ಮೈಸೂರಲ್ಲಿ ಟೆಂಟ್ ಟೂರಿಸಂ
ಮೈಸೂರು

ಮೈಸೂರಲ್ಲಿ ಟೆಂಟ್ ಟೂರಿಸಂ

July 1, 2018
  • ದಸರಾ ಸಂದರ್ಭದಲ್ಲಿ ಪ್ರವಾಸಿಗರ ಆಕರ್ಷಣೆಗೆ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಮುಂಭಾಗ ನೂರಾರು ಟೆಂಟ್‍ಗಳ ನಿರ್ಮಾಣ: ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೊಸ ಚಿಂತನೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರಿಗೆ ವಿವಿಧೆಡೆಯಿಂದ ಆಗಮಿಸುವ ಪ್ರವಾಸಿಗರಿಗಾಗಿ ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಮುಂಭಾಗ ಮೈದಾನದಲ್ಲಿ `ಟೆಂಟ್ ಟೂರಿಸಂ’ಗೆ ನಿರ್ಧರಿಸಲಾಗಿದ್ದು, ಈ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುತ್ತದೆ ಎಂದು ಪ್ರವಾಸೋಧ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಮೈಸೂರಿಗೆ ಆಗಮಿಸುವ ಪ್ರವಾಸಿಗರು ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದಾರೆ. ದಸರಾ ಮಹೋತ್ಸವದ ಸಂದರ್ಭದಲ್ಲಿ ಟೆಂಟ್ ನಿರ್ಮಿಸಲಾಗುತ್ತದೆ. ಇದರಿಂದ ಒಂದು ದಿನ ಮೈಸೂರಿನಲ್ಲಿಯೇ ಪ್ರವಾಸಿಗರು ವಾಸ್ತವ್ಯ ಹೂಡಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿಯೇ ಟೆಂಟ್ ಟೂರಿಸಂ ಅನ್ನು ಮೊದಲ ಬಾರಿಗೆ ಮೈಸೂರಿನಲ್ಲಿ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಟೆಂಟ್ ನಿರ್ಮಾಣ ಹಾಗೂ ಪ್ರವಾಸಿಗರಿಗೆ ವಿವಿಧ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನು ಜಂಗಲ್ ಲಾಡ್ಜಸ್ ಹಾಗೂ ರೆಸಾಟ್ರ್ಸ್‍ಗೆ ನೀಡುವುದಕ್ಕೆ ಚಿಂತಿಸಲಾಗಿದೆ. ಈ ಯೋಜನೆಯ ಅಂದಾಜು ವೆಚ್ಚ ಹಾಗೂ ಕ್ರಿಯಾ ಯೋಜನೆಯನ್ನು ಶೀಘ್ರವೇ ತಯಾರಿಸಲಾಗುತ್ತದೆ ಎಂದು ಹೇಳಿದರು.

ಕೆಆರ್‍ಎಸ್‍ಗೆ ಕಾಯಕಲ್ಪ: ಪ್ರಸಿದ್ದ ಪ್ರವಾಸಿ ತಾಣವೂ ಆಗಿರುವ ಕೆಆರ್‍ಎಸ್‍ನಲ್ಲಿರುವ ಬೃಂದಾವನಕ್ಕೂ ಕಾಯಕಲ್ಪ ನೀಡಲು ತೀರ್ಮಾನಿಸಲಾಗಿದೆ. ಅಲ್ಲಿರುವ ನೀರಿನ ಕಾರಂಜಿಗಳನ್ನು (ಫೌಂಟೇನ್) ಹಲವಾರು ವರ್ಷದ ಹಿಂದೆ ನಿರ್ಮಾಣ ಮಾಡಲಾಗಿದೆ. ನಾವು ಚಿಕ್ಕವರಿದ್ದಾಗ ಇದ್ದ ಫೌಂಟೇನ್‍ಗಳೇ ಇಂದಿಗೂ ಇವೆ. ಈ ಹಿನ್ನೆಲೆಯಲ್ಲಿ ಹೊಸ ಫೌಂಟೇನ್ ನಿರ್ಮಾಣ ಮಾಡುವುದರೊಂದಿಗೆ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಬೃಂದಾವನ ಗಾರ್ಡನ್ ಅನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಈಗಾಗಲೇ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದು, ಕೆಆರ್‍ಎಸ್ ಗಾರ್ಡನ್ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.

ಕಳೆದ ಒಂದೂವರೆ ತಿಂಗಳ ಹಿಂದೆ ಬಿರುಗಾಳಿ ಸಹಿತ ಮಳೆಯಿಂದಾಗಿ ಮರಬಿದ್ದು ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೆಆರ್‍ಎಸ್‍ನಲ್ಲಿ ಆಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸಾ ಘಟಕ ನಿರ್ಮಿಸುವಂತೆ ಸೂಚಿಸುತ್ತೇನೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕೆಆರ್‍ಎಸ್‍ನಲ್ಲಿ ಪ್ರವಾಸಿಗರ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಶೌಚಾಲಯದಿಂದ ಮುಜುಗರ: ಮೈಸೂರಿನ ವಿವಿಧೆಡೆ ನಗರ ಪಾಲಿಕೆ ವತಿಯಿಂದ ನಿರ್ಮಿಸಿರುವ ಇ-ಶೌಚಾಲಯ ಜನರನ್ನು ಮುಜುಗರಕ್ಕೀಡು ಮಾಡುತ್ತಿದೆ. ರಸ್ತೆಯ ಬದಿಯಲ್ಲಿ ಇ-ಶೌಚಾಲಯವನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಯಾರು ಹೋಗುತ್ತಾರೆ? ಯಾರು ಬರುತ್ತಾರೆ? ಎಂಬುದನ್ನು ದಾರಿ ಹೋಕರು ನೋಡುವುದರಿಂದ ಮಹಿಳೆಯರು ಸೇರಿದಂತೆ ಎಲ್ಲರಿಗೂ ಮುಜುಗರವಾಗುತ್ತಿದೆ. ಹಾಗಾಗಿ ಶೌಚಾಲಯಕ್ಕೆ ಹೋಗುವುದಕ್ಕೆ ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ, ಇ-ಶೌಚಾಲಯ ಎಲ್ಲೆಲ್ಲಿ ಇದೆಯೋ ಅದರ ಸುತ್ತ ಗೋಡೆ ನಿರ್ಮಿಸಿ, ಶೌಚಾಲಯ ಪ್ರವೇಶಿಸುವುದು ಕಾಣದಂತೆ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದರು.

Translate »