ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನ : ನಾಲ್ವರ ಬಾಳಿಗೆ ಬೆಳಕು
ಮೈಸೂರು

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನ : ನಾಲ್ವರ ಬಾಳಿಗೆ ಬೆಳಕು

December 18, 2019

ಮೈಸೂರು,ಡಿ.17(ಪಿಎಂ)- ಅಪಘಾತಕ್ಕೆ ಒಳಗಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳು ಇದೀಗ ನಾಲ್ಕು ಜನರಿಗೆ ಮರುಜೀವ ನೀಡಿವೆ. ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಿ ನಾಲ್ವರ ಬಾಳಿಗೆ ಬೆಳಕಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರಿನ ನಿವೇದಿತನಗರದ ನಿವಾಸಿ ಚಂದ್ರಶೇಖರ್ (27) ಎಂಬ ಯುವಕನ ಹೃದಯ, ಯಕೃತ್ತು ಹಾಗೂ ಎರಡು ಮೂತ್ರ ಪಿಂಡಗಳನ್ನು ದಾನ ಮಾಡಲಾಗಿದೆ. ಡಿ.14ರ ರಾತ್ರಿ 10.30ರ ವೇಳೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗನಂ ಗೂರು ಗ್ರಾಮದ ಬಳಿ ರಸ್ತೆ ಅಪಘಾತ ದಲ್ಲಿ ಚಂದ್ರಶೇಖರ್ ಗಾಯಗೊಂಡಿದ್ದರು.

ಇವರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡ ಲಾಗಿತ್ತು. ಚಂದ್ರಶೇಖರ್ ಅವರ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ಪ್ರಮಾಣೀಕರಿಸಿ, ಅವರ ಕುಟುಂಬಕ್ಕೆ ವಿಷಯ ತಿಳಿಸಿದ್ದರು. ಚಂದ್ರಶೇಖರ್ ಕುಟುಂಬದ ಅನುಮತಿ ಮೇರೆಗೆ ಅಂಗಾಂಗಗಳನ್ನು ದಾನವಾಗಿ ಪಡೆದು ನಾಲ್ವರಿಗೆ ಮರುಜೀವ ನೀಡಲಾಗಿದೆ.

ಮಂಗಳವಾರ ಬೆಳಿಗ್ಗೆ 7ರ ವೇಳೆಯಲ್ಲಿ ಚಂದ್ರಶೇಖರ್ ಅವರ ಅಂಗಾಂಗಗಳನ್ನು ಗ್ರೀನ್ ಕಾರಿಡಾರ್ ಹಾಗೂ ಜೀರೋ ಟ್ರಾಫಿಕ್ ಮೂಲಕ ಕಳುಹಿಸಿಕೊಡ ಲಾಯಿತು. ಯಕೃತ್ತು ಅಂಗವನ್ನು ಬೆಂಗ ಳೂರಿನ ರಾಮಯ್ಯ ಆಸ್ಪತ್ರೆಗೆ ಹಾಗೂ ಒಂದು ಮೂತ್ರಪಿಂಡವನ್ನು ಬೆಂಗಳೂರಿನ ಎನ್‍ಯು ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಹೃದಯ ಹಾಗೂ ಮತ್ತೊಂದು ಮೂತ್ರಪಿಂಡವನ್ನು ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ಅಗತ್ಯವಿದ್ದ ವರಿಗೆ ಅಳವಡಿಸಲಾಗಿದೆ. ಅಂಗಾಂಗ ದಾನಕ್ಕೆ ಸಮ್ಮತಿಸಿ ನಾಲ್ವರ ಜೀವಕ್ಕೆ ಆಸರೆಯಾದ ಚಂದ್ರಶೇಖರ್ ಕುಟುಂಬಕ್ಕೆ ಅಪೋಲೋ ಆಸ್ಪತ್ರೆ ಧನ್ಯವಾದ ತಿಳಿಸಿದೆ.

Translate »