ಮೈಸೂರು ಅರಮನೆ ಆವರಣದಲ್ಲಿ ದಸರಾ ಯೋಗೋತ್ಸವ
ಮೈಸೂರು, ಮೈಸೂರು ದಸರಾ

ಮೈಸೂರು ಅರಮನೆ ಆವರಣದಲ್ಲಿ ದಸರಾ ಯೋಗೋತ್ಸವ

October 15, 2018

ಮೈಸೂರು:  ಬಾನಂಗಳದಲ್ಲಿ ಭಾಸ್ಕರನ ಆಗಮನದ ಕ್ಷಣಗಳ ಮುಸು ಕಿನ ಮುಂಜಾನೆಯಲ್ಲಿ ಯೋಗದ ಸುಯೋಗದಲ್ಲಿ ನೂರಾರು ಮಂದಿ ಮಿಂದೆದ್ದರು. ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಭಾನು ವಾರ ಅರಮನೆಯ ಅಂಗಳದಲ್ಲಿ ಏರ್ಪಡಿಸಿದ್ದ ದಸರಾ ಯೋಗೋತ್ಸವದಲ್ಲಿ ಈ ದೃಶ್ಯಾವಳಿ ಮನಸೂರೆಗೊಂಡಿತು.

ನೂರಾರು ಯೋಗಪಟುಗಳನ್ನು ಒಳಗೊಂಡ ಈ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಯೋಗ ಭಂಗಿಯಲ್ಲಿ ತಲ್ಲೀನರಾಗಿ ಗಮನ ಸೆಳೆದರು. ಇವರೊಂದಿಗೆ ಯೋಗದಸರಾ ಉಪಸಮಿತಿಯ ಉಪ ವಿಶೇಷಾಧಿಕಾರಿ ಕೆ.ರಮ್ಯ, ಕಾರ್ಯದರ್ಶಿ ಡಾ.ಬಿ.ಎಸ್.ಸೀತಾಲಕ್ಷ್ಮೀ ಅವರೂ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಬೆಂಗಳೂರಿನ ಪತಂಜಲಿ ಯೋಗಾಶ್ರಮ ಟ್ರಸ್ಟ್‍ನ ಅಧ್ಯಕ್ಷ ಶ್ರೀ ಪ್ರಕಾಶ್ ಯೋಗಿ ಗುರೂಜಿ ಸಹ ಪಾಲ್ಗೊಂಡಿದ್ದರು.

ಮೂರು ಬಾರಿ ‘ಓಂಕಾರ’ ಹೇಳಿದ ಬಳಿಕ `ಯೋಗೇನ ಚಿತ್ತಸ್ಯ ಪದೇನಾ ವಾಚಾಂ’ ಪ್ರಾರ್ಥನೆ ನಡೆಯಿತು. ಬಳಿಕ ಸಮಸ್ಥಿತಿಯ ಭಂಗಿಯೊಂದಿಗೆ ಸರಳ ವ್ಯಾಯಾಮಗಳ ಹಂತವಾದ ಚಾಲನಾ ಕ್ರಿಯೆಗಳನ್ನು ನಡೆಸಿ ಯೋಗಕ್ಕೆ ತಯಾರಿ ಮಾಡಿಕೊಳ್ಳಲಾಯಿತು. ನಿಂತ ಭಂಗಿಯಲ್ಲಿ ಪ್ರದರ್ಶಿಸುವ ಆಸನಗಳಾದ ಸಮಸ್ಥಿತಿ, ತಾಡಾಸನ, ವೃಕ್ಷಾಸನ, ತ್ರಿಕೋನಾಸನ, ವೀರಭದ್ರಾಸನ ಮಾಡಲಾಯಿತು. ಬಳಿಕ ಆಸೀನರಾಗಿ ಮಾಡುವಂತಹ ಆಸನಗಳನ್ನು ಆರಂಭಿಸಲಾಯಿತು. ವಜ್ರಾಸನ, ಪಶ್ಚಿಮೋ ತ್ತಾನಾಸನ, ಉಷ್ಟ್ರಾಸನ, ವಕ್ರಾಸನಗಳನ್ನು ಮಾಡಲಾಯಿತು. ನಂತರ ಮಕರಾಸನ, ಭಜಂಗಾಸನ, ಏಕಪಾದ ಶಲಭಾಸನ, ಧನು ರಾಸನ, ಅರ್ಧ ಹಲಾಸನ, ಸೇತು ಬಂಧಾಸನ, ಪವನ ಮುಕ್ತಾಸನ, ಶವಾಸನದೊಂದಿಗೆ ಯೋಗಾಸನವನ್ನು ಮುಕ್ತಾಯಗೊಳಿಸಲಾಯಿತು.

ಅನಂತರ ಪ್ರಾಣಾಯಾಮ, ಅನು ಲೋಮ-ವಿಲೋಮ, ನಾಡಿ ಶೋಧನ ಕ್ರಿಯೆ ಜರುಗಿತು. ಬಳಿಕ ಧ್ಯಾನದ ಸ್ಥಿತಿಗೆ ತಲುಪಿ ಮತ್ತೆ ಶಾಂತಿ ಮಂತ್ರದೊಂದಿಗೆ ಪ್ರದರ್ಶನ ತೆರೆ ಕಂಡಿತು.

ಉನ್ನತ ಶಿಕ್ಷಣದಲ್ಲಿ ಯೋಗ ಕಡ್ಡಾಯ?: ಸ್ವತಃ ಯೋಗಾಸನದ ನಾನಾ ಆಸನಗಳನ್ನು ಪ್ರದರ್ಶಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಸುದ್ದಿಗಾರರೊಂದಿಗೆ ಮಾತನಾಡಿ, ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳ ಬೇಕೆಂಬ ಬಗ್ಗೆ ಇತ್ತೀಚೆಗೆ ಸಮಾಜದಲ್ಲಿ ಆಸಕ್ತಿ ಮೂಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಸಮಯ ಕಾಯ್ದಿರಿಸಿಕೊಂಡು ಯೋಗಾಭ್ಯಾಸ ಮಾಡುವುದು ಇಂದು ಅತ್ಯಗತ್ಯ ವಾಗಿದೆ. ನಮ್ಮ ಒತ್ತಡದ ಬದುಕಿನಲ್ಲಿ ನೆಮ್ಮ ದಿಯ ಭಾವ ತಾಳಲು ಯೋಗವೆಂಬ ಚಿಕಿತ್ಸೆ ಪರಿಣಾಮಕಾರಿಯಾಗಲಿದೆ. ಹೀಗಾಗಿ ಉನ್ನತ ಶಿಕ್ಷಣದಲ್ಲಿ ಯೋಗ ಶಿಕ್ಷಣ ಕಡ್ಡಾಯ ಗೊಳಿ ಸುವ ಉದ್ದೇಶ ಹೊಂದಲಾಗಿದೆ ಎಂದರು.

ಬೆಳಿಗ್ಗೆ 6ರಿಂದ 8ರವರೆಗೆ ನಡೆದ ಯೋಗೋ ತ್ಸವದಲ್ಲಿ ಮಕ್ಕಳು, ಯುವಕ-ಯುವತಿ ಯರು, ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಯೋಗಾಸಕ್ತರು ಪ್ರದರ್ಶನ ನೀಡಿದರು. ದೇಶದ ವಿವಿಧ ಭಾಗಗಳ ಹಲವು ಪ್ರವಾಸಿಗರು ಹಾಗೂ ಕೆಲ ವಿದೇಶಿಯರು ಪಾಲ್ಗೊಂಡಿದ್ದರು.

Translate »