ಕೆಪಿಎಸ್‍ಸಿ ನೇಮಕಾತಿ ಕುರಿತು ಸಿಎಂ ಜೊತೆ ಚರ್ಚೆ: ಪುಟ್ಟರಂಗಶೆಟ್ಟಿ
ಚಾಮರಾಜನಗರ

ಕೆಪಿಎಸ್‍ಸಿ ನೇಮಕಾತಿ ಕುರಿತು ಸಿಎಂ ಜೊತೆ ಚರ್ಚೆ: ಪುಟ್ಟರಂಗಶೆಟ್ಟಿ

November 19, 2018

ಚಾಮರಾಜನಗರ:  ಕರ್ನಾಟಕ ಲೋಕಸೇವಾ ಆಯೋಗದ ನೇರ ನೇಮಕಾತಿ ಸಂಬಂಧ ತಳೆದಿರುವ ನಿಲುವಿನ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕ್ಯಾಬಿನೆಟ್‍ನಲ್ಲಿ ವಿಷಯ ಪ್ರಸ್ತಾಪಿಸಿ ಸಂಬಂಧಪಟ್ಟ ವರ್ಗಗಳಿಗೆ ಅನ್ಯಾಯವಾಗದಂತೆ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ: 08: ಸೆಹಿಮ:95 ಬೆಂಗಳೂರು ದಿನಾಂಕ: 20.06.1995ರಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸುವಾಗ ಯಾವ ರೀತಿ ಆಯ್ಕೆ ವಿಧಾನ ಅನುಸರಿಸಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿರುತ್ತದೆ. ಇದನ್ನು ಪರಿಶಿಷ್ಟ ಜಾತಿ, ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುತ್ತಾ ಕಳೆದ 23 ವರ್ಷಗಳಿಂದಲೂ ಅನುಷ್ಠಾನಗೊಳಿಸಲಾಗುತ್ತಿದೆ.

ಆದರೆ ಸರ್ಕಾರದ ಪತ್ರಸಂಖ್ಯೆ: ಸಿಆಸುಇ:66:ಸೇಲೋಸೇ:2018. ದಿನಾಂಕ: 03.11.2018ರಲ್ಲಿ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 27674/2012ರಲ್ಲಿ ಹೊರಡಿಸಿರುವ ತೀರ್ಪಿನಲ್ಲಿ ಮಾರ್ಗಸೂಚಿಯನ್ನು ನಿಗದಿಪಡಿಸಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ರಿಟ್ ಅರ್ಜಿಯಲ್ಲಿ ಅನುಸರಿಸಲು ಸೂಚಿಸಿರುವ ಮಾರ್ಗಸೂಚಿಯು ಕೇವಲ ಆ ರಿಟ್ ಅರ್ಜಿಯಲ್ಲಿ ಇರುವಂತಹ ಪ್ರಕರಣಕ್ಕೆ ಮಾತ್ರವೇ ಸಂಬಂಧಿಸಿದ್ದಾಗಿರುತ್ತದೆ. ಮೇಲಾಗಿ ಆ ತೀರ್ಪಿನ ವಿರುದ್ಧ ಸರ್ಕಾರವು ಮರು ಪರಿಶೀಲನಾ ಅರ್ಜಿಯನ್ನು ದಾಖಲಿಸಿರುತ್ತದೆ. ಆದರೂ, ಕೂಡ ಈ ರೀತಿ ನಿರ್ದೇಶನ ನೀಡಿರುವುದು ಪರಿಶಿಷ್ಟ ಜಾತಿ, ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅನ್ಯಾಯ ವಾಗುವುದರಿಂದ ಅದನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.

ಈ ತೀರ್ಪಿನಲ್ಲಿ ನೀಡಿರುವ ಮಾರ್ಗಸೂಚಿ ಅನುಸರಿಸುವುದರಿಂದ ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು ಸಾಮಾನ್ಯ ವರ್ಗದ ಕೋಟಾದಡಿ ಹುದ್ದೆಗಳನ್ನು ಪಡೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ಇದು ಸಹಜ ಸಾಮಾಜಿಕ ನ್ಯಾಯಕ್ಕೆ ವಿರೋಧವಾದ ಮಾರ್ಗದರ್ಶನವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಹಾಗೂ ಕ್ಯಾಬಿನೆಟ್‍ನಲ್ಲಿ ಪ್ರಸ್ತಾಪಿಸಿ, ಅನ್ಯಾಯವಾಗದಂತೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »