ಕುವೆಂಪುನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳೊಂದಿಗೆ ಶಾಸಕ ರಾಮದಾಸ್ ಸಂವಾದ
ಮೈಸೂರು

ಕುವೆಂಪುನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳೊಂದಿಗೆ ಶಾಸಕ ರಾಮದಾಸ್ ಸಂವಾದ

July 8, 2018
  • ವಿದ್ಯಾರ್ಥಿಗಳಿಗೆ ಗಿಡ ವಿತರಣೆ
  • ಶಾಲೆಯ ಕುಂದು ಕೊರತೆಗೆ ಪರಿಹಾರ

ಮೈಸೂರು: ಹಸಿರು ಭಾರತ ಹಾಗೂ ಬಲಿಷ್ಠ ಭಾರತ ಕಾರ್ಯಕ್ರಮದಡಿ ಶನಿವಾರ ಮೈಸೂರಿನ ಕುವೆಂಪುನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್, ವಿದ್ಯಾರ್ಥಿಗಳಿಗೆ ಗಿಡ ವಿತರಿಸುವುದರೊಂದಿಗೆ ಸಂವಾದ ನಡೆಸಿದರು.

ಮೈಸೂರಿನ ಕೆ.ಆರ್.ಕ್ಷೇತ್ರದ ವ್ಯಾಪ್ತಿಯ ಶಾಲೆಗಳಲ್ಲಿ ಪ್ರತಿ ಶನಿವಾರ ಹಸಿರು ಭಾರತ ಹಾಗೂ ಬಲಿಷ್ಠ ಭಾರತದ ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿ ಅವುಗಳ ಪೋಷಿಸುವಂತೆ ಪ್ರೇರೇಪಣೆ ನೀಡಲಾಗುತ್ತಿದೆ. ಅಲ್ಲದೆ, ಬಲಿಷ್ಠ ಭಾರತ ಕಾರ್ಯಕ್ರಮದಡಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ, ಹೆಚ್ಚುವರಿ ಅವಧಿ ಬೋಧಿಸಲು ಕ್ರಮ ಕೈಗೊಳ್ಳುವ ಮೂಲಕ ಬದಲಾವಣೆ ತರುವ ಉದ್ದೇಶದಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುತ್ತಿದೆ.

ಕಾರ್ಯಕ್ರಮ ಕುರಿತಂತೆ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಪ್ರತಿ ಶನಿವಾರ ಕ್ಷೇತ್ರದ ಶಾಲೆಗಳಲ್ಲಿ ಸಂವಾದ ನಡೆಸಿ, ಶಾಲೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲಾಗುತ್ತದೆ. ಕಳೆದ ವಾರ ಕನಕಗಿರಿ ಶಾಲೆಯಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು. ಈ ವಾರ ಕುವೆಂಪುನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂವಾದ ನಡೆಸಿ, ಕೆಲವರಿಗೆ ಗಿಡ ವಿತರಿಸಲಾಯಿತು. ಈ ಶಾಲೆಯಲ್ಲಿ ಸುಮಾರು 600 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ವಿದ್ಯಾರ್ಥಿಗಳೇ ಬೆಳಕಿಗೆ ತಂದರು. ಸ್ಥಳದಲ್ಲಿಯೇ ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಅಧಿಕಾರಿಗಳನ್ನು ಕರೆಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿರುವುದಾಗಿ ಹೇಳಿದರು.

