ಬೆಂಗಳೂರು, ಜು.11(ಕೆಎಂಶಿ)-ಕಾನೂನು ಅಂಶಗಳನ್ನು ಅಸ್ತ್ರವಾಗಿಟ್ಟುಕೊಂಡು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಇಂದಿಲ್ಲಿ ಸೇರಿದ್ದ ಸಂಪುಟ ಸಭೆ ನಿರ್ಧರಿಸಿದೆ.
ಕೆಲ ಇಲಾಖೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಅನುಮೋದನೆ ನೀಡಿದ ನಂತರ ಮೈತ್ರಿ ಸರ್ಕಾರ ಉಳಿಸಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಸಹೋದ್ಯೋಗಿಗಳು ಹಾಗೂ ಕಾನೂನು ಇಲಾಖಾ ಅಧಿಕಾರಿಗಳೊಟ್ಟಿಗೆ ಚರ್ಚೆ ನಡೆಸಿದ ನಂತರ ಈ ತೀರ್ಮಾ ನಕ್ಕೆ ಬಂದಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಇಂತಹದ್ದೇ ಪರಿಸ್ಥಿತಿ ಅವರಿಗೆ ಎದುರಾಗಿತ್ತು. ಅಂತಹ ಸನ್ನಿವೇಶದಲ್ಲಿ ಅವರು ಬಳಸಿದ ಅಸ್ತ್ರಗಳನ್ನೇ ಪ್ರತಿ ಅಸ್ತ್ರವಾಗಿ ಬಳಕೆ ಮಾಡಿ, ಪ್ರತಿಪಕ್ಷವನ್ನು ಕಟ್ಟಿ ಹಾಕಲು ನಿರ್ಧರಿಸಿದೆ. ಮೈತ್ರಿ ಪಕ್ಷಗಳ ಸದಸ್ಯರು ವಿಧಾನ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರಬಹುದು. ಆದರೆ, ಅವು ಅಂಗೀಕಾರ ಆಗುವವರೆಗೂ ಅವರು ಪಕ್ಷಗಳ ಸದಸ್ಯರೇ ಆಗಿರುತ್ತಾರೆ. ಅಧಿವೇಶನ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸಭಾ ನಾಯಕರು ವ್ಹಿಪ್ ನೀಡುವ ತೀರ್ಮಾನ ಕೈಗೊಂಡಿದ್ದಾರೆ.
ವ್ಹಿಪ್ ನೀಡಿದ ನಂತರ ಸದಸ್ಯರ ರಾಜೀನಾಮೆ ಅಂಗೀ ಕಾರವಾಗದಿದ್ದರೆ ಅಂತಹ ಶಾಸಕರು ಸದನಕ್ಕೆ ಹಾಜರಾಗಿ ಸರ್ಕಾರ ಮತ್ತು ಪಕ್ಷದ ನಿರ್ಧಾರಗಳಿಗೆ ಬದ್ಧರಾಗಬೇಕಾ ಗುತ್ತದೆ. ಒಂದು ವೇಳೆ ವ್ಹಿಪ್ ಉಲ್ಲಂಘಿಸಿದಲ್ಲಿ ಅವರ ಸದಸ್ಯತ್ವ ಅನರ್ಹಗೊಳ್ಳುವುದರ ಜೊತೆಗೆ ಮುಂದೆ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ಯಡಿಯೂರಪ್ಪ ಇದೇ ಅಸ್ತ್ರ ಬಳಕೆ ಮಾಡಿಕೊಂಡು ಅಧಿಕಾರ ಉಳಿಸಿಕೊಂಡಿದ್ದರು. ನಾಳೆ ಆರಂಭಗೊಳ್ಳುವ ವಿಧಾನ ಮಂಡಲ ಅಧಿವೇಶನದಲ್ಲೂ ಇದೇ ಅಸ್ತ್ರವನ್ನು ನಾವೂ ಬಳಕೆ ಮಾಡಿಕೊಳ್ಳೋಣ ಎಂಬ ನಿರ್ಧಾರಕ್ಕೆ ಸಂಪುಟ ಬಂದಿದೆ. ಸಂಕಷ್ಟ ಸ್ಥಿತಿಯಲ್ಲಿದ್ದೇವೆ. ಆದರೂ ನಾವಾಗಿಯೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದು ಬೇಡ. ಒಂದು ವೇಳೆ ಪ್ರತಿಪಕ್ಷ ಬಿಜೆಪಿ ವಿಶ್ವಾಸಮತ ಬಯಸಿದರೆ, ಒಗ್ಗಟ್ಟಿನಿಂದ ಎದುರಿಸೋಣ ಎಂದು ಒಂದೇ ಧ್ವನಿಯಲ್ಲಿ ಸಚಿವರುಗಳು ಮುಖ್ಯಮಂತ್ರಿ ಯವರಿಗೆ ಅಭಯ ನೀಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಏನೇ ಆದೇಶ ನೀಡಿದರೂ, ಅದನ್ನು ಪಾಲಿಸಲು ಸರ್ಕಾರ ಸಿದ್ಧವಿದೆ. ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಯಾವುದೇ ಸ್ಪಷ್ಟ ಆದೇಶ ನೀಡಿಲ್ಲ. ಎಲ್ಲವನ್ನೂ ಸಭಾಧ್ಯಕ್ಷರ ಅಂಗಳಕ್ಕೆ ಬಿಟ್ಟಿದೆ. ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಉಭಯ ಪಕ್ಷಗಳು ಮತ್ತು ಆಯಾ ಕ್ಷೇತ್ರದ ಮತದಾರರು ಹಾಗೂ ಸಾರ್ವಜನಿಕರು ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ.
ಈ ದೂರುಗಳ ಬಗ್ಗೆಯು ಸಭಾಧ್ಯಕ್ಷರು ಪರಿಶೀಲನೆ ಮಾಡಿದ ನಂತರವೇ ಅವರ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ನಾವು ಸಂಕಷ್ಟದಲ್ಲಿದ್ದರೂ, ಸದ್ಯಕ್ಕೆ ಸರ್ಕಾರ ಉಳಿಸಿಕೊಳ್ಳಲು ಯಾವುದೇ ತೊಂದರೆಯಿಲ್ಲ. ಇದರ ನಡುವೆ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ಕಾರ್ಯ ಮುಂದುವರಿಸೋಣ ಎಂಬ ತೀರ್ಮಾನಕ್ಕೆ ಮುಖ್ಯಮಂತ್ರಿಗಳು ಬಂದಿದ್ದಾರೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ, ಸರ್ಕಾರ ಸಂದಿಗ್ದ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಾಗಿ ದ್ದೇವೆ. ಪ್ರತಿಪಕ್ಷ ಬಿಜೆಪಿ ಕೇಂದ್ರದ ಆಸರೆಯನ್ನು ಪಡೆದುಕೊಂಡು ನಮ್ಮ ಸರ್ಕಾರದ ಮೇಲೆ ಸತತ ದಾಳಿ ನಡೆಸುತ್ತಲೇ ಇದೆ. ಹಿಂದಿನ ದಾಳಿಗಳನ್ನು ನಾವು ಸಮರ್ಥವಾಗಿ ಎದುರಿಸಿದ್ದೇವೆ. ಇದೀಗ ಮತ್ತೆ ಏಳನೇ ಬಾರಿ ದಾಳಿ ನಡೆಸಿದ್ದಾರೆ. ಇದು ಗಂಭೀರ ದಾಳಿ. ಇದರ ಸಾಧಕ ಬಾಧಕಗಳ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿ, ಪ್ರತಿಪಕ್ಷ ಬಿಜೆಪಿಯೊಡ್ಡಿರುವ ಸವಾಲನ್ನು ಮತ್ತೆ ಎದುರಿಸಲು ಒಗ್ಗಟ್ಟಿನಿಂದ ತೀರ್ಮಾನ ಕೈಗೊಂಡಿದ್ದೇವೆ. ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವುದರ ಜೊತೆಗೆ ಸರ್ಕಾರ ಉಳಿಸಿಕೊಳ್ಳಲು ಉಳಿದ ಎಲ್ಲಾ ಪ್ರಯತ್ನಗಳನ್ನು ಬಳಸಲು ನಿರ್ಧ ರಿಸಿ, ಸಂಘಟನಾತ್ಮಕವಾಗಿ ಹೋರಾಟ ನಡೆಸುತ್ತೇವೆ ಎಂದರು.