ಜಾತ್ಯಾತೀತ ನಿಲುವು ಗಟ್ಟಿಗೊಳಿಸಲು ಮೈತ್ರಿ ಬೆಂಬಲಿಸಿ
ಹಾಸನ

ಜಾತ್ಯಾತೀತ ನಿಲುವು ಗಟ್ಟಿಗೊಳಿಸಲು ಮೈತ್ರಿ ಬೆಂಬಲಿಸಿ

April 14, 2019

ಹಾಸನ: ಯುವಕರಿಗೆ ಶಕ್ತಿ ತುಂಬಲು ಹಾಗೂ ಜಾತ್ಯಾತೀತ ನಿಲುವನ್ನು ಗಟ್ಟಿಗೊಳಿಸಲು ಲೋಕಸಭೆ ಚುನಾವಣೆ ಯಲ್ಲಿ ಮೈತ್ರಿ ಪಕ್ಷಕ್ಕೆ ಮತ ಹಾಕಬೇಕು ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.

ನಗರದ ಬಿ.ಎಂ.ರಸ್ತೆ ಬಳಿ ಇರುವ ಜ್ಞಾನಾಕ್ಷಿ ಸಮುದಾಯ ಮಂದಿರದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಉದ್ಯೋಗ ಇಲ್ಲದೇ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೀನಿ ಎಂದು ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರು 5 ವರ್ಷಗಳಾದರೂ ಯಾವ ಉದ್ಯೋಗವನ್ನು ಸೃಷ್ಠಿ ಮಾಡಲಿಲ್ಲ. ಅವರ ಮನೆ ಮುಂದೆ ಪ್ರತಿನಿತ್ಯ ಹಲವು ಪದವೀಧರರು ಕೆಲಸಕ್ಕೆ ಕಾಯುತ್ತಿದ್ದಾರೆ. ನಿರು ದ್ಯೋಗ ಬಂಡವಾಳ ಮಾಡಿಕೊಂಡು ಮೋದಿ ಅವರು ಪ್ರಧಾನಿ ಕುರ್ಚಿ ಅಲಂಕರಿಸಿದರು. ಯುವಕರ ಧ್ವನಿಯಾಗಿ ನನ್ನನ್ನು ಹಾಸನ ಜಿಲ್ಲೆಯಲ್ಲಿ ಗೆಲ್ಲಿಸಿ ನೀವು ದೆಹಲಿಗೆ ಕಳುಹಿಸಬೇಕು ಎಂದರು.

ಇವತ್ತು ದೇಶಕ್ಕಾಗಿ ಮೋದಿ ಎಂಬ ಘೊಷಣೆ ಮೊಳಗುತ್ತಿದೆ. ಹಾಗಿದ್ದರೆ ಬೇರೆ ಯಾರೂ ದೇಶಕ್ಕಾಗಿ ಹೋರಾಡಿಲ್ಲವೇ ಎಂದು ಪ್ರಶ್ನೆ ಮಾಡಿದರು. ಮೋದಿ ಸೈನ್ಯ ಅಂತ ಹೆಸರು ಹೇಳಿಕೊಂಡು ಭಾರತದ ಸೈನ್ಯಕ್ಕೆ ಅವಮಾನ ಮಾಡ್ತಿದ್ದೀರಾ. ಮೋದಿ ಅವರ ಸಾಧನೆಗಳನ್ನು ಕೇವಲ ಸಂಘ-ಪರಿವಾರದ ಜೊತೆ ಹಂಚಿ ಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ ಗಲಾಟೆ ನಡೆದಿ ದ್ದರೇ ಅದು ಪ್ರೀತಂಗೌಡ ಶಾಸಕರಾದ ಮೇಲೆ ಎಂದು ದೂರಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸುಜನ್ ಮಾತನಾಡಿ, ಕೋಮು ವಾದಿ ಪಕ್ಷವನ್ನು ದೂರ ಇಡುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ನಾವು ಇಂದು ಜನಜಾಗೃತಿ ಕೆಲಸ ಹೆಚ್ಚು ಮಾಡಬೇಕಾಗಿದೆ ಎಂದರು. ಕೆಪಿಸಿಸಿಯ ಹೆಚ್.ಕೆ.ಮಹೇಶ್ ಮಾತನಾಡಿ, ಮೋದಿಯವರು ಯಾವ ಅಭಿವೃದ್ಧಿಯ ಕೆಲಸವನ್ನು ಮಾಡಲಿಲ್ಲ. ಆದರೆ ಅವರ ಹೆಸರನ್ನು ಹೆಚ್ಚು ಹೇಳುತ್ತಾರೆ. ಯುವಕರು ಎಚ್ಚೆತ್ತುಕೊಂಡು ಪ್ರಜಾಪ್ರಭುತ್ವವನ್ನು ಉಳಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತ್ತು ಬಿ.ಶಿವರಾಂ ಪುತ್ರ ಸುಜನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶಿವರಾಂ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ತಾರಾ ಚಂದನ್, ಎಸ್.ಎಂ. ಆನಂದ್, ಮುನಿಸ್ವಾಮಿ, ಕೆಂಪರಾಜು, ವಿಧಾನ ಪರಿಷತ್ತು ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಡಿ.ಜಿ. ಕೃಷ್ಣೇಗೌಡ ಇತರರು ಉಪಸ್ಥಿತರಿದ್ದರು.

Translate »