ಇಬ್ಬರು ವಿದ್ಯಾರ್ಥಿಗಳ ಸಹಕಾರದಲ್ಲಿ ಮೂಡಿತು ಸಂಗೀತ ಸಾಮ್ರಾಟರ ಒಳಗೊಂಡ ಟೇಬಲ್ ಕ್ಯಾಲೆಂಡರ್
ಮೈಸೂರು

ಇಬ್ಬರು ವಿದ್ಯಾರ್ಥಿಗಳ ಸಹಕಾರದಲ್ಲಿ ಮೂಡಿತು ಸಂಗೀತ ಸಾಮ್ರಾಟರ ಒಳಗೊಂಡ ಟೇಬಲ್ ಕ್ಯಾಲೆಂಡರ್

June 24, 2018

ಮೈಸೂರು: ಸಂಗೀತ ಶಿಕ್ಷಕಿಯೊಬ್ಬರು, ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ವಿಶಿಷ್ಟ ಕ್ಯಾಲೆಂಡರ್ ಹೊರತರುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೈಸೂರಿನ ಕುವೆಂಪುನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಎಂ.ವಿ.ಅನಿತಾ ಅವರು, ಜೂ.11ರಂದು ಶಾಲೆಯಲ್ಲಿ ಆಚರಿಸಿದ ವಿಶ್ವ ಸಂಗೀತ ದಿನಾಚರಣೆ ಸಮಾರಂಭದಲ್ಲಿ ತಮ್ಮ ವಿಶಿಷ್ಟ ಪರಿಕಲ್ಪನೆಯಿಂದ ರೂಪಿಸಿದ್ದ ಟೇಬಲ್ ಕ್ಯಾಲೆಂಡರ್‍ನ್ನು, ಗಣ್ಯರಿಂದ ಬಿಡುಗಡೆ ಮಾಡಿಸುವ ಮೂಲಕ, ಶಾಲೆಯ ಸಹೋದ್ಯೋಗಿಗಳು ಹಾಗೂ ಮಕ್ಕಳನ್ನು ಅಚ್ಚರಿಗೊಳಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಬ್ಬರ ಸಹಕಾರ ಪಡೆದು, ರೂಪಿಸಿರುವ ಕ್ಯಾಲೆಂಡರ್ ಸಹಜ ಸುಂದರವಾಗಿದ್ದು, ದೇಶದ ಹೆಮ್ಮೆಯ ಸಂಗೀತ ಸಾಧಕರ ವಿವರವನ್ನೂ ಸಾರುತ್ತದೆ.

ಭಾರತದ ಶ್ರೇಷ್ಟ ಪರಂಪರೆಯನ್ನು ವಿಶ್ವವೇ ಮೆಚ್ಚಿದೆ. ಸಂಗೀತವೂ ಇಲ್ಲಿನ ಸಂಸ್ಕøತಿಯ ಪ್ರತೀಕವಾಗಿದೆ. ಸಂಗೀತವನ್ನೇ ಉಸಿರಾಗಿಸಿಕೊಂಡು ಸಾಧನೆ ಮಾಡಿರುವವರು ಕಡಿಮೆಯೇನಿಲ್ಲ. ಹೀಗೆ ಸಂಗೀತ ದಂತಕತೆಗಳಾಗಿರುವ ಸಂಗೀತಗಾರರನ್ನು ಸ್ಮರಿಸಿಕೊಳ್ಳಬೇಕು. ಅದರಲ್ಲೂ ಮಕ್ಕಳು ಮಹನೀಯರ ವಿಚಾರಗಳನ್ನು ಮನನ ಮಾಡಿಕೊಂಡು, ಅವರ ಹಾದಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಪದ್ಮ ಪ್ರಶಸ್ತಿಗೆ ಪಾತ್ರವಾಗಿರುವ 12 ಮಂದಿ ಮಹಾನ್ ಸಂಗೀತ ಸಾಧಕರ, ಬಾಲ್ಯ, ಶಿಕ್ಷಣ, ಸಂಗೀತ ಸಾಧನೆ, ಅವರಿಗೆ ಸಂದ ಪ್ರಶಸ್ತಿ-ಪುರಸ್ಕಾರಗಳನ್ನೊಳಗೊಂಡ ಸಮಗ್ರ ವಿಚಾರಗಳ ಸಂಕ್ಷಿಪ್ತ ವರದಿಯನ್ನು ಕ್ಯಾಲೆಂಡರ್‍ನಲ್ಲಿ ನಮೂದಿಸಲಾಗಿದೆ.