ಶಾಲೆಯ ವಿದ್ಯಾರ್ಥಿಗಳು ಯೋಗ, ನೃತ್ಯದ ಮೂಲಕ ಗಮನ ಸೆಳೆದರು. ಯೋಗ ಹಾಗೂ ಧ್ಯಾನಕ್ಕೆ ಆದ್ಯತೆ ನೀಡಿ ಮುಂದಿನ ವರ್ಷ ನಡೆಯಲಿರುವ ಅಂತರ ರಾಷ್ಟ್ರೀಯ ಯೋಗ ದಿನದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕರೆತರುವಂತೆ ಶಿಕ್ಷಕರಿಗೆ ಸೂಚಿಸಲಾಯಿತು. ಅಲ್ಲದೆ ಅಂತರ ರಾಷ್ಟ್ರೀಯ ಸಂಗೀತ ದಿನದ ಹಿನ್ನೆಲೆಯಲ್ಲಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಹೆಸರಾಂತ ಸಂಗೀತಗಾರರ ರೇಖಾಚಿತ್ರ ಬರೆದು ಟೇಬಲ್ ಕ್ಯಾಲೆಂಡರ್ ತಯಾರಿಸಿದ್ದರು. ಅದನ್ನು ಬಿಡುಗಡೆ ಮಾಡಿ, ಆ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವ ವಿಷಯದಲ್ಲಿ ಮಕ್ಕಳು ಹಿಂದಿದ್ದಾರೆ ಎಂದು ತಿಳಿದು, ಅವರಿಗೆ ಮುಂದಿನ ಮೂರು ತಿಂಗಳಲ್ಲಿ ಹೆಚ್ಚುವರಿ ಅವಧಿಯಲ್ಲಿ ಕಲಿಸುವುದು. ಕೊನೆಯ ಮೂರು ತಿಂಗಳಲ್ಲಿ ಪರೀಕ್ಷೆಗೆ ಅಣಿಗೊಳಿಸಲು ಸೂಚಿಸಲಾಗಿದೆ. ಅಲ್ಲದೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ನೀಡುವ ಉದ್ದೇಶದಿಂದ ವಿವಿಧ ವಿಷಯ ಬೋಧಿಸುವ ಶಿಕ್ಷಕರಿಗೆ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ಅವರು 25 ಸಾವಿರ ಪ್ರೋತ್ಸಾಹ ಬಹುಮಾನ ನೀಡಲು ಮುಂದಾಗಿದ್ದಾರೆ. ಶಾಲೆಗಳಲ್ಲಿ ವ್ಯಾಸಂಗ ಮಾಡುವ ಕೂಲಿ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಅವರ ಪೋಷಕರಿಗೆ ಕೇಂದ್ರ ಸರ್ಕಾರ ನೀಡುವ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ನೀಡಲಾಗುತ್ತದೆ. ಇದರಿಂದ ಅವರಿಗೆ ವಿವಿಧ ಸೌಲಭ್ಯ ದೊರೆಯಲಿದೆ ಎಂದರು.

ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರತಿಭಾನ್ವಿತ ಮಕ್ಕಳಿಗೆ ತಮ್ಮ ಭಾವನೆ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಕವಿಯೊಬ್ಬರ ಮೊಮ್ಮಗ, ಆಟೊಮೊಬೈಲ್ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ವಿವಿಧ ವಾಹನಗಳ ತಯಾರಿಸುವ ಇಂಗಿತ ವ್ಯಕ್ತಪಡಿಸಿದ. ಅಲ್ಲದೆ ಸಂಶೋಧನೆ ನಡೆಸುವುದಕ್ಕೆ ಹಳೆಯ ಕಾರೊಂದನ್ನು ನೀಡುವಂತೆ ವಿದ್ಯಾರ್ಥಿಗಳು ಕೋರಿಕೊಂಡರು. ಈ ಬೇಡಿಕೆ ಈಡೇರಿಸಲು ಮೈಸೂರು ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಅವರು ಮುಂದೆ ಬಂದಿದ್ದು, ಹಳೆಯ ಕಾರೊಂದನ್ನು ಶಾಲೆಗೆ ಕೊಡುಗೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಮದಾಸ್ ಹೇಳಿದರು.

ಕಂಪ್ಯೂಟರ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಆಸಕ್ತಿಯಿದ್ದು, ಆದರೆ ಕಂಪ್ಯೂಟರ್ ಇಲ. ಈ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆಯ ಮಲ್ಲರಾಜೇ ಅರಸ್ ಅವರು ಕಂಪ್ಯೂಟರ್ ಕೊಡುಗೆ ನೀಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದರಲ್ಲದೆ, ಶಾಲೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯ ನಿರ್ಮಾಣ, ವಿದ್ಯಾರ್ಥಿಗಳಿಗೆ ಯೋಗ ಮ್ಯಾಟ್ ನೀಡುವುದಕ್ಕೆ ನಿರ್ಧರಿಸಲಾಯಿತು ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »