ನಾಪೆÇೀಕ್ಲು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದಗಳಿಂದ ಟೀಕೆ ಮಾಡುತ್ತಿರುವ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿ ರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ‘ಆಡಬಾರದ್ದು ಆಡಿದ್ರೆ ಕೇಳಬಾರದು ಕೇಳ್ಬೇಕಾಗುತ್ತೆ’ ಎಂದು ದೊರೆಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ದೊರೆಸ್ವಾಮಿ ತುಂಬಾ ಹಿರಿಯರು. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಹುದ್ದೆ ಮತ್ತು ಹಿರಿತನವನ್ನು ಗಮನದಲ್ಲಿಟ್ಟುಕೊಂಡು ಅವರು ಮಾತನಾಡಬೇಕಾಗಿತ್ತು ಎಂದರು. ಜತೆಗೆ ಯತ್ನಾಳ್ ಅವರಿಗೂ ಕಿವಿಮಾತು ಹೇಳಿರುವ ಸುರೇಶ್ ಕುಮಾರ್, ಯತ್ನಾಳ್ ಅವರು ಕೂಡ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಬಾರದಿತ್ತು. ಇದೊಂದು ಕಹಿ ಘಟನೆ. ದೊರೆಸ್ವಾಮಿ ಅವರಿಗೆ ಅವರದೇ ಆದ ಬೆಂಬಲಿಗರಿದ್ದಾರೆ. ಇದನ್ನು ಸಹ ಯತ್ನಾಳ್ ಗಮನಿಸಬೇಕಾಗಿತ್ತು ಎಂದರು. ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯದಿಂದ ಕೈಬಿಡುವ ವಿಚಾರದ ಬಗ್ಗೆ ಮತ್ತಷ್ಟು ವಿಸ್ತಾರವಾಗಿ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಟಿಬೆಟಿಯನ್ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ವಿರೋಧ ಕಂಡು ಬಂದಿರುವ ಕುರಿತು ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್, ಟಿಬೆಟ್ ಸರ್ಕಾರದ ಆಂತರಿಕ ಶಿಕ್ಷಣ ಸಚಿವರು ಆರನೇ ತರಗತಿಯಿಂದ ಕನ್ನಡ ಬೋಧನೆಗೆ ಅವಕಾಶ ಕೇಳಿದ್ದಾರೆ. ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಯಾವುದೇ ಶಾಲೆಗಳಾದರೂ ಕನ್ನಡ ಕಲಿಕೆ ಕಡ್ಡಾಯ. ಅವರ ಲಿಖಿತ ಮನವಿಗೂ ಲಿಖಿತವಾಗಿಯೇ ಉತ್ತರ ನೀಡಿ ಕನ್ನಡ ಕಲಿಕೆ ಕಡ್ಡಾಯ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಹೇಳಿದರು.