ಮದಗಜ ಗೋಪಾಲಸ್ವಾಮಿ ದಸರಾಗೆ ಗೈರು
ಮೈಸೂರು

ಮದಗಜ ಗೋಪಾಲಸ್ವಾಮಿ ದಸರಾಗೆ ಗೈರು

September 13, 2018
  • ಸೆ.14ರಂದು ದಸರಾ ಗಜಪಡೆ ಎರಡನೇ ತಂಡ
  • ಅಂತಿಮ ಕ್ಷಣದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಪ್ರಶಾಂತ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.14ರಂದು ಸಂಜೆ ದಸರಾ ಗಜಪಡೆ ಎರಡನೇ ತಂಡದ ಆರು ಆನೆಗಳು ಮೈಸೂರು ಅರಮನೆ ಆವರಣ ಪ್ರವೇಶಿಸಲಿದ್ದು, ಈ ವೇಳೆ ಆಗ ಮಿಸಬೇಕಾಗಿದ್ದ 35 ವರ್ಷದ ಗೋಪಾಲಸ್ವಾಮಿಗೆ ಮದವೇರಿದ್ದು, ಅದನ್ನು ಕೈಬಿಟ್ಟು ವಿಶೇಷ ಅನು ಮತಿ ಪಡೆದು ಪ್ರಶಾಂತನನ್ನು ಕರೆತರಲಾಗುತ್ತಿದೆ.

ಈಗಾಗಲೇ ಸೆ.2ರಂದು ಮೊದಲ ತಂಡದಲ್ಲಿ ಗಜಪಡೆ ನಾಯಕ ಅರ್ಜುನ, ಚೈತ್ರ, ವರಲಕ್ಷ್ಮೀ ವಿಕ್ರಮ, ಗೋಪಿ, ಧನಂಜಯ ಮೈಸೂರಿಗೆ ಆಗ ಮಿಸಿ, ಸೆ.5ರಂದು ಅರಮನೆ ಆವರಣ ಪ್ರವೇಶಿಸಿ ದ್ದವು. ರಾಮನಗರದಲ್ಲಿ ಜನರಿಗೆ ಉಪಟಳ ನೀಡು ತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆಗೆ ಬಲರಾಮ, ಅಭಿಮನ್ಯು, ದ್ರೋಣನನ್ನು ಕರೆದೊಯ್ಯಲಾಗಿದ್ದ ಕಾರಣ ಈ ಮೂರು ಆನೆಗಳು ಮೊದಲ ತಂಡದಲ್ಲಿ ಬರಲಾಗಲಿಲ್ಲ. ಅವುಗಳ ಬದಲಾಗಿ ವಿಕ್ರಮ, ಗೋಪಿ ಹಾಗೂ ಇದೇ ಮೊದಲ ಬಾರಿಗೆ ಧನಂಜಯನನ್ನು ಮೊದಲ ತಂಡದಲ್ಲಿ ಕರೆತರಲಾಗಿತ್ತು. ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಆನೆಗಳಿಗೂ ತಾಲೀಮಿನೊಂದಿಗೆ ಪೌಷ್ಟಿಕ ಆಹಾರ ನೀಡಿ ಸಜ್ಜುಗೊಳಿಸಬೇಕಾಗಿರುವುದರಿಂದ ಸೆ.14ರಂದು ಎರಡನೇ ತಂಡದ ಆರು ಆನೆಗಳ ಕರೆತರಲಾಗುತ್ತಿದೆ.

ಎಲ್ಲಿಂದ, ಯಾವ ಆನೆ: ಸತತ 13 ಬಾರಿ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸೈ ಎನಿಸಿಕೊಂಡಿದ್ದ ಬಲರಾಮ (60) ಮತ್ತಿಗೋಡು ಆನೆ ಶಿಬಿರದಿಂದ, 19 ವರ್ಷದಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಹತ್ತಾರು ವರ್ಷ ಆನೆ ಗಾಡಿ ಎಳೆಯುತ್ತಿದ್ದ ಅಭಿಮನ್ಯು(52), ಕಳೆದ 7 ವರ್ಷದಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ದುಬಾರೆ ಆನೆ ಶಿಬಿರದ ಕಾವೇರಿ(40), 11 ವರ್ಷದ ಅನುಭವವುಳ್ಳ ದುಬಾರೆ ಶಿಬಿರದ ವಿಜಯ(61), 2ನೇ ಬಾರಿಗೆ ಆಗಮಿಸುತ್ತಿರುವ ದ್ರೋಣ (37)ಮತ್ತಿಗೋಡು ಶಿಬಿರ, ದಸರಾದಲ್ಲಿ 12 ವರ್ಷ ಪಾಲ್ಗೊಂಡರೂ, ಈ ಬಾರಿ ಗೋಪಾಲಸ್ವಾಮಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ.

ಈತನ ಬದಲು ದುಬಾರೆ ಆನೆ ಶಿಬಿರದ ಪ್ರಶಾಂತ(62) ಬರುತ್ತಿದ್ದಾರೆ. ಸೆ.14ರಂದು ಸಂಜೆ ವೇಳೆಗೆ ಅರಮನೆ ಆವರಣಕ್ಕೆ ಆಗಮಿಸಲಿದ್ದು, ಈ ಎಲ್ಲಾ ಆನೆಗಳಿಗೆ ಅರಣ್ಯ ಇಲಾಖೆ ಹಾಗೂ ಅರಮನೆಯ ಆಡಳಿತ ಮಂಡಳಿ ವತಿಯಿಂದ ಸ್ವಾಗತ ಕೋರಲಾಗುತ್ತದೆ.

Translate »