ಶಾಲಾ ದೆಸೆಯಲ್ಲಿಯೇ ಮಕ್ಕಳಿಗೆ ಗ್ರಾಹಕರ ಕಾಯ್ದೆ ಕುರಿತ ಅರಿವು
ಮೈಸೂರು

ಶಾಲಾ ದೆಸೆಯಲ್ಲಿಯೇ ಮಕ್ಕಳಿಗೆ ಗ್ರಾಹಕರ ಕಾಯ್ದೆ ಕುರಿತ ಅರಿವು

July 23, 2019

ಮೈಸೂರು: ಗ್ರಾಹಕ ಎಂದರೆ ಯಾರು? ಆತ ಹೇಗೆ ಮೋಸ, ವಂಚನೆಗಳಿಗೆ ಒಳಗಾಗುತ್ತಾನೆ? ಅದಕ್ಕೆ ಕಾರಣ ಮತ್ತು ಪರಿಹಾರವೇನು? ಎಂಬ ಬಗ್ಗೆ ಮಕ್ಕಳಿಗೆ ಅವರ ಶಾಲಾ ಹಂತದಲ್ಲಿಯೇ ಗ್ರಾಹಕ ಕಾಯ್ದೆಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಮಟ್ಟದಲ್ಲಿ `ಶಾಲಾ ಗ್ರಾಹಕರ ಕ್ಲಬ್’ಗಳನ್ನು ರಚಿಸಲಾಗುತ್ತಿದೆ.

ಶಾಲಾ ಗ್ರಾಹಕರ ಕ್ಲಬ್‍ನಲ್ಲಿ ಆಯಾಯ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಮಕ್ಕಳು ಸದಸ್ಯರಾಗಿರುತ್ತಾರೆ. ಅವರಿಗೆ ಗ್ರಾಹಕ ಕಾಯ್ದೆಗಳ ಬಗ್ಗೆ ಶಿಕ್ಷಣ ನೀಡಿ, ಅವರು ತಮ್ಮ ಕುಟುಂಬ ಮತ್ತು ಊರಿನ ಇತರ ರಿಗೆ ಗ್ರಾಹಕ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುತ್ತದೆ. ಅಂತಹ `ಶಾಲಾ ಗ್ರಾಹಕ ಕ್ಲಬ್’ ಕುರಿತ ಕಾರ್ಯಾಗಾರಕ್ಕೆ ಸೋಮ ವಾರ ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇ ಶಕ ಪಿ.ಶಿವಣ್ಣ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗ್ರಾಹ ಕರು ವಿದ್ಯುತ್, ನೀರು, ಗ್ಯಾಸ್, ಆಹಾರ ಪದಾರ್ಥ, ಔಷಧಿ, ತರಕಾರಿ, ಹಣ್ಣು ಹಂಪಲು ಇನ್ನಿತರ ಖರೀದಿ ಸಂದರ್ಭ ದಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಹೋದಾಗ ವಂಚ ನೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಅತಿ ಯಾಸೆಗೆ ಮರುಳಾಗಿಯೂ ಶೋಷಣೆ, ವಂಚನೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಅನ್ಯಾಯ, ವಂಚನೆಗೆ ಒಳಗಾಗುವವರಿಗೆ ರಕ್ಷಣೆ ನೀಡುವುದೇ ಗ್ರಾಹಕರ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಗ್ರಾಹಕ ಶಿಕ್ಷಣ ನೀಡಿ, ಜಾಗೃತಿ ಉಂಟು ಮಾಡುವ ಉದ್ದೇಶದಿಂದ `ಶಾಲಾ ಗ್ರಾಹಕರ ಕ್ಲಬ್’ ಗಳನ್ನು ರಚಿಸಲಾಗುತ್ತಿದೆ. ಶಾಲಾ-ಕಾಲೇಜು ಹಂತಗಳಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರೆ, ಅವರು ಮುಂದೆ ವಂಚನೆ, ಅನ್ಯಾಯಗಳಿಗೆ ಒಳಗಾಗುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.

