ಮುಂಬೈ:ಈವರೆಗೂ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ-ಶಿವಸೇನೆ ಲೋಕ ಸಭಾ ಚುನಾವಣೆಗೆ ಮತ್ತೆ ಮೈತ್ರಿ ಮಾಡಿಕೊಂಡಿದ್ದು, ಸ್ಥಾನ ಹಂಚಿಕೆಯನ್ನೂ ಘೋಷಣೆ ಮಾಡಿವೆ. ಫೆ.18ರಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಲೋಕಸಭಾ ಚುನಾವಣೆ ಸಂಬಂಧ ನಡೆಸಿರುವ ಮಾತುಕತೆ ಯಶಸ್ವಿಯಾಗಿದ್ದು, ಬಿಜೆಪಿ ಮಹಾರಾಷ್ಟ್ರದಲ್ಲಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಶಿವಸೇನೆ 23 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಬಿಜೆಪಿ ಹಾಗೂ ಶಿವಸೇನೆಯ ಕೋಟ್ಯಂತರ ಕಾರ್ಯಕರ್ತರು ಉಭಯ ಪಕ್ಷಗಳ ನಡುವೆ ಮೈತ್ರಿಯನ್ನು ಬಯಸುತ್ತಿದ್ದರು. ಶಿವಸೇನೆ ಬಿಜೆಪಿಯ ಅತಿ ಹಳೆಯ ಮಿತ್ರ ಪಕ್ಷ ಎಂದು ಹೇಳಿದ್ದು ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಮಹಾರಾಷ್ಟ್ರದಲ್ಲಿ 45-48 ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಸಿಎಂ ದೇವೇಂದ್ರ ಫಡ್ನವೀಸ್ ಬಿಜೆಪಿ ಶಿವಸೇನೆ ಸಮಾನ ಸಿದ್ಧಾಂತಗಳನ್ನು ಹೊಂದಿದ್ದು 2019 ರ ಲೋಕಸಭಾ ಚುನಾವಣೆ ವಿಧಾನಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸಲಿವೆ. ಬಿಜೆಪಿ ಹಾಗೂ ಶಿವಸೇನೆ ರಾಮಮಂದಿರ ವಿಚಾರದಲ್ಲಿ ಸಮಾನಮನಸ್ಕ ಪಕ್ಷಗಳಾಗಿದ್ದು ರಾಮಮಂದಿರ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿವೆ ಎಂದಿದ್ದಾರೆ.