ಮೈಸೂರು: ಈ ಬಾರಿ ದಸರಾ ಮಹೋತ್ಸವವನ್ನು ನಾವು ಬಹಿಷ್ಕರಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೇಳಿದರು.
ಮೈಸೂರು ದಸರಾ ಸಾಂಸ್ಕೃತಿಕ ಮೆರವಣಿಗೆ ಉದ್ಘಾಟಿಸಲು ನಗರಕ್ಕೆ ಆಗಮಿಸಿದ್ದ ಡಾ.ಜಿ.ಪರಮೇಶ್ವರ್ ಇಂದು ಮಧ್ಯಾಹ್ನ 1.30ರ ವೇಳೆಯಲ್ಲಿ ಸರ್ಕಾರಿ ಅತಿಥಿ ಗೃಹ ದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಈ ಬಾರಿ ದಸರಾದಲ್ಲಿ ನಮ್ಮನ್ನು (ಕಾಂಗ್ರೆ ಸ್ಸಿಗರು) ಕಡೆಗಣಿಸಲಾಗಿದೆ. ಉಪ ಸಮಿತಿಯನ್ನು ನೇಮಕ ಮಾಡದೇ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಪ್ರಾತಿನಿಧ್ಯವನ್ನು ಕಡೆಗಣಿಸಿದ್ದಾರೆ. ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ತಿಳಿಸಿದರೂ ಕೂಡ ಅವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜೆಡಿಎಸ್‍ನವರ ಈ ವರ್ತನೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುಂಟಾಗಿದೆ. ಇದರಿಂದಾಗಿ ದಸರಾದಲ್ಲಿ ಈವರೆಗೆ ನಾವ್ಯಾರೂ ಭಾಗವಹಿಸಿಲ್ಲ. ಮುಂದೆಯೂ ಭಾಗವಹಿಸುವು ದಿಲ್ಲ. ದಸರಾ ಬಹಿಷ್ಕರಿಸಿದ್ದೇವೆ ಎಂದರು.
ನಂತರ ಮಾತನಾಡಿದ ಡಾ. ಜಿ.ಪರಮೇ ಶ್ವರ್, ನಾನು ದಸರಾ ಉದ್ಘಾಟನೆಗೆ ಮುಖ್ಯಮಂತ್ರಿಗಳ ಜೊತೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಇದೇ ಮೊದಲು ಬಂದಿ ದ್ದೇನೆ. ದಸರಾ ನಾಡಹಬ್ಬ. ಸಾಂಸ್ಕೃತಿಕ ಚರಿತ್ರೆ ಇರುವ ಹಬ್ಬವಾಗಿದ್ದು, ಇದು ನಮ್ಮ ಮನೆ ಎಂಬ ಭಾವನೆ ಇರಬೇಕು. ನಮ್ಮದು ಸಮ್ಮಿಶ್ರ ಸರ್ಕಾರ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ನಿಮ್ಮಲ್ಲಿ ವಿನಂತಿ ಮಾಡುತ್ತಿದ್ದೇನೆ. ಭಿನ್ನಾಭಿಪ್ರಾಯವನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಹೋಗೋಣ. ದಸರಾ ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲ ಎಂದು ನಮ್ಮ ಎಲ್ಲಾ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬೇರೆ ಸಂದರ್ಭದಲ್ಲಿ ಇದರ ಬಗ್ಗೆ ಚರ್ಚೆ ಮಾಡೋಣ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಮಾತನಾಡುತ್ತೇನೆ. ಜಂಬೂ ಸವಾರಿ ಕಾರ್ಯಕ್ರಮ ದಲ್ಲಿ ಎಲ್ಲರೂ ಒಟ್ಟಾಗಿ ಭಾಗವಹಿಸೋಣ. ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರು ವುದು ಬೇಡ. ಜನರ ಮನಸ್ಸಿನಲ್ಲಿ ನಮ್ಮಿಂದ ಅಪವಾದವಾಗಿದೆ ಎಂಬ ಭಾವನೆ ಬರಬಾರದು. ದಯವಿಟ್ಟು ಎಲ್ಲರೂ ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು. ಉಪ ಮುಖ್ಯ ಮಂತ್ರಿಗಳ ಮಾತಿಗೆ ತಿರುಗೇಟು ನೀಡಿದ ಕಾರ್ಯಕರ್ತರು, ಸರ್ಕಾರದಲ್ಲಿ ನಾವು ಶೇ.80, ಅವರು (ಜೆಡಿಎಸ್) ಶೇ.20 ರಷ್ಟಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಅವರು ಹೀಗೆಲ್ಲಾ ಮಾಡುತ್ತಿದ್ದಾರೆ. ನೀವು ಬೇಕಾದರೆ ದಸರಾದಲ್ಲಿ ಭಾಗವಹಿಸಿ. ಆದರೆ ನಾವು ಭಾಗವಹಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಈ ಸಭೆಯಲ್ಲಿ ಸಂಸದ ಆರ್. ಧ್ರುವನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಮಾಜಿ ಶಾಸಕ ವಾಸು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.