ಶಾಲೆಗಳಲ್ಲಿ ರಚನೆಯಾಗುವ ಶಾಲಾ ಗ್ರಾಹಕರ ಕ್ಲಬ್‍ಗಳು ಶಾಲೆಗಳಲ್ಲಿ ಮತ್ತು ತಮ್ಮೂರಿನಲ್ಲಿ ಚರ್ಚಾ ಸ್ಪರ್ಧೆ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಸೇರಿದಂತೆ ಗ್ರಾಹಕ ಶಿಕ್ಷಣ ನೀಡುವ ಕೆಲಸವನ್ನು ನಿರ್ವಹಿ ಸುತ್ತವೆ. ಪ್ರತೀ ವರ್ಷ ಆಯ್ಕೆ ಮಾಡಲಾದ 20 ಶಾಲೆಗಳಿಗೆ ತಲಾ 10,000 ರೂ. ಅನು ದಾನ ನೀಡಿ, ಮಕ್ಕಳಿಗೆ ಗ್ರಾಹಕ ಶಿಕ್ಷಣ ನೀಡಿ, ಪ್ರೇರೇಪಿಸಲಾಗುವುದು. ಬಳಿಕ ಆಯಾ ಶಾಲೆಯ ಕ್ಲಬ್‍ಗಳೇ ಸ್ವಯಂ ಸಣ್ಣ ಮೊತ್ತ ಹಾಕಿಕೊಂಡು ಕ್ಲಬ್ ಅನ್ನು ನಿರಂ ತರವಾಗಿ ಮುನ್ನಡೆಸಿಕೊಂಡು ಗ್ರಾಹಕ ಕಾಯ್ದೆ ಕುರಿತಂತೆ ಚರ್ಚಾ ಸ್ಪರ್ಧೆ ಇನ್ನಿತರ ಕಾರ್ಯ ಕ್ರಮಗಳ ಮೂಲಕ ಮಕ್ಕಳು ಗ್ರಾಹಕ ಕಾಯ್ದೆ ಬಗ್ಗೆ ಅರಿವು ಪಡೆದು, ನಂತರ ತಮ್ಮ ಕುಟುಂಬ, ಗ್ರಾಮಗಳಲ್ಲಿ ಗ್ರಾಹಕರು ವಂಚನೆಗೆ ಒಳಗಾಗದಂತೆ ತಡೆಗಟ್ಟುವುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾ ಯತ್‍ನ ಮೈಸೂರು ಅಧ್ಯಕ್ಷ ಹೆಚ್.ಆರ್. ಸುಂದರೇಶನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾ ಗಾರದಲ್ಲಿ `ಗ್ರಾಹಕರ ಹಿತರಕ್ಷಣಾ ಕಾಯ್ದೆ-1986 – ಹಿಂದೆ ಜಾರಿಯಲ್ಲಿದ್ದ ಕಾಯ್ದೆಗಳ ಸ್ವರೂಪ, ಅನುಭವ ಹಾಗೂ ಜಾಗೃತಿ, ಪರಿಸರ ಸಂರಕ್ಷಣೆ’ ಕುರಿತು ಜೆಎಸ್‍ಎಸ್ ಕಾನೂನು ಕಾಲೇಜಿನ ಪ್ರಾಂಶು ಪಾಲ ಡಾ. ನಟರಾಜ್, `ಆರ್‍ಟಿಇ ಹಾಗೂ ಮಾಹಿತಿ ಹಕ್ಕು’ ಬಗ್ಗೆ ಕುವೆಂಪುನಗರದ ಮಾಹಿತಿ ಹಕ್ಕು ಕಾರ್ಯಕರ್ತ ವಿದ್ಯಾರಣ್ಯ ಉಪನ್ಯಾಸ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಡಾ.ಕೃಷ್ಣಮೂರ್ತಿ, ಇಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ.ಸುರೇಶ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಮನ್ವಯ ಅಧಿಕಾರಿ ಹೆಚ್.ಎಸ್.ನಾಗರತ್ನ, ಎಬಿಜಿಪಿ ಸದಸ್ಯ ಎಸ್. ಪ್ರಭಾಕರ್ ಇನ್ನಿತರರು ಉಪಸ್ಥಿತರಿದ್ದರು.

Translate »