ದೇವರ ಇಲಾಖೆಗೂ ಕೈ ಹಾಕಿದ ಸೂಪರ್ ಸಿಎಂ
ಮೈಸೂರು

ದೇವರ ಇಲಾಖೆಗೂ ಕೈ ಹಾಕಿದ ಸೂಪರ್ ಸಿಎಂ

June 23, 2019

ಬೆಂಗಳೂರು, ಜೂ.22- ದೇವರ ಇಲಾಖೆಗೂ ಸಿಎಂ ಹಿರಿಯ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೈ ಹಾಕಿದ್ದು, ಮುಜರಾಯಿ ಇಲಾಖೆ ವ್ಯವಹಾರದಲ್ಲೂ ಮಧ್ಯಪ್ರವೇಶ ಮಾಡಿದ್ದಾರೆ. ಮುಜರಾಯಿ ಇಲಾಖೆಯನ್ನು ಕಾಂಗ್ರೆಸ್ಸಿನ ಪರಮೇಶ್ವರ್ ನಾಯ್ಕ್ ಅವರು ನಿರ್ವಹಿಸುತ್ತಿದ್ದಾರೆ. ಆದರೆ ಈಗ ಕಲ್ಯಾಣ ಮಂಟಪ ಒಂದರ ಗುತ್ತಿಗೆಯನ್ನು ಶೃಂಗೇರಿ ಮಠಕ್ಕೆ ಕೊಡುವಂತೆ ರೇವಣ್ಣ ಅವರು ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆದು ಕಾನೂನು ಮೀರಿ ಕಲ್ಯಾಣ ಮಂಟಪ ಗುತ್ತಿಗೆ ನೀಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ರೇವಣ್ಣ ಅವರು ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು, ಬೆಂಗಳೂರಿನ ಕಲ್ಯಾಣ ಮಂಟಪವನ್ನು ಶೃಂಗೇರಿ ಪೀಠಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ತಿಳಿಸಿದ್ದಾರೆ. ಈ ಬಗ್ಗೆ ಸಚಿವರಿಂದ ಪತ್ರ ಪಡೆದಿರುವ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿ ದ್ದಾರೆ. ಪತ್ರದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದುಡ್ಡಿಲ್ಲ.

ಆದ್ದರಿಂದ ಪೀಠಕ್ಕೆ ವರ್ಗಾಯಿಸುವಂತೆ ತಿಳಿಸಿದ್ದಾರೆ. ಈ ಹಿಂದೆ ಸಚಿವರ ಮನೆಯ ನವೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡಿದ್ದ ಸರ್ಕಾರ ಇಂದು ಸಾರ್ವಜನಿಕರ ಉಪಯೋಗಕ್ಕೆ ಬರುವ ಕಲ್ಯಾಣ ಮಂಟಪಕ್ಕೆ ಹಣ ಇಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಬರುವ ಈ ಯೋಜನೆಯನ್ನು ಪೀಠಕ್ಕೆ ವರ್ಗಾವಣೆ ಮಾಡುವ ಮೂಲಕ ಖಾಸಗೀಕರಣ ಗೊಳಿಸಿ ಹಣ ಮಾಡುವ ಉದ್ದೇಶ ಹೊಂದಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

