‘ಸುಧರ್ಮ’ ಸಂಪಾದಕ ಕೆ.ವಿ.ಸಂಪತ್‍ಕುಮಾರ್ ಅವರಿಗೆ `ಶಿವರಾತ್ರೀಶ್ವರ ಮಾಧ್ಯಮ’ ಪ್ರಶಸ್ತಿ ಪ್ರದಾನ
ಮೈಸೂರು

‘ಸುಧರ್ಮ’ ಸಂಪಾದಕ ಕೆ.ವಿ.ಸಂಪತ್‍ಕುಮಾರ್ ಅವರಿಗೆ `ಶಿವರಾತ್ರೀಶ್ವರ ಮಾಧ್ಯಮ’ ಪ್ರಶಸ್ತಿ ಪ್ರದಾನ

July 23, 2019

ಮೈಸೂರು: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ರುವ ಮೈಸೂರಿನ ‘ಸುಧರ್ಮ’ ಸಂಸ್ಕೃತ ದಿನಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅವರಿಗೆ ಈ ಬಾರಿಯ ಜೆಎಸ್‍ಎಸ್ ಮಹಾವಿದ್ಯಾಪೀಠ ಕೊಡ ಮಾಡುವ ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಸೋಮವಾರ ಗೌರವಿಸಲಾಯಿತು.

1970ರಲ್ಲಿ ವರದರಾಜ ಅಯ್ಯಂಗಾರ್ ಅವರಿಂದ ಸ್ಥಾಪಿಸಲ್ಪಟ್ಟು ಅವರ ನಂತರ ಕಳೆದ 30 ವರ್ಷಗಳಿಂದ ಅವರ ಪುತ್ರ ಕೆ.ವಿ. ಸಂಪತ್‍ಕುಮಾರ್ ಅವರು ಮುನ್ನಡೆಸಿ ಕೊಂಡು ಬರುತ್ತಿರುವ ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ ಸುಧರ್ಮ. ಅನೇಕ ಎಡರು ತೊಡರುಗಳ ನಡುವೆಯೂ ಸಕಾಲಕ್ಕೆ ಪ್ರತಿ ದಿನ ಪತ್ರಿಕೆ ಅಚ್ಚು ಹಾಕಿ ತಲುಪಿಸುತ್ತಿರುವ ಸಂಪತ್‍ಕುಮಾರ್ ಅವರ ಶ್ರಮವನ್ನು ಗುರ್ತಿಸಿ, ಜೆಎಸ್‍ಎಸ್ ಮಹಾ ವಿದ್ಯಾಪೀಠ ಈ ಬಾರಿಯ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಯನ್ನು ಅವರಿಗೆ ನೀಡಿ ಸನ್ಮಾನಿಸಿತು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ವಿ.ಸಂಪತ್‍ಕುಮಾರ್ ಅವರಿಗೆ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಪಿ.ಮಂಜುನಾಥ್ ಅವರು, 10 ಸಾವಿರ ರೂ. ನಗದು, ಸ್ಮರಣಿಕೆ, ಶಾಲು, ಫಲ ತಾಂಬೂಲ ನೀಡಿ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾ ಡಿದ ಅವರು, ಶ್ರೀಮಠದಿಂದ ಇದು 8ನೇ ಪ್ರಶಸ್ತಿಯಾಗಿದ್ದು, ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಮಗೆ ನಿಜಕ್ಕೂ ಹೆಮ್ಮೆ ಎನಿಸಿದೆ. ಕನ್ನಡ ಪತ್ರಿಕೆಗಳನ್ನೇ ಕೊಂಡು ಓದುವವರ ಸಂಖ್ಯೆ ಕಡಿಮೆ ಇರುವ ಈ ಸಂದರ್ಭದಲ್ಲಿ ಸಂಸ್ಕೃತ ಪತ್ರಿಕೆಯೊಂದು ಸುವರ್ಣ ಮಹೋತ್ಸವದತ್ತ ಹೆಜ್ಜೆ ಇಟ್ಟಿರು ವುದು, ಅವರ ತಂದೆ ಮತ್ತು ಇವರ ಶ್ರಮ ವನ್ನು ಮೆಚ್ಚಲೇಬೇಕು ಎಂದರು.

