ಪಕ್ಷೇತರ ಶಾಸಕರ ಅರ್ಜಿ ತಕ್ಷಣ ವಿಚಾರಣೆಗೆ  ಸುಪ್ರೀಂ ನಕಾರ
ಮೈಸೂರು

ಪಕ್ಷೇತರ ಶಾಸಕರ ಅರ್ಜಿ ತಕ್ಷಣ ವಿಚಾರಣೆಗೆ ಸುಪ್ರೀಂ ನಕಾರ

July 23, 2019

ನವದೆಹಲಿ: ಕರ್ನಾಟಕ ವಿಧಾನ ಸಭೆ ಅಧಿವೇಶನದಲ್ಲಿ ಸೋಮವಾರವೇ ವಿಶ್ವಾಸಮತ ಪ್ರಕ್ರಿಯೆ ಯನ್ನು ಪೂರ್ಣ ಗೊಳಿಸಬೇಕೆಂದು ಇಬ್ಬರು ಪಕ್ಷೇತರ ಶಾಸಕರು ಸಲ್ಲಿಸಿದ್ದ ಮನವಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಅಸಾಧ್ಯ ಎಂದು ಹೇಳಿದೆ.

ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ತುರ್ತು ವಿಚಾರಣೆ ಸಾಧ್ಯವಿಲ್ಲ. ನಾಳೆ ವಿಚಾರಣೆ ಕೈಗೆತ್ತಿ ಕೊಳ್ಳೋಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕೂಟಗಳಿಗೆ ಸದ್ಯಕ್ಕೆ ಜೀವದಾನ ಸಿಕ್ಕಿದೆ ಎಂದು ಹೇಳಬಹುದು. ಇಂದು ಸುಪ್ರೀಂಕೋರ್ಟ್‍ನಲ್ಲಿ ಬೇರೆ ಅರ್ಜಿಗಳ ವಿಚಾರಣೆಗಳು ಸಾಕಷ್ಟು ಇರುವುದರಿಂದ ಪಕ್ಷೇತರ ಶಾಸಕರ ಅರ್ಜಿಗಳನ್ನು ಇಂದು ಆದ್ಯತೆಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದರಿಂದ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಂದೆ ಹೋಗುವ ಸಾಧ್ಯತೆಯಿದೆ. ಈ ಮಧ್ಯೆ ಪಕ್ಷೇತರ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ನಾಳೆ ಮೊದಲ ಪ್ರಕರಣವಾಗಿ ವಿಚಾರಣೆ ಕೈಗೆತ್ತಿಕೊಳ್ಳಿ, ಸಮ್ಮಿಶ್ರ ಸರ್ಕಾರ ರಾಜ್ಯಪಾಲರ ಆದೇಶ ಪಾಲಿಸಿಲ್ಲ ಎಂದು ಮನವಿ ಮಾಡಿದ್ದಾರೆ.

ಇಂದು ಕಲಾಪ ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸುತ್ತೇವೆ, ಯಾರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಿ ನಾಳೆ ಈ ಬಗ್ಗೆ ನಿರ್ಧರಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಹೇಳಿತು. 2018ರಲ್ಲಿ ವಿಶ್ವಾಸಮತ ಯಾಚನೆಗೆ ಒಂದೇ ದಿನದ ಗಡುವನ್ನು ಸುಪ್ರೀಂಕೋರ್ಟ್ ನೀಡಿತ್ತು. ಅದು ಈಗಲೂ ಅನ್ವಯವಾಗಲಿ. ವಿಶ್ವಾಸಮತ ಯಾಚನೆ ಪದೇ ಪದೆ ವಿಳಂಬವಾಗುತ್ತಿದೆ ಎಂದು ರೋಹ್ಟಗಿ ಮನವಿ ಮಾಡಿದರು. ಆದರೆ ಪೀಠ, ನಾಳೆ ನೋಡೋಣ ಎಂದು ಹೇಳಿದೆ. ಸೋಮವಾರ ಸಂಜೆಯೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಗಿಸಲು ನಿರ್ದೇಶನ ನೀಡಬೇಕು ಎಂದು ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಶಂಕರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

Translate »