ಚಿರತೆ ಕೊಂದ ಜಿಂಕೆ ಕಳೇಬರ ಸಾಗಾಣೆ: ಇಬ್ಬರ ಬಂಧನ
ಚಾಮರಾಜನಗರ

ಚಿರತೆ ಕೊಂದ ಜಿಂಕೆ ಕಳೇಬರ ಸಾಗಾಣೆ: ಇಬ್ಬರ ಬಂಧನ

July 19, 2018

ಗುಂಡ್ಲುಪೇಟೆ:  ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಚಿರತೆ ಬೇಟೆಯಾಡಿದ್ದ ಜಿಂಕೆಯ ಕಳೇಬರವನ್ನು ಕೊಂಡೊ ಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮಂಗಳವಾರ ತಡರಾತ್ರಿ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಗೊಳಪಡುವ ಓಂಕಾರ್ ಅರಣ್ಯ ವಲಯದ ಕಾಡಂಚಿನ ಗ್ರಾಮವಾದ ಸವಕನಹಳ್ಳಿ ಬಳಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ ಕೊಂದು ಸ್ವಲ್ಪ ಭಾಗವನ್ನು ತಿಂದಿತ್ತು, ಚಿರತೆಯು ಕೊಂದಿದ್ದ ಜಿಂಕೆಯ ಕಳೇಬರವನ್ನು ಸಮೀಪದ ಮಂಚಹಳ್ಳಿ ಗ್ರಾಮದ ವಾಸಿ ಮಹದೇವಯ್ಯ ಹಾಗೂ ಬೇರಂಬಾಡಿ ಗ್ರಾಮದ ವಾಸಿ ಕೃಷ್ಣನಾಯ್ಕ ನೋಡಿ ಉಳಿದ ಜಿಂಕೆಯ ಮೃತದೇಹವನ್ನು ತಮ್ಮ ಎತ್ತಿನ ಗಾಡಿಯಲ್ಲಿ ಹಾಕಿ ಕೊಂಡೊಯ್ಯುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಓಂಕಾರ್ ಆರ್‍ಎಫ್‍ಒ ಎನ್.ಪಿ. ನವೀನ್ ಕುಮಾರ್, ಡಿಆರ್‍ಎಫ್‍ಓ ಮೈಲಾರಪ್ಪ ಮತ್ತು ಸಿಬ್ಬಂದಿಗಳು ಇಬ್ಬರು ಆರೋಪಿ ಗಳನ್ನು, ಎತ್ತು ಮತ್ತು ಗಾಡಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳನ್ನು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗಳಾದ ಶಿವಣ್ಣನಾಯ್ಕ, ಶ್ರೀಕಂಠ, ಮಹದೇವು, ಬಸವರಾಜು ಭಾಗವಹಿಸಿದ್ದರು.

Translate »