ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕಾರ್ಯಾಗಾರ
ಮಂಡ್ಯ

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕಾರ್ಯಾಗಾರ

March 16, 2019

ಕೆ.ಆರ್.ಪೇಟೆ: ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ನಿರ್ಣಾಯಕ ಘಟ್ಟವಾಗಿದೆ. ಹಾಗಾಗಿ ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಬೇಕು. ಪರೀಕ್ಷಾ ಭಯವನ್ನು ಬಿಟ್ಟು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಬೇಕು ಎಂದು ಆದಿ ಚುಂಚನಗಿರಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಸಿದ್ದತಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾ.21ರಿಂದ ಆರಂಭವಾಗುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿ ಗಳಿಗೆ ಪರೀಕ್ಷಾ ಪ್ರವೇಶ ಪತ್ರವನ್ನು ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಮೊದಲು ಪರೀಕ್ಷಾ ಭಯದಿಂದ ಹೊರಬರ ಬೇಕು. ಆತ್ಮವಿಶ್ವಾಸವನ್ನು ಪಾಠ ಪ್ರವಚನಗಳನ್ನು ಓದಿಕೊಂಡು ಮನನ ಮಾಡಿಕೊಳ್ಳಬೇಕು. ತರಗತಿಗಳಲ್ಲಿ ಶಿಕ್ಷಕರಿಂದ ಕೇಳಿ ಕಲಿತ ಪಾಠ-ಪ್ರವಚನಗಳನ್ನು ಹಲವು ಸಲ ಓದಿ ಮತ್ತು ಬರೆದು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಲು ಸಿದ್ಧರಾಗಬೇಕು. ಉತ್ತಮ ಜ್ಞಾನ ಇದ್ದರೂ ಸಹ ವಿದ್ಯಾರ್ಥಿಗಳು ಭಯದಿಂದ ಪರೀಕ್ಷೆಯಲ್ಲಿ ಸರಿಯಾಗಿ ಬರೆಯದೇ ಕಡಿಮೆ ಅಂಕ ಪಡೆಯು ತ್ತಿದ್ದಾರೆ. ಯಾರು ಭಯಬಿಟ್ಟು ಪರೀಕ್ಷೆ ಬರೆಯುತ್ತಾರೋ ಅವರು ಹೆಚ್ಚು ಅಂಕ ಗಳಿಸುತ್ತಾರೆ. ಪರೀಕ್ಷೆಯಲ್ಲಿ ಮೊದಲು ಎಲ್ಲಾ ಪ್ರಶ್ನೆಗಳನ್ನು ಓದಬೇಕು. ನಂತರ ಚೆನ್ನಾಗಿ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ನಂತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಆಲೋಚಿಸಿ ಉತ್ತರ ಬರೆಯಬೇಕು. ಅಕ್ಷರವನ್ನು ಗುಂಡಾಗಿ ಬರೆಯಬೇಕು ಎಂದರು.

ಮೊದಲ ಪ್ರಶ್ನೆ ಕಠಿಣವಾಗಿದ್ದರೆ 2ನೇ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಬೇಕು. ಅದೂ ಕಠಿಣವಾಗಿದ್ದರೆ ಮೂರನೆ ಪ್ರಶ್ನೆಗೆ ಉತ್ತರ ಬರೆಯಲು ಮುಂದಾಗಬೇಕು. ಮೊದಲ ಪ್ರಶ್ನೆಯೇ ಕಠಿಣವಾಗಿದೆಯಲ್ಲ ಎಂದು ಅನಗತ್ಯವಾಗಿ ಭಯಪಡದೇ ಧೈರ್ಯದಿಂದ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಾ ಹೋಗಬೇಕು. ನಿದ್ರೆಗೆಟ್ಟು, ಊಟಬಿಟ್ಟು ಓದಬಾರದು. ಎಂದಿನಂತೆ ಸರಿಯಾದ ಸಮಯಕ್ಕೆ ಊಟ-ನಿದ್ರೆ ಮಾಡಿ ಪರೀಕ್ಷೆಗೆ ಓದಬೇಕು. ಪರೀಕ್ಷಾ ಸಮಯದಲ್ಲಿ ಟಿವಿ, ಮೊಬೈಲ್‍ಗಳಿಂದ ದೂರವಿರಬೇಕು. ಅಗತ್ಯವಿದ್ದರೆ ಪತ್ರಿಕೆಗಳನ್ನು ಓದಬೇಕು. ಈ ಮೂಲಕ ಉತ್ತಮ ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು ಎಂದು ಡಾ.ಜೆ.ಎನ್.ರಾಮಕೃಷ್ಣೇಗೌಡ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಯೋಗರಾಜ್, ಪ್ರಾಂಶುಪಾಲ ಪ್ರಸಾದೇಗೌಡ, ಆದಿಚುಂಚನ ಗಿರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವಿ, ಎಸ್.ಎಂ.ಲಿಂಗಪ್ಪ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರ್ಪಿತಾ, ಹೇಮಗಿರಿ ಬಿಜಿಎಸ್ ಮುಖಯ ಶಿಕ್ಷಕಿ ಪವಿತ್ರ, ಶಿಕ್ಷಕರಾದ ಚಿಕ್ಕೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »