ದಸರಾ ವಿಶೇಷ: ರಾಜ್ಯ  ಮಟ್ಟದ ಯೋಗಾಸನ ಸ್ಪರ್ಧೆ
ಮೈಸೂರು, ಮೈಸೂರು ದಸರಾ

ದಸರಾ ವಿಶೇಷ: ರಾಜ್ಯ  ಮಟ್ಟದ ಯೋಗಾಸನ ಸ್ಪರ್ಧೆ

October 15, 2018

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿ ವತಿಯಿಂದ ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಶೇಷ ಮಕ್ಕಳು ಹಾಗೂ ವಿಶೇಷ ಚೇತನರು ಪಾಲ್ಗೊಂಡು ಗಮನ ಸೆಳೆದರು.

9 ವಿಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟಾರೆಯಾಗಿ ಸುಮಾರು 800 ಯೋಗಪಟುಗಳು ಭಾಗವಹಿಸಿದ್ದರು.

ಮೈಸೂರು ರಾಮಕೃಷ್ಣನಗರದ ನಿರೀಕ್ಷೆ ಶಾಲೆಯ ವಿಶೇಷ ಚೇತನ ಮಕ್ಕಳು ಹಾಗೂ ಗದಗ ಜಿಲ್ಲೆಯ ಹೊಳೆ-ಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಆಸನಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.

ಬೆಂಗಳೂರಿನ ಬಸವೇಶ್ವರನಗರದ 67 ವರ್ಷದ ಹಿರಿಯ ಯೋಗಪಟು ಶ್ಯಾಮ್‍ಸುಂದರರಾವ್ ವಿಶೇಷಚೇತನರ ವಿಭಾಗದಲ್ಲಿ ಯೋಗಾಸನ ಭಂಗಿಗಳ ಮೂಲಕ ಪುಳಕವಿಟ್ಟರು. ಇವರು ಬಟ್ಟೆ ಕಾರ್ಖಾನೆಯೊಂದರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅವಘಡದಿಂದ ಕಣ್ಣು ಕಳೆದುಕೊಂಡಿದ್ದಾರೆ. ಅಂಧತ್ವ ಆವರಿಸಿದ ಬಳಿಕ ಎದೆಗುಂದದೆ ಯೋಗ ಸಾಧಕರಾಗಿ ಹೊರಹೊಮ್ಮಿದ್ದಾರೆ.

ಇಂದಿನ ಸ್ಪರ್ಧೆಯಲ್ಲಿ 8ರಿಂದ 60 ವರ್ಷ ಮೇಲ್ಪಟ್ಟವರ 9 ವಿಭಾಗಗಳಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಯಿತು. ಇದು ವೈಯಕ್ತಿಕ ಯೋಗಾಸನ ಪ್ರದರ್ಶನ ನೀಡುವ ವಿಭಾಗದಲ್ಲಿ ನಡೆದ ಸ್ಪರ್ಧೆಯಾಗಿದೆ.

ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ 2 ಸಾವಿರ ರೂ., ದ್ವಿತೀಯ ಬಹುಮಾನ 1,500 ರೂ., ತೃತೀಯ ಸಾವಿರ ರೂ. ನಗದು ಒಳಗೊಂಡಿದ್ದು, ಇದರೊಂದಿಗೆ ಎಲ್ಲಾ ವಿಭಾಗಗಳಲ್ಲಿ ಮೂರು ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ.

ಪ್ರತಿ ವಿಭಾಗಕ್ಕೂ 4 ತೀರ್ಪುಗಾರರನ್ನು ನಿಯೋಜಿಸಲಾಗಿತ್ತು. ಸ್ಪರ್ಧೆಗೆ ದೀಪ ಬೆಳಗುವ ಮೂಲಕ ಮೈಸೂರಿನ ರಾಮಕೃಷ್ಣನಗರದ ಭಾರತೀಯ ಸಂಸ್ಕೃತಿ ವಿದ್ಯಾಕೇಂದ್ರದ ಯೋಗಾಚಾರ್ಯ ಪ್ರೊ.ಕೆ.ಕೇಶವ ಮೂರ್ತಿ ಚಾಲನೆ ನೀಡಿದರು.

ಯೋಗ ದಸರಾ ಉಪಸಮಿತಿಯ ಉಪ ವಿಶೇಷಾಧಿಕಾರಿ ಕೆ.ರಮ್ಯ, ಕಾರ್ಯದರ್ಶಿ ಡಾ.ಬಿ.ಎಸ್. ಸೀತಾಲಕ್ಷ್ಮಿ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಬಿ.ಪಿ.ಮೂರ್ತಿ, ಮೈಸೂರು ಯೋಗ ಸ್ಪೋಟ್ರ್ಸ್ ಫೌಂಡೇಶನ್‍ನ ಪಿ.ಎನ್.ಗಣೇಶ್‍ಕುಮಾರ್ ಮತ್ತಿತರರು ಹಾಜರಿದ್ದರು.

Translate »