29 ಮಂದಿ ಸ್ಥಿತಿ ಇನ್ನೂ ಗಂಭೀರ
ಮೈಸೂರು

29 ಮಂದಿ ಸ್ಥಿತಿ ಇನ್ನೂ ಗಂಭೀರ

December 16, 2018

ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ವಿಷಯುಕ್ತ ಪ್ರಸಾದ ಸೇವಿಸಿ ಅಸ್ವಸ್ಥರಾಗಿರುವ 93 ಮಂದಿಗೆ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲಾಗಿದ್ದು, ಬಹುತೇಕ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಹನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲದೆ, ತಮಿಳು ನಾಡಿನ ಕೆಲ ಗಡಿ ಗ್ರಾಮಗಳಲ್ಲಿಯೂ ತನ್ನದೇ ಆದ ಪ್ರಭಾವ ಬೀರಿದ್ದ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ಶುಕ್ರವಾರ ನಡೆದ ಗೋಪುರ ನಿರ್ಮಾಣದ ಗುದ್ದಲಿ ಪೂಜಾ ಕಾರ್ಯ ದಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರು ದೇವಾಲಯದ ವತಿಯಿಂದ ನೀಡಲಾದ ಪ್ರಸಾದ ಸೇವಿಸಿ ಒಟ್ಟು 104 ಭಕ್ತರು ಅಸ್ವಸ್ಥಗೊಂಡಿ ದ್ದರು. ಅವರಲ್ಲಿ 11 ಮಂದಿ ಮೃತಪಟ್ಟಿದ್ದರೆ, 93 ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ 29 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಕೆ.ಆರ್.ಆಸ್ಪತ್ರೆಯಲ್ಲಿರುವ 30 ರೋಗಿಗಳಲ್ಲಿ 4 ಮಂದಿಯನ್ನು ವೆಂಟಿಲೇಟರ್‍ನಲ್ಲಿಡಲಾಗಿದೆ. ಕಾವೇರಿ ಆಸ್ಪತ್ರೆಯಲ್ಲಿ 11 ರೋಗಿಗಳಿದ್ದು, ನಾಲ್ವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಅಪೋಲೋ ಆಸ್ಪತ್ರೆಯಲ್ಲಿ 13 ರೋಗಿಗಳಲ್ಲಿ 8 ರೋಗಿಗಳಿಗೆ ವೆಂಟಿಲೇಟರ್‍ನಲ್ಲಿಡಲಾಗಿದೆ. ಜೆಎಸ್‍ಎಸ್ ಆಸ್ಪತ್ರೆಯಲ್ಲಿ 16 ಅಸ್ವಸ್ಥರನ್ನು ದಾಖಲಿಸಲಾಗಿದ್ದು, 8 ಮಂದಿಗೆ ವೆಂಟಿಲೇಟರ್‍ನಲ್ಲಿಟ್ಟು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ 6ರಲ್ಲಿ ಇಬ್ಬರನ್ನು ವೆಂಟಿಲೇಟರ್‍ನಲ್ಲಿಡಲಾಗಿದೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ 5 ರಲ್ಲಿ ಮೂವರನ್ನು ವೆಂಟಿಲೇಟರ್‍ನಲ್ಲಿ, ಸುಯೋಗ್ ಆಸ್ಪತ್ರೆಯಲ್ಲಿ 11ರಲ್ಲಿ ಇಬ್ಬರನ್ನು ವೆಂಟಿಲೇಟರ್‍ನಲ್ಲಿ ಹಾಗೂ ಬಾನವಿ ಆಸ್ಪತ್ರೆಯಲ್ಲಿ ಒಬ್ಬರನ್ನು ದಾಖಲಿಸಲಾಗಿದೆ. ಮೈಸೂರಿನ 8 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡುವುದಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಎಲ್ಲಾ ಆಸ್ಪತ್ರೆಗಳಲ್ಲಿಯೂ ವಿಷ ಪ್ರಸಾದ ದುರಂತದಲ್ಲಿ ಅಸ್ವಸ್ಥರಾಗಿರುವ ಎಲ್ಲರಿಗೂ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಆಸ್ಪತ್ರೆಗಳಲ್ಲಿಯೂ ಸಮರೋಪಾದಿ ಯಲ್ಲಿ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಸೇವೆ ಸಲ್ಲಿಸುವ ಮೂಲಕ ವಿಷ ಪ್ರಸಾದ ಸ್ವೀಕರಿಸಿ ಅಪಾಯದ ಸುಳಿಗೆ ಸಿಲುಕಿದ್ದವರ ಪ್ರಾಣ ಉಳಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಶುಕ್ರವಾರ ಕೊಳ್ಳೇಗಾಲ, ಹನೂರು ಸೇರಿದಂತೆ ಚಾಮರಾಜನಗರ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಅಸ್ವಸ್ಥರನ್ನು ಕರೆತರಲಾಗಿತ್ತು. ಹಿನ್ನೆಲೆಯಲ್ಲಿ ಅಸ್ವಸ್ಥರ ಸಂಬಂಧಿಗಳು ಆಸ್ಪತ್ರೆಗೆ ಬಂದಿರಲಿಲ್ಲ. ಇಂದು ಹನೂರು ಸುತ್ತಮುತ್ತಲಿನ ಕೆಲವು ಗ್ರಾಮಸ್ಥರು ಹಾಗೂ ಅಸ್ವಸ್ಥರ ಸಂಬಂಧಿಗಳು ಇಂದು ಕೆ.ಆರ್.ಆಸ್ಪತ್ರೆ ಬಳಿ ಬಂದು ತಮ್ಮವರನ್ನು ನೋಡಲು ಪರದಾಡಿದರು. ಇದರಿಂದ ಕೆ.ಆರ್.ಆಸ್ಪತ್ರೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

ಗಣ್ಯರ ದಂಡು: ಕೆ.ಆರ್.ಆಸ್ಪತ್ರೆಗೆ ಇಂದು ಗಣ್ಯರು ಭೇಟಿ ನೀಡಿ, ವಿಷ ಪ್ರಸಾದ ತಿಂದು ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಶುಕ್ರವಾರ ಸಂಜೆಯಿಂದಲೇ ಆಸ್ಪತ್ರೆಯ ಬಳಿ ವಾಸ್ತವ್ಯ ಹೂಡಿದ್ದ ಸಚಿವ ಸಿ.ಎಸ್.ಪುಟ್ಟರಾಜು, ಇಂದು ಬೆಳಿಗ್ಗೆಯೂ ಕೆ.ಆರ್.ಆಸ್ಪತ್ರೆಯ ಬಳಿ ಸಾಕಷ್ಟು ಹೊತ್ತು ಇದ್ದರು.

ನಂತರ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ನಿರಂಜನಮೂರ್ತಿ, ಮಾಜಿ ಸಚಿವ ಎನ್.ಮಹೇಶ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸಿ.ಜೆ. ಮಹಮದ್ ಮುಜೀರುಲ್ಲ, ಚಾಮರಾಜನಗರ ಡಿಸಿ ಕಾವೇರಿ, ಎಡಿಸಿ ಸಿ.ಎಲ್.ಆನಂದ್, ಬಿಜೆಪಿ ನಗರಾಧ್ಯಕ್ಷ ಡಾ. ಬಿ.ಹೆಚ್.ಮಂಜುನಾಥ್, ಬಿಷಪ್ ಡಾ.ವಿಲಿಯಮ್ಸ್, ಮೈಸೂರು ಡಿಹೆಚ್‍ಒ ಡಾ.ಬಿ.ಬಸವರಾಜು, ತಹಶೀಲ್ದಾರ್ ಟಿ.ರಮೇಶ್ ಬಾಬು ಸೇರಿದಂತೆ ಇನ್ನಿತರರು ಆಸ್ಪತ್ರೆಗೆ ಆಗಮಿಸಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.

ಮುಂದುವರೆದ ಆತಂಕ: ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ಶನಿವಾರವೂ ಆತಂಕದ ವಾತಾವರಣ ಮುಂದುವರೆದಿತ್ತು. ಪೊಲೀಸರು ಹೈ-ಅಲರ್ಟ್ ಮುಂದುವರೆಸಿದ್ದರು. ಅಸ್ವಸ್ಥರನ್ನು ನೋಡುವುದಕ್ಕೆಂದು ಬರುವವರನ್ನು ವಾಪಸ್ಸು ಕಳುಹಿಸುತ್ತಿದ್ದರು. ಇಂದು ಬೆಳಗ್ಗಿನಿಂದ ಗಣ್ಯರು ಆಸ್ಪತ್ರೆಗೆ ಬಂದ ಕಾರಣ ಬಿಗಿಭದ್ರತೆ ಕಲ್ಪಿಸಿದ್ದರಿಂದ ತಪಾಸಣೆಗೆಂದು ಬಂದ ರೋಗಿಗಳಿಗೆ ಅಡಚಣೆ ಉಂಟಾಗುತ್ತಿತ್ತು.

Translate »