅಣ್ಣಾ ನನ್ನ ಹೆಸರು, ಕೆಂಚನಳ್ಳಿ ಕೆಂಚ ಕಾನಣ್ಣೋ…’ ಗೀತೆಗಳು, ಜನಪ್ರಿಯ ಸಂಭಾಷಣೆಗಳ ಸಂಯೋಜನೆಗೆ ಅಮೋಘ ನೃತ್ಯ ಪ್ರದರ್ಶಿಸಿದರು. ಯುವ ಸ್ಕೂಲ್ ಆಫ್ ಡ್ಯಾನ್ಸ್ ತಂಡದವರೂ `ಅಣ್ಣಾ ನನ್ನ ಊರು, ಅಣ್ಣ ನನ್ನ ಹೆಸರು…’ ಹಾಗೂ `ವಾರೆ ನೋಟ ನೋಡೈತೆ, ಕಾಲು ಕೆರೆದು ನಿಂತೈತೆ… ಟಗರು ಬಂತು ಟಗರು…’ ಹಾಡುಗಳಿಗೆ ಕುಣಿದು ನೆರೆದಿದ್ದವರನ್ನೂ ಕುಣಿಸಿದರು.

ಕಲರ್ಸ್ ಡ್ಯಾನ್ಸ್ ಅಕಾಡೆಮಿ ಕಲಾವಿದರು `ಆಡು ಆಟ ಆಡೂ, ಆಡು ಆಡು ಆಡಿ ನೋಡು…’ `ಕುಲದಲ್ಲಿ ಕೀಳಾವುದೋ ಮತದಲ್ಲಿ ಮೇಲಾವುದೋ ಹುಚ್ಚಪ್ಪಾ…’ ಗೀತೆಗಳಿಗೆ ಹೆಜ್ಜೆ ಹಾಕುವುದರೊಂದಿಗೆ `ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಲಿ ಎಂಬ ಸಂದೇಶ ಸಾರಿದರು. `ಐರಾವತ…’, `ತಾಲಿಬಾನ್ ಅಲ್ಲಾ ಅಲ್ಲ…’, `ಮುಕ್ಕೋಟಿ ದೇವರು ನೋಡುತ ನಿಂತರು…’, `ಜಾಕಿ ಜಾಕಿ ಜಾಕಿ ರಾಮ ಜಾಕಿ…’ ಹೀಗೆ ಕನ್ನಡ ಹಾಗೂ ಹಿಂದಿ ಗೀತೆಗಳ ತುಣುಕಿಗೆ ನೃತ್ಯಗಾರರು ಕುಣಿದು ಧೂಳೆಬ್ಬಿಸಿದರು. ಅನೇಕ ಕಾಲೇಜು ವಿದ್ಯಾರ್ಥಿಗಳ ತಂಡಗಳು ರಾಷ್ಟ್ರೀಯ ಭಾವೈಕ್ಯತೆ, ಮಹಿಳಾ ಸಬಲೀಕರಣ, ನಾಡಿನ ಪರಂಪರೆ ಸಾರುವಂತಹ ನೃತ್ಯ ಪ್ರದರ್ಶಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ರೇಷ್ಮೆ ರಂಗು: ಮೈಸೂರಿನ ಕೆಎಸ್‍ಐಸಿ ಪ್ರಾಯೋಜಿತ ಫ್ಯಾಷನ್ ಷೋನಲ್ಲಿ ರೂಪ ದರ್ಶಿಗಳು ವಿಭಿನ್ನ ಮಾದರಿ ಉತ್ಪನ್ನಗಳನ್ನು ಪ್ರದರ್ಶಿಸಿದರು. ಅತ್ಯಾಕರ್ಷಕ ರೇಷ್ಮೆ ಸೀರೆ, ಆಭರಣಗಳನ್ನು ತೊಟ್ಟ ಸುಮಾರು 20ಕ್ಕೂ ಹೆಚ್ಚು ರೂಪದರ್ಶಿಗಳು ವೇದಿಕೆಯಲ್ಲಿ ಮಾರ್ಜಾಲ ನಡಿಗೆಯೊಂದಿಗೆ ಪ್ರೇಕ್ಷಕರ ಕಣ್ಮನ ಸೆಳೆದರು. ಇವರೊಂದಿಗೆ ವಿನೂತನ ಮಾದರಿಯ ರೇಷ್ಮೆ ಶರ್ಟ್, ಪಂಚೆ ಹಾಗೂ ಶಲ್ಯ ತೊಟ್ಟ ಯುವಕರು ಹೆಜ್ಜೆಯಿಟ್ಟು ಮೆಚ್ಚುಗೆ ಪಡೆದರು. ಮೈಸೂರು ಸಿಲ್ಕ್ ಉದ್ಯಮ ಆರಂಭವಾಗಿ 106 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಪಾಲ್ಗುಡಿ ಹಾಗೂ ಮೋಹನ್ ಸಂಯೋಜಿಸಿದ್ದ ಫ್ಯಾಷನ್ ಶೋನಲ್ಲಿ ಶತಮಾನದ ರೇಷ್ಮೆ ರಂಗು ಮೂಡಿಸಿದಂತಿತ್ತು. ಒಟ್ಟಾರೆ ಅಪಾರ ನಿರೀಕ್ಷೆಯೊಂದಿಗೆ ಯುವ ದಸರಾದಲ್ಲಿ ಕಿಕ್ಕಿರಿದಿದ್ದ ಪ್ರೇಕ್ಷಕರು, ಇಡೀ ಕಾರ್ಯಕ್ರಮವನ್ನು ಸಂಭ್ರಮದಿಂದ ಆಸ್ವಾದಿಸಿದರು.

Translate »