ಸಂಸ್ಕೃತ ಓದುಗರ ಸಂಖ್ಯೆ ಬೆರಳೆಣಿಕೆ ಯಷ್ಟಿದ್ದರೂ, `ಸುಧರ್ಮ’ ಇ-ಪೇಪರ್‍ನ ಚಂದಾದಾರರ ಸಂಖ್ಯೆ 1.5 ಲಕ್ಷ ದಾಟಿದೆ. ಸಂಸ್ಕೃತ ಓದುವುದರಿಂದ ಜ್ಞಾನಾಭಿವೃದ್ಧಿ ಯಾಗುತ್ತದೆ. ಇವರನ್ನು ಗೌರವಿಸುವ ಮೂಲಕ ಪ್ರಶಸ್ತಿಗೆ ಹೆಚ್ಚು ಗೌರವ ಲಭಿಸಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಸಂಪಾದಕ ಕೆ.ವಿ. ಸಂಪತ್‍ಕುಮಾರ್ ಮಾತನಾಡಿ, ಎಲ್ಲಾ ಭಾಷೆಗಳಿಗೂ ತಾಯಿಯಂತಿರುವ ಸಂಸ್ಕೃತ ದಲ್ಲಿ ಪತ್ರಿಕೆ ನಡೆಸುತ್ತಾ ಬಂದಿದ್ದೇವೆ. ಪತ್ರಿಕೆಯನ್ನು ಅಚ್ಚು ಮಾಡಿ ಆಸಕ್ತರಿಗೆ ತಲುಪಿಸುತ್ತಾ ಬಂದಿದ್ದೇವೆ. ಇದಕ್ಕೆ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಸಂಸ್ಕೃತ ಶಿಕ್ಷಣ ಇಂದು ಬರೀ ಅಂಕ ಗಳಿಸಲು ಮಾತ್ರ ಎಂಬಂತಾಗಿದೆ. ಸಂಸ್ಕೃತ ಕಲಿತ ವಿದ್ಯಾರ್ಥಿಗಳು ನಂತರ ಅದನ್ನು ಮುಂದುವರಿಸದೆ ಬಿಟ್ಟು ಬಿಡುತ್ತಿದ್ದಾರೆ. ಎಲ್ಲರೂ ಎಲ್ಲಾ ಭಾಷೆಗಳ ಜೊತೆಗೆ ಸಂಸ್ಕೃತ ವನ್ನು ಕಲಿಸಬೇಕು. ಸಂಸ್ಕೃತ ಕಲಿತರೆ ದೇಶದ ಎಲ್ಲಾ ಮೂಲೆಯಲ್ಲೂ ಒಳ್ಳೆಯ ಗೌರವ ಸಿಗುತ್ತದೆ. ಆದರೆ ವಿದೇಶಿಯರು ಪೂಜ್ಯ ಭಾವನೆಯಿಂದ ಸಂಸ್ಕೃತ ಕಲಿಯುತ್ತಿದ್ದಾರೆ. ಆದರೆ ನಮ್ಮಲ್ಲೇ ಕಲಿಯಲು ಹಿಂಜರಿಯು ತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ, ಸಂಪತ್ ಕುಮಾರ್ ಅವರ ಪತ್ನಿ ಕೆ.ಎಸ್.ಜಯಲಕ್ಷ್ಮಿ ಉಪಸ್ಥಿತರಿದ್ದರು. ಮೈಸೂರು ಜಿಲ್ಲಾ ಪತ್ರ ಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯ ದರ್ಶಿ ಕೆ.ಜೆ.ಲೋಕೇಶ್‍ಬಾಬು, ಪದಾಧಿಕಾರಿ ಗಳಾದ ಬಿ.ರಾಘವೇಂದ್ರ, ಸುಬ್ರಹ್ಮಣ್ಯ ಇನ್ನಿತರರು ಉಪಸ್ಥಿತರಿದ್ದರು.

Translate »