ಎಲ್.ಆರ್.ಶಿವರಾಮೇಗೌಡ ಜೆಡಿಎಸ್, ಡಾ.ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ
ಮಂಡ್ಯ

ಎಲ್.ಆರ್.ಶಿವರಾಮೇಗೌಡ ಜೆಡಿಎಸ್, ಡಾ.ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ

October 15, 2018

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಾ.ಸಿದ್ದರಾಮಯ್ಯ ಸ್ಪರ್ಧೆಗಿಳಿಯಲಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿಂದು ಮಂಡ್ಯ ಲೋಕಸಭಾ ಕ್ಷೇತ್ರ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಮಂಡ್ಯ ಜಿಲ್ಲೆಯ ಎಲ್ಲಾ ಜೆಡಿಎಸ್ ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ಅಭಿಪ್ರಾಯದಂತೆ ಮಾಜಿ ಶಾಸಕ ಎಲ್.ಆರ್.ಶಿವರಾಮೇ ಗೌಡರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

ಉಪ ಚುನಾವಣೆ ಘೋಷಣೆಯಾದ ದಿನದಿಂದಲೂ ಜೆಡಿಎಸ್ ಟಿಕೆಟ್‍ಗಾಗಿಆಕಾಂಕ್ಷಿಗಳ ನಡುವೆ ತೀರ ಪೈಪೋಟಿ ಏರ್ಪಟ್ಟಿತ್ತು. ಈ ನಡುವೆ ಹಲವು ಘಟಾನು ಘಟಿ ನಾಯಕರ ಹೆಸರುಗಳು ಜಿಲ್ಲೆಯಲ್ಲಿ ಹರಿದಾಡುತ್ತಿದ್ದವು. ಅದರಲ್ಲಿ ಮುಖ್ಯವಾಗಿ ದೊಡ್ಡಗೌಡರ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ರೈಲ್ವೆ ಇಲಾಖೆ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ, ರಾಜಕಾರಣಕ್ಕಿಳಿದಿರುವ ಲಕ್ಷ್ಮಿ ಅಶ್ವಿನ್ ಗೌಡ, ಮಾಜಿ ಶಾಸಕ ಎಸ್.ಡಿ. ಜಯರಾಂ ಪತ್ನಿ ಪ್ರಭಾವತಿ ಜಯರಾಂ, ಪುತ್ರ ಅಶೋಕ್ ಜಯರಾಂ ಸೇರಿದಂತೆ ಜೆಡಿಎಸ್‍ನ ಇನ್ನಿತರ ನಿಷ್ಠಾವಂತ ಕಾರ್ಯಕರ್ತರು ಭಾರೀ ಲಾಬಿ ನಡೆಸಿದ್ದರು. ಆದರೆ ಜೆಡಿಎಸ್ ವರಿಷ್ಠರು ಎಲ್.ಆರ್.ಶಿವರಾಮೇಗೌಡರಿಗೆ ಮಣೆ ಹಾಕಿದ್ದು, ಇದರೊಂದಿಗೆ ಮಂಡ್ಯ ಲೋಕಸಭಾ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಕೊನೆಗೂ ತೆರೆ ಬಿದ್ದಿದ್ದು, ನಾಳೆ(ಸೋಮವಾರ) ಮಂಡ್ಯದಲ್ಲಿ ಶಿವರಾಮೇಗೌಡ ನಾಮಪತ್ರ ಸಲ್ಲಿಸಲಿದ್ದಾರೆ.

ಕಣ್ಣೀರು ಹಾಕಿದ ಲಕ್ಷ್ಮಿ; ದೊಡ್ಡಗೌಡರ ಭರವಸೆಯಂತೆಯೇ ರೈಲ್ವೆ ಇಲಾಖೆ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ, ರಾಜಕಾರಣಕ್ಕೆ ಬಂದಿದ್ದ ಲಕ್ಷ್ಮೀ ಅಶ್ವಿನ್‍ಗೌಡ ಕೊನೇ ಗಳಿಗೆಯವರೆಗೂ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಬೇಸರದಿಂದಲೇ ಸಭೆಯ ಮಧ್ಯೆಯೇ ಕಣ್ಣೀರು ಹಾಕುತ್ತಾ ಹೊರ ನಡೆದರು. ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ನಾಗಮಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಸಿಎಸ್‍ಪಿ ಭರವಸೆ: ಸಭೆ ಬಳಿಕ ಮಾತನಾಡಿದ ಸಚಿವ ಸಿ.ಎಸ್ ಪುಟ್ಟರಾಜು, ಸಭೆಯಲ್ಲಿ ಉಪ ಚುನಾವಣೆ ಪಕ್ಷದ ಅಭ್ಯರ್ಥಿಯಾಗಿ ಶಿವರಾಮೇಗೌಡರನ್ನು ಆಯ್ಕೆ ಮಾಡಲಾಗಿದೆ. ಲಕ್ಷ್ಮಿ ಅಶ್ವಿನ್‍ಗೌಡರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡುವ ಕುರಿತು ಚರ್ಚೆ ಆಗಿದೆ ಎಂದು ಇದೇ ವೇಳೆ ತಿಳಿಸಿದರು.

ಡಾ.ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ: ಮಾಜಿ ಶಾಸಕ ದೊಡ್ಡ ಬೋರೇಗೌಡರ ಪುತ್ರ ಹಾಗೂ ನಿವೃತ್ತ ಹೆಚ್ಚುವರಿ ವಾಣಿಜ್ಯ ತೆರಿಗೆ ಆಯುಕ್ತ ಡಾ. ಸಿದ್ದರಾಮಯ್ಯ ಅವರು ಬಿಜೆಪಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಣಕ್ಕಿ ಳಿಯಲಿದ್ದಾರೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಡಾ.ಸಿದ್ದರಾಮಯ್ಯ ಅವರೇ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ತೀವ್ರ ಆಕ್ಷೇಪದ ಹೊರತಾಗಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಿಕೆಟ್ ಘೋಷಣೆ ಮಾಡಿದ್ದಾರೆ.

Translate »