ಮನೆಗಳ್ಳತನ ಮಾಡಿದ್ದ ಆರೋಪಿ ಬಂಧನ
ಚಾಮರಾಜನಗರ

ಮನೆಗಳ್ಳತನ ಮಾಡಿದ್ದ ಆರೋಪಿ ಬಂಧನ

July 19, 2018

ಗುಂಡ್ಲುಪೇಟೆ: ಕೊಲೆ, ಅಪಹರಣ ಪ್ರಕರಣ ಸೇರಿದಂತೆ ಹಲವು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯ ವಾಸಿ ರಾಮಚಂದ್ರ ಎಂಬುವರ ಮಗ ನಂದೀಶ್ ಅಲಿಯಾಸ್ ಕಾರದಪುಡಿ(24) ಬಂಧಿತ ಆರೋಪಿ. ಈತ ಪಟ್ಟಣದ 16ನೇ ವಾರ್ಡಿನಲ್ಲಿ ಸತೀಶ್ ಎಂಬುವರ ಮನೆಯಲ್ಲಿ, ಅಶ್ವಿನಿ ಬಡಾವಣೆಯ ಚಿದಂಬರ ಎಂಬುವರ ಮನೆಯ ಬಾಗಿಲನ್ನು ಮುರಿದು ಕಳ್ಳತನ ಮಾಡಿ ತಲೆ ಮರೆಸಿ ಕೊಂಡಿದ್ದ. ಇದಲ್ಲದೆ ಈತ ಮಳವಳ್ಳಿಯಲ್ಲಿನ ಕೊಲೆ ಪ್ರಕರಣ, ಮದ್ದೂರಿನಲ್ಲಿ ಅಪಹರಣ ಪ್ರಕರಣ ಸೇರಿದಂತೆ ಹಲವು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಅಡಿಷನಲ್ ಎಸ್.ಪಿ. ಎಂ.ಎನ್.ಗೀತಾ ಮತ್ತು ಡಿಎಸ್‍ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಈತನಿಂದ ಸುಮಾರು 70 ಸಾವಿರ ರೂಪಾಯಿ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Translate »