ಭಾರತ ರತ್ನ, ಪದ್ಮ ಭೂಷಣ, ಪದ್ಮ ವಿಭೂಷಣ ಪುರಸ್ಕøತರಾದ ಎಂ.ಎಸ್.ಸುಬ್ಬಲಕ್ಷ್ಮೀ, ರವಿಶಂಕರ್, ಭೀಮ್‍ಸೇನ್ ಜೋಷಿ, ಸೆಮ್ಮನ್ಗುಡಿ ಶ್ರೀನಿವಾಸ್ ಐಯ್ಯರ್, ಎಂ.ಬಾಲಮುರುಳಿಕೃಷ್ಣ, ಮಲ್ಲಿಕಾರ್ಜುನ್ ಮಾನ್ಸೂರ್, ಡಿ.ಕೆ.ಪಟ್ಟಮ್ಮಲ್, ಗಂಗೂಬಾಯ್ ಹಾನಗಲ್, ಉಮಯಾಳ್‍ಪುರಂ ಕೆ.ಶಿವರಾಮನ್ ಹಾಗೂ ಕೆ.ಜೆ.ಯೇಸುದಾಸ್ ಅವರ ಜನ್ಮ ದಿನಾಂಕ, ಹುಟ್ಟೂರು, ಪೋಷಕರು, ಸಂಗೀತ ಯಾನದ ಆರಂಭ, ಸಾಧನೆ, ಮುಡಿಗೇರಿಸಿಕೊಂಡ ಶ್ರೇಷ್ಟ ಪ್ರಶಸ್ತಿ, ಪುರಸ್ಕಾರಗಳನ್ನು ಈ ಕ್ಯಾಲೆಂಡರ್ ಒಳಗೊಂಡಿದ್ದು, ಶಾಲೆಯ ವಿದ್ಯಾರ್ಥಿಗಳಾದ ಎಂ.ಅನ್ಮೋಲ್ ರತನ್ ರಾವ್ ಹಾಗೂ ಎಸ್.ರಕ್ಷಿತ್, ಚಂದವಾಗಿ ಬಿಡಿಸಿರುವ ಸಂಗೀತ ದಂತಕತೆಗಳ ಭಾವಚಿತ್ರಗಳನ್ನೂ ಇಲ್ಲಿ ಅಚ್ಚಾಕಿಸಲಾಗಿದೆ.

ತಮ್ಮ ವಿಶಿಷ್ಟ ಪರಿಕಲ್ಪನೆಯನ್ನು `ಮೈಸೂರು ಮಿತ್ರ’ನೊಂದಿಗೆ ಹಂಚಿಕೊಂಡ ಸಂಗೀತ ಶಿಕ್ಷಕಿ ಎಂ.ವಿ.ಅನಿತಾ, ವಿಶ್ವ ಸಂಗೀತ ದಿನಾಚರಣೆಯನ್ನು ಇತ್ತೀಚೆಗಷ್ಟೇ ಆಚರಿಸಲಾಗುತ್ತಿದೆ. ಇದು ಮತ್ತಷ್ಟು ವಿಸ್ತಾರವಾಗಿ ಸಂಗೀತದ ಮಹನೀಯರನ್ನು ಸ್ಮರಿಸಿಕೊಂಡು, ಗೌರವಿಸುವಂತಾಗಬೇಕು. ಹಾಗೆಯೇ ನಮ್ಮ ಶಾಲೆಯಲ್ಲಿ ಆಚರಿಸುವ ಸಂಗೀತ ದಿನಾಚರಣೆಯಲ್ಲಿ ಏನಾದರೂ ವಿಶೇಷತೆ ಇರಬೇಕು ಎನ್ನಿಸಿತ್ತು. ಹಾಗಿರುವಾಗ ಮಕ್ಕಳು ಪೆನ್ಸಿಲ್‍ನಲ್ಲಿ ಚಿತ್ರ ಬಿಡಿಸುವುದನ್ನು ನೋಡಿದಾಗ ಕ್ಯಾಲೆಂಡರ್ ಹೊರತರುವ ಯೋಜನೆ ಬಂತು. ಅದೇ ರೀತಿ ಮಕ್ಕಳಿಗೆ ಸಂಗೀತ ಸಾಧಕರ ಚಿತ್ರ ಬಿಡಿಸಲು ಹೇಳಿದೆ. ಪೆನ್ಸಿಲ್‍ನಿಂದ ಬಿಡಿಸಿದ್ದ ಸಂಗೀತ ದಂತಕತೆಗಳ ಚಿತ್ರಗಳೊಂದಿಗೆ ಅವರ ಬಗ್ಗೆ ವಿವರವನ್ನೂ ನಮೂದಿಸಿ, ಕ್ಯಾಲೆಂಡರ್ ನಿರ್ಮಾಣ ಮಾಡಿಸಿದೆವು. ಈ ಬಾರಿ ನಾನೇ ಒಂದಷ್ಟು ಕ್ಯಾಲೆಂಡರ್ ಮಾಡಿಸಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಭಿನ್ನವಾಗಿ ವಿಶ್ವ ಸಂಗೀತ ದಿನವನ್ನು ಆಚರಿಸಬೇಕೆಂಬ ಅಬಿಲಾಷೆಯಿದೆ ಎಂದು ತಿಳಿಸಿದರು.

ಸಂಗೀತ ಶಿಕ್ಷಕಿ ಅನಿತಾ

ಮಕ್ಕಳಿಗೆ ಪಠ್ಯದಲ್ಲಿರುವ ದೇಶಭಕ್ತಿ, ಭಾವಗೀತೆಗಳನ್ನು ಕಲಿಸುವುದಷ್ಟೇ ಸಂಗೀತ ಶಿಕ್ಷಕರ ಕರ್ತವ್ಯವಲ್ಲ. ಹೀಗೆ ವಿನೂತನ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಸಂಗೀತದ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸಬೇಕು ಎಂಬುದಕ್ಕೆ ಅನಿತಾ ಅವರು ಮಾದರಿಯಾಗಿದ್ದಾರೆ. ಅಲ್ಲದೆ ಪ್ರಾಣಿ , ಪರಿಸರದ ಚಿತ್ರ ಬಿಡಿಸುತ್ತಿದ್ದ ಮಕ್ಕಳ ಕೈಲಿ, ದೇಶದ ಹೆಮ್ಮೆಯ ಕಲಾವಿದರ ಚಿತ್ರಗಳನ್ನು ಬಿಡಿಸುವಂತೆ ಪ್ರೋತ್ಸಾಹಿಸಿ, ಅದರಲ್ಲೂ ಯಶಸ್ವಿಯಾಗಿದ್ದಾರೆ. ಅನಿತಾ ಅವರ ಈ ಕಾರ್ಯವನ್ನು ಶಾಲೆಯ ಮುಖ್ಯೋಪಾಧ್ಯಾರಾದ ಪ್ರಕಾಶ್ ಸೇರಿದಂತೆ ಸಹೋದ್ಯೋಗಿಗಳು ಮೆಚ್ಚಿ, ಶ್ಲಾಘಿಸಿದ್ದಾರೆ.
ಫೋಟೋ- ಸಂಗೀತ ಶಿಕ್ಷಕಿ ಅನಿತಾ ಹಾಗೂ ಕ್ಯಾಲೆಂಡರ್ ಮುಖಪುಟ

Translate »