ಪತ್ರದಲ್ಲೇನಿದೆ: ಬಸವನಗುಡಿಯಲ್ಲಿರುವ ಮುಜರಾಯಿಗೆ ಸೇರಿದ ಕಾರಂಜಿ ಅಂಜ ನೇಯ ದೇಗುಲದ ಅವರಣದಲ್ಲಿ ಕಲ್ಯಾಣ ಮಂಟಪ ಇದೆ. ಈ ಕಲ್ಯಾಣ ಮಂಟಪ ನಿರ್ಮಾಣ ಹಂತದಲ್ಲಿದೆ. ಪರಿಷ್ಕೃತ ದರ ಐದುಕೋಟಿಯಷ್ಟು ಆಗಲಿದೆ. ಆದರೆ ದೇಗುಲದ ಖರ್ಚಿನಲ್ಲಿ ಕೇವಲ 66 ಲಕ್ಷ ಭರಿಸಲು ಸಾಧ್ಯವಿದೆ. ಉಳಿದ ಖರ್ಚನ್ನು ಭರಿಸಲು ಸಾಧ್ಯವಿಲ್ಲ. ಅನುದಾನದ ಕೊರತೆ ಇದೆ. ಈ ಕಾರಣಕ್ಕೆ ಲೋಕೋಪಯೋಗಿ ಸಚಿವರು ಈ ಕಲ್ಯಾಣ ಮಂಟಪದ ಗುತ್ತಿಗೆಯನ್ನು ಶೃಂಗೇರಿ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸರ್ಕಾರ ಹಾಗೂ ಶೃಂಗೇರಿ ಪೀಠ ಎರಡು ನಿಭಾಯಿಸಿ ಕಲ್ಯಾಣ ಮಂಟಪದ ಲಾಭವನ್ನು ಸರ್ಕಾರ ಹಾಗೂ ಪೀಠ ಶೇ.50ರಂತೆ ಹಂಚಿಕೊಳ್ಳುವ ಬಗ್ಗೆಯೂ ತಿಳಿಸಿದ್ದಾರೆ. ಹಾಗಾಗಿ ಈ ಮನವಿಯನ್ನು ಪರಿಗಣಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ನಿಯಮ ಏನು ಹೇಳುತ್ತೆ?: ನಗರದ ಮುಜರಾಯಿ ಇಲಾಖೆ ಸೇರಿದ ದೇವಾಲಯದ ಈ ಕಲ್ಯಾಣ ಮಂಟಪ ನಿರ್ಮಾಣವನ್ನು ಮಾಡಲಾಗುತ್ತಿದೆ. ಮುಜರಾಯಿಗೆ ಸೇರಿದ ಕಟ್ಟಡ, ಆಸ್ತಿಯನ್ನು ಸಾರ್ವಜನಿಕ ಹರಾಜಿನ ಮೂಲಕವೇ ಗುತ್ತಿಗೆ ನೀಡಬೇಕು ಎನ್ನುವ ನಿಯಮವಿದೆ. ಈ ಹಿಂದೆ ಸಂಪಂಗಿರಾಮನಗರದ ದೇಗುಲದ ಜಾಗವನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ತಗಾದೆಯಾದಾಗ ಮುಜರಾಯಿ ಇಲಾಖೆ ತನಗೆ ಸೇರಿದ ಜಾಗವನ್ನು ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿತ್ತು. ಕಾಯ್ದೆ ಹೀಗಿದ್ದರೂ ಧಾರ್ಮಿಕ ಇಲಾಖೆಯ ನಡೆ ಅಚ್ಚರಿ ಮೂಡಿಸಿದೆ. ಈ ಗುತ್ತಿಗೆ ನೀಡಲು ದೇವಾಲಯದ ಸಮಿತಿಯೇ ರೇವಣ್ಣ ಅವರಿಗೆ ಮನವಿ ಮಾಡಿದೆ ಎನ್ನಲಾಗಿದ್ದು, ಈ ಮನವಿ ಹಿನ್ನೆಲೆಯಲ್ಲಿ ಕಾನೂನು ಅಂಶಗಳನ್ನು ಪರಿಗಣನೆ ತೆಗೆದುಕೊಳ್ಳದ ಸಚಿವರು ನೇರ ಪತ್ರ ಬರೆದಿದ್ದಾರೆ.

ಮುಜರಾಯಿ ಇಲಾಖೆ ಆಯುಕ್ತರು ಕೂಡ ಸಚಿವರ ಪತ್ರ ಬರುತ್ತಿದಂತೆ ನಿಯಮ ಮೀರಿ ಪತ್ರ ಬರೆದಿದ್ದಾರೆ. ಇತ್ತ ದೇವಸ್ಥಾನದ ಮುಂಭಾಗದಲ್ಲಿ ಕಲ್ಯಾಣ ಮಂಟಪಕ್ಕಾಗಿ ದೇಣಿಗೆ ನೀಡಿ ರಸೀದಿ ಪಡೆದುಕೊಳ್ಳಿ ಎಂದು ಬೋರ್ಡ್ ಹಾಕಲಾಗಿದೆ. ಹಾಗಾದರೆ ದೇವಾಲ ಯದ ಕಲ್ಯಾಣ ಮಂಟಪ ನಿರ್ಮಾಣ ಮಾಡುವಲ್ಲಿ ಜನ ಕೊಟ್ಟಿರುವ ದುಡ್ಡು ಎಲ್ಲಿಗೆ ಹೋಗುತ್ತೆ ಎಂಬ ಬಹುದೊಡ್ಡ ಅನುಮಾನವೂ ಮೂಡಿದೆ. ಇತ್ತ ಈ ಕುರಿತು ವರದಿ ಮಾಡಲು ತೆರಳಿದರೆ ದೇಗುಲದ ದೃಶ್ಯಾವಳಿ ತೆಗೆದುಕೊಳ್ಳಲು ಖಾಸಗಿ ವ್ಯಕ್ತಿಗಳು ಸುದ್ದಿ ಸಂಸ್ಥೆ ಕ್ಯಾಮೆರಾಕ್ಕೆ ಅಡ್ಡಿ ಪಡಿಸಿದ್ದಾರೆ. ಅಲ್ಲದೇ ಕಲ್ಯಾಣ ಮಂಟಪ ಕಟ್ಟಲು ದುಡ್ಡಿಲ್ಲ ನೀವು ಹಣ ನೀಡುತ್ತೀರಾ ಎಂದು ಸುದ್ದಿ ಸಂಸ್ಥೆ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ.

Translate »