ಆಪರೇಷನ್ ಕಮಲ ಮೂಲಕ  ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಯತ್ನ
ಮೈಸೂರು

ಆಪರೇಷನ್ ಕಮಲ ಮೂಲಕ  ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಯತ್ನ

September 13, 2018

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರದೇಶ ಕಾಂಗ್ರೆಸ್, ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಮುಖ್ಯಸ್ಥರಿಗೆ ದೂರು ನೀಡಲು ಮುಂದಾಗಿದೆ.

ಕಾಂಗ್ರೆಸ್ ಸಿದ್ಧಪಡಿಸಿರುವ ದೂರಿನಂತೆ ಕಳೆದ ಕೆಲವು ದಿನಗಳಿಂದ ಈ ಜನಪ್ರಿಯ ಸರ್ಕಾರವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷವಾದ ಬಿಜೆಪಿಯ ಕೆಲವು ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ವಿಜೇಂದ್ರ, ಪಕ್ಷದ ನಾಯಕರಾದ ಸತೀಶ್ ರೆಡ್ಡಿ, (ಶಾಸಕರು) ಸಿಪಿ ಯೋಗೇಶ್ವರ್ (ಮಾಜಿ ಶಾಸಕರು) ಡಾ. ಅಶ್ವತ್ಥ್‍ನಾರಾಯಣ್ (ಶಾಸಕರು) ಸೇರಿದಂತೆ ಹಲವಾರು ನಾಯಕರು ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಿಗೆ ಕೋಟಿ ಕೋಟಿ ರೂಪಾಯಿಗಳ ಆಮಿಷವನ್ನೊಡ್ಡುವ ಮೂಲಕ ಭ್ರಷ್ಟಾಚಾರಕ್ಕೆ ಪ್ರೇರೇಪಿಸುತ್ತಿದ್ದಾರೆ.

ಇದಲ್ಲದೇ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ನೀಡುವುದಾಗಿಯೂ ಆಮಿಷವನ್ನೊಡ್ಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರ ಚಲನವಲನಗಳ ಮೇಲೆ ಕಣ್ಗಾವಲು ಇರಿಸಿ ಮತ್ತು ಅವರ ಹಣಕಾಸು ವ್ಯವಹಾರಗಳ ಬಗ್ಗೆ ಆಮೂಲಾಗ್ರವಾಗಿ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ.

ಒಂದು ಸುಭದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿರುವ ಈ ನಾಯಕರ ವಿರುದ್ಧ ಕ್ರಮ ಕೈಗೊಂಡು ಸಂವಿಧಾನದ ಗೌರವ ವನ್ನು ಕಾಪಾಡಬೇಕೆಂದೂ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿ ನಾಯಕರು ಮಾಡುತ್ತಿರುವ ಕುದುರೆ ವ್ಯಾಪಾರಕ್ಕೆ ಸಂಬಂಧಿಸಿ ದಂತೆ ರಾಜ್ಯದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದ್ದು, ಈ ವರದಿಗಳನ್ನೂ ಪೂರಕ ಆಧಾರವಾಗಿಟ್ಟುಕೊಂಡು ತಕ್ಷಣ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇವೆ.

